ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ ಮತ್ತು ವಂಚಿಸಿದ ಪ್ರಕರಣದಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಹಾಗೂ ಇತರ ಆರು ಮಂದಿ ವಿರುದ್ಧ ಅಮೆರಿಕದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಅದಾನಿಯನ್ನು ಬಂಧಿಸುವಂತೆ ಅಮೆರಿಕದ ನ್ಯೂಯಾರ್ಕ್ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ.
ಆಂಧ್ರಪ್ರದೇಶದ ‘ರಾಜ್ಯ ವಿದ್ಯುತ್ ವಿತರಣಾ ನಿಗಮ’ ಜೊತೆ ‘ಲಾಭದಾಯಕ ಸೌರಶಕ್ತಿ ಪೂರೈಕೆ’ಯ ಗುತ್ತಿಗೆ ಒಪ್ಪಂದವನ್ನು ಅದಾನಿ ಪಡೆದುಕೊಂಡಿದ್ದಾರೆ. ಸರ್ಕಾರಕ್ಕೆ ತಮ್ಮ ‘ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್’ ಕಂಪನಿಯಿಂದ ಏಳು ಗಿಗಾವ್ಯಾಟ್ ಸೌರ ವಿದ್ಯುತ್ ಪೂರೈಸುವ ಗುತ್ತಿಗೆ ಪಡೆದ ಅದಾನಿ, ಅದಕ್ಕೆ ಪ್ರತಿಯಾಗಿ ಅಧಿಕಾರಿಗಳಿಗೆ 2,029 ಕೋಟಿ ರೂ. ಲಂಚ ನೀಡಿದ್ದಾರೆ. ಈ ಲಂಚಕ್ಕಾಗಿ ಅಮೆರಿಕದ ಹೂಡಿಕೆದಾರರಿಗೆ ಸುಳ್ಳು ಹೇಳಿ, ಅವರಿಂದ ಹಣ ಸಂಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅದಾನಿ ಮತ್ತು ಇತರ ಏಳು ಮಂದಿಯ ವಿರುದ್ಧ ಅಮೆರಿಕದ ನ್ಯೂಯಾರ್ಕ್‌ನ ಪೂರ್ವ ಜಿಲ್ಲೆಯಲ್ಲಿರುವ US ಅಟಾರ್ನಿ ಕಚೇರಿಗೆ ಪ್ರಾಸಿಕ್ಯೂಟರ್‌ಗಳು ನವೆಂಬರ್ 20ರಂದು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಅಮೆರಿಕ ಹೂಡಿಕೆದಾರರಿಗೆ ಸುಳ್ಳು ಹೇಳಿ, ವಂಚಿಸಿದ ಕಾರಣಕ್ಕಾಗಿ ನ್ಯೂಯಾರ್ಕ್‌ನ ಪೂರ್ವ ಜಿಲ್ಲೆಯ ಉಪ ಸಹಾಯಕ ಅಟಾರ್ನಿ ಜನರಲ್ ಲಿಸಾ ಎಚ್ ಮಿಲ್ಲರ್ ಬಂಧನ ವಾರೆಂಟ್ ಹೊಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನೂ ಮಿಲ್ಲರ್ ಹೊಡಿಸಿದ್ದು, “ಗುತ್ತಿಗೆ ಮತ್ತು ಒಪ್ಪಂದಕ್ಕಾಗಿ ಹೂಡಿಕೆದಾರರು ಮತ್ತು ಅಧಿಕಾರಿಗಳ ನಡುವೆ ಶತಕೋಟಿ ರೂ. ಡೀಲಿಂಗ್ ನಡೆದಿದೆ. ಅಧಿಕಾರಿಗಳಿಗೆ ಲಂಚ ನೀಡಲು ಅಮೆರಿಕದ ಹೂಡಿಕೆದಾರರಿಂದ ಸುಳ್ಳು ಹೇಳಿ ಹಣ ಪಡೆದಿದ್ದಾರೆ. ಸತ್ಯವನ್ನು ಮರೆಮಾಚಿದ್ದಾರೆ. ಇದು, ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಗೆ ಅಡ್ಡಿಪಡಿಸುವ ಯೋಜನೆಗಳಾಗಿವೆ” ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಸೋದರಳಿಯ, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಾಗರ್ ಅದಾನಿ, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಸಿಇಒ ವಿನೀತ್ ಜೈನ್, 2019 ಮತ್ತು 2022ರ ನಡುವೆ ಅಜುರೆ ಪವರ್ ಗ್ಲೋಬಲ್ ಲಿಮಿಟೆಡ್‌ನ ಸಿಇಒ ಆಗಿದ್ದ ರಂಜಿತ್ ಗುಪ್ತಾ, 2022 ಮತ್ತು 2023ರ ನಡುವೆ ಅಜುರೆ ಪವರ್‌ನೊಂದಿಗೆ ಕೆಲಸ ಮಾಡಿದ್ದ ರೂಪೇಶ್ ಅಗರ್ವಾಲ್; ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ನ ನಾಗರಿಕರಾದ ಸಿರಿಲ್ ಕ್ಯಾಬನೆಸ್, ಸೌರಭ್ ಅಗರ್ವಾಲ್ ಹಾಗೂ ದೀಪಕ್ ಮಲ್ಹೋತ್ರಾ – ಈ ಮೂವರೂ ಕೆನಡಾ ಮೂಲದವರು – ಅದಾನಿ ಪವರ್‌ನಲ್ಲಿ ಸಾಂಸ್ಥಿಕ ಹೂಡಿಕೆದಾರರೊಂದಿಗೆ ಕೆಲಸ ಮಾಡಿದ್ದವರು. ಇವೆಲ್ಲರೂ ಪ್ರಕರಣದ ಆರೋಪಿಗಳು.
ಅಮೆರಿಕ ಪ್ರಾಸಿಕ್ಯೂಟರ್‌ಗಳ ಪ್ರಕಾರ, ‘ಇಂಡಿಯನ್ ಎನರ್ಜಿ ಕಂಪನಿ’ ಮತ್ತು ‘ಯುಎಸ್ ಇಶ್ಯೂಅರ್ಸ್’ ಕಂಪನಿಗಳು ಭಾರತದ ಸರ್ಕಾರಿ ಸ್ವಾಮ್ಯದ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ(SECI)ಗೆ ನಿಗದಿತ ದರದಲ್ಲಿ 8 ಗಿಗಾವ್ಯಾಟ್‌ಗಳು ಮತ್ತು 4 ಗಿಗಾವ್ಯಾಟ್ ಸೌರಶಕ್ತಿ ಪೂರೈಸುವ ಗುತ್ತಿಗೆಯನ್ನು ಪಡೆದಿದ್ದಾರೆ. ‘ಯುಎಸ್ ಇಶ್ಯೂಅರ್ಸ್’ ಕಂಪನಿ ಮೂಲತಃ ಮಾರಿಷಸ್‌ನಲ್ಲಿನ ನವೀಕರಿಸಬಹುದಾದ ಇಂಧನ ಪೂರೈಕೆ ಕಂಪನಿಯಾಗಿದೆ. ಈ ಕಂಪನಿ 2023ರ ನವೆಂಬರ್‌ವರೆಗೆ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿಯೂ ವ್ಯವಹಾರ ನಡೆಸಿದೆ.
SECI ವಿದ್ಯುತ್ ಅನ್ನು ರಾಜ್ಯದ ವಿದ್ಯುತ್ ಕಂಪನಿಗಳಿಗೆ ಮಾರಾಟ ಮಾಡಬೇಕಿತ್ತು. ಆದರೆ, SECI ಖರೀದಿದಾರರನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮ, ಅದಾನಿ ಗ್ರೂಪ್ ಮತ್ತು ಅಜುರೆ ಪವರ್ ಜೊತೆ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳಲು ಎಸ್‌ಇಸಿಐಗೆ ಸಾಧ್ಯವಾಗಿರಲಿಲ್ಲ.
ಹೀಗಾಗಿ, ಅದಾನಿ ಮತ್ತು ಇತರ ಆರೋಪಿಗಳು ಎಸ್‌ಇಸಿಐನಿಂದ ವಿದ್ಯುತ್ ಖರೀದಿಸುವಂತೆ ಭಾರತದ ವಿವಿಧ ರಾಜ್ಯಗಳ ರಾಜ್ಯ ವಿದ್ಯುತ್ ಕಂಪನಿಗಳನ್ನು ಮನವೊಲಿಸಲು ಮುಂದಾಗಿದ್ದರು. ಅದರ ಭಾಗವಾಗಿ, ಆಂಧ್ರಪ್ರದೇಶದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವ ಯೋಜನೆಯನ್ನು ರೂಪಿಸಿದ್ದರು.
ಪೂರ್ವ ನ್ಯೂಯಾರ್ಕ್‌ನ ಅಟಾರ್ನಿ ಕಚೇರಿ ಹೇಳುವಂತೆ, ”ಆರೋಪಿಗಳು ಭಾರತ ಸರ್ಕಾರದೊಂದಿಗೆ ಲಾಭದಾಯಕ ಸೌರಶಕ್ತಿ ಪೂರೈಕೆ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಈ ಒಪ್ಪಂದದಿಂದ ಅಂದಾಜು 20 ವರ್ಷಗಳ ಅವಧಿಯಲ್ಲಿ ಸುಮಾರು 17,000 ಕೋಟಿ ರೂ.ಗೂ ಅಧಿಕ ಲಾಭ ಗಳಿಸುವ ನಿರೀಕ್ಷೆಯಿದೆ. ಈ ಒಪ್ಪಂದವನ್ನು ತಾವೇ ಪಡೆದುಕೊಳ್ಳುವುದಕ್ಕಾಗಿ, ಸರಿಸುಮಾರು 2020 ಮತ್ತು 2024ರ ನಡುವೆ, ಆರೋಪಿಗಳು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 2,029 ಕೋಟಿ ರೂ.ಗಳಿಂತಲೂ ಹೆಚ್ಚು ಲಂಚ ನೀಡಲು ಒಪ್ಪಿಕೊಂಡಿದ್ದರು. ಹಲವಾರು ಸಂದರ್ಭಗಳಲ್ಲಿ ಲಂಚ ಕೊಡಲು ಅದಾನಿ ಅವರು ಭಾರತದ ಸರ್ಕಾರಿ ಅಧಿಕಾರಿಗಳನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ.”
ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದರೆ, ಅಮೆರಿಕದಲ್ಲಿ ಚಾರ್ಜ್‌ಶೀಟ್ ಯಾಕೆ?
ಅದಾನಿ ಮತ್ತು ಇತರ ಆರೋಪಿಗಳು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಲು ಅಮೆರಿಕದ ಹೂಡಿಕೆದಾರರಿಂದ ಹಣ ಸಂಗ್ರಹಿಸಿದ್ದಾರೆ ಎಂದು ಚಾರ್ಜ್‌ಶೀಟ್ ಹೇಳುತ್ತದೆ. ಅಮೆರಿಕ ಹೂಡಿಕೆದಾರರಿಗೆ ಸುಳ್ಳು ಹೇಳಿ, ಅವರ ಬಳಿ ಹಣ ಪಡೆಯಲಾಗಿದೆ ಎಂಬುದೇ ಅಮೆರಿಕದಲ್ಲಿ ಚಾರ್ಜ್‌ಶೀಟ್ ದಾಖಲಾಗಲು ಕಾರಣವಾಗಿದೆ.
“ಗೌತಮ್ ಅದಾನಿ, ಸಾಗರ್ ಅದಾನಿ ಹಾಗೂ ವನೀತ್ ಜೈನ್ ಅವರು ಅಮೆರಿಕ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರಿಂದ ಬಂಡವಾಳವನ್ನು ಸಂಗ್ರಹಿಸಲು ಪ್ರಯತ್ನಿಸಿದ್ದಾರೆ. ಹಣ ಸಂಗ್ರಹಿಸುವ ವೇಳೆ, ಲಂಚದ ಯೋಜನೆಯನ್ನು ಮುಚ್ಚಿಟ್ಟು, ಸುಳ್ಳು ಹೇಳಿದ್ದಾರೆ” ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.
“ಅಮೆರಿಕ ಹೂಡಿಕೆದಾರರ ಹಣದಲ್ಲಿ ಅದಾನಿ ಮತ್ತು ಇತರ ಆರೋಪಿಗಳು ಈ ಅಪರಾಧಗಳನ್ನು ಎಸಗಿದ್ದಾರೆ. ಈ ಕ್ರಿಮಿನಲ್ ಅಪರಾಧವು ಅಮೆರಿಕದ ಕಾನೂನುಗಳನ್ನು ಉಲ್ಲಂಘಿಸಿದೆ. ಜಗತ್ತಿನ ಯಾವುದೇ ಭಾಗದಲ್ಲಿ ಅಮೆರಿಕಗೆ ಸಂಬಂಧಿಸಿದಂತೆ ಭ್ರಷ್ಟ, ವಂಚನೆ ಹಾಗೂ ತನಿಖೆಗೆ ಅಡ್ಡಿಪಡಿಸುವ ನಡವಳಿಕೆ ಕಂಡುಬಂದರೆ, ಆ ಬಗ್ಗೆ ಆಕ್ರಮಣಕಾರಿಯಾಗಿ ವಿಚಾರಣೆ ನಡೆಸಲಾಗುತ್ತದೆ” ಎಂದು ಮಿಲ್ಲರ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಮಹಾರಾಷ್ಟ್ರ ಚುನಾವಣೆಯಲ್ಲಿ ಮೋದಿ ಅತ್ಯಾಪ್ತ ಅದಾನಿ ಪಾತ್ರದ್ದೇ ಸದ್ದು ಮತ್ತು ಸುದ್ದಿ
ಅಮೆರಿಕದ ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಪ್ರಭಾರ ಸಹಾಯಕ ನಿರ್ದೇಶಕ ಜೇಮ್ಸ್ ಡೆನ್ನೆಹಿ, ”ಅದಾನಿ ಮತ್ತು ಇತರ ಆರೋಪಿಗಳು ಲಂಚ ಮತ್ತು ಭ್ರಷ್ಟಾಚಾರದ ಬಗ್ಗೆ ಸುಳ್ಳು ಹೇಳಿ ಬಂಡವಾಳ ಸಂಗ್ರಹಿಸಿದ್ದಾರೆ. ಆ ಮೂಲಕ ಅಮೆರಿಕದ ಹೂಡಿಕೆದಾರರನ್ನು ವಂಚಿಸಿದ್ದಾರೆ. ಅಲ್ಲದೆ, ಸರ್ಕಾರದ ತನಿಖೆಗೆ ಅಡ್ಡಿಪಡಿಸುವ ಮೂಲಕ ಲಂಚದ ಪಿತೂರಿಯನ್ನು ಮರೆಮಾಚಲು ಪ್ರಯತ್ನಿಸಿದ್ದಾರೆ” ಎಂದು ಹೇಳಿದ್ದಾರೆ.
ಅಮೆರಿಕದ ಹೂಡಿಕೆದಾರರೊಂದಿಗೆ ಅದಾನಿ ಮತ್ತು ಇತರ ಆರೋಪಿಗಳು ನಡೆಸಿರುವ ವಾಟ್ಸಾಪ್ ಮತ್ತು ಇತರ ಸಂಭಾಷಣೆಗಳ ದಾಖಲೆಗಳನ್ನೂ ಎಫ್‌ಬಿಐ ಸಂಗ್ರಹಿಸಿದೆ. ಚಾರ್ಜ್‌ಶೀಟ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಪ್ರಕರಣ ಬೆಳಕಿಗೆ ಬಂದ ಮೇಲೆ ಆಗಿದ್ದೇನು?
ಈ ಆರೋಪಗಳನ್ನು ಅದಾನಿ ಗ್ರೂಪ್ ವಕ್ತಾರರು ಆಧಾರರಹಿತವೆಂದು ಹೇಳಿದ್ದಾರೆ. ಆದಾಗ್ಯೂ, ಪ್ರಕರಣ ಬೆಳಕಿಗೆ ಬಂದ ಬಳಿಕ ಒಂದೇ ದಿನದಲ್ಲಿ ಅದಾನಿ ಗ್ರೂಪ್‌ನ ಕಂಪನಿಗಳ ಷೇರುಗಳು 20%ರಷ್ಟು ಕುಸಿತ ಕಂಡಿವೆ. ಅದಾನಿ ಗ್ರೀನ್ ಎನರ್ಜಿಯ ಷೇರುಗಳು 18.76%, ಅದಾನಿ ಎನರ್ಜಿ ಸಲ್ಯೂಷನ್ಸ್ ಷೇರುಗಳು 20%, ಅದಾನಿ ಎಂಟರ್‌ಪ್ರೈಸಸ್ ಷೇರುಗಳು 10%, ಅದಾನಿ ಪವರ್‌ನ ಷೇರುಗಳು 13.98% ಹಾಗೂ ಅದಾನಿ ಪೋರ್ಟ್ಸ್‌ನ ಷೇರುಗಳು 10% ಕುಸಿದಿವೆ.
ಏತನ್ಮಧ್ಯೆ, ಅದಾನಿ ಗ್ರೂಪ್ ಒಳಗೊಂಡಿರುವ ವಿವಿಧ ಹಗರಣಗಳ ಕುರಿತು ಜಂಟಿ ಸಂಸದೀಯ ಸಮಿತಿಯ ಮೂಲಕ ತನಿಖೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.