ಲೆಬನಾನ್, ಗಾಝಾ ಮತ್ತು ಪ್ಯಾಲೆಸ್ತೀನ್‌ನ ಪಶ್ಚಿಮ ದಂಡೆಯ ಮೇಲೆ ಇಸ್ರೇಲಿ ಪಡೆಗಳು ತಮ್ಮ ಕ್ರೌರ್ಯವನ್ನು ಮುಂದುವರೆಸಿವೆ. ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಕಳೆದ 24 ಗಂಟೆಗಳಲ್ಲಿ 37 ಮಂದಿ ಸಾವನ್ನಪ್ಪಿದ್ದಾರೆ. 151 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿದೆ.
ಲೆಬಾನಾನ್ ರಾಜಧಾನಿ ಬೈರುತ್‌ನ ಜನನಿಬಿಡ ಧೈಯಾ ಪ್ರದೇಶದ ಮೇಲೆ ಶುಕ್ರವಾರ ತಡರಾತ್ರಿ ಇಸ್ರೇಲ್ ಸರಣಿ ಬಾಂಬ್ ದಾಳಿ ನಡೆಸಿದೆ. ಈ ದಾಳಿಯನ್ನು, 2023ರ ಅಕ್ಟೋಬರ್‌ನಲ್ಲಿ ಹೆಜ್ಬುಲ್ಲಾ-ಇಸ್ರೇಲ್ ಸಂಘರ್ಷ ಪ್ರಾರಂಭವಾದ ಬಳಿಕ ನಡೆದ ಅತೀ ದೊಡ್ಡ ದಾಳಿ ಎನ್ನಲಾಗಿದೆ.
ಇತ್ತೀಚೆಗೆ ಹತ್ಯೆಗೀಡಾದ ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರ ಸೋಧರ ಸಂಬಂಧಿ ಹಾಗೂ ನಸ್ರಲಾ ಅವರ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿರುವ ಸೈಫುದ್ದೀನ್ ಗುರಿಯಾಗಿಸಿಕೊಂಡು ಬೈರುತ್‌ನ ಭೂಗತ ಬಂಕರ್ ಮೇಲೆ ಇಸ್ರೇಲ್ ದಾಳಿ ನಡೆಸಿದೆ.
ಮತ್ತೊಂದೆಡೆ ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ತುಲ್ಕರೆಮ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ಜೆಟ್ ಫೈಟರ್ ನಡೆಸಿದ ದಾಳಿಯಲ್ಲಿ ಕನಿಷ್ಠ 18 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ.
ಎರಡು ದಿನಗಳಲ್ಲಿ ಗಾಝಾ ಪಟ್ಟಿಯಲ್ಲಿ ಇಸ್ರೇಲಿ ಪಡೆಗಳು ಮೂರು ಯುಎನ್ ನಡೆಸುವ ಶಾಲಾ ಆಶ್ರಯಗಳ ಮೇಲೆ ದಾಳಿ ನಡೆಸಿದ್ದರಿಂದ ಕನಿಷ್ಠ 21 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ಕೆಲಸ ಮಾಡುವ ವಿಶ್ವ ಸಂಸ್ಥೆಯ ಏಜೆನ್ಸಿ ಯುಎನ್‌ಆರ್‌ಡಬ್ಲ್ಯೂಎನ ಮುಖ್ಯಸ್ಥರು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಪೇಜರ್ ದಾಳಿ | ಚೀನಾ ಸಾಕೆ, ಇಸ್ರೇಲ್ ಮೇಲೂ ಭಾರತ ನಿರ್ಬಂಧ ಹೇರಬೇಕಲ್ಲವೇ?
ಇರಾನ್ ಪ್ರಾದೇಶಿಕ ಯುದ್ಧವನ್ನು ಬಯಸುವುದಿಲ್ಲ ಎಂದು ಕತಾರ್ ಮೂಲಕ ವಾಷಿಂಗ್ಟನ್‌ಗೆ ಸಂದೇಶವನ್ನು ರವಾನಿಸಿದೆ. ಆದರೆ ‘ಏಕಪಕ್ಷೀಯ ಸ್ವಯಂ ಸಂಯಮದ ಹಂತವು ಕೊನೆಗೊಂಡಿದೆ’ ಎಂದು ತಿಳಿಸಿದೆ ಅಲ್ ಜಝೀರಾ ವರದಿ ಮಾಡಿದೆ.
ಕಳೆದ ವರ್ಷ ಅಕ್ಟೋಬರ್‌ನಿಂದ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣದಲ್ಲಿ ಇದುವರೆಗೆ 41,788 ಜನರು ಸಾವನ್ನಪ್ಪಿದ್ದಾರೆ ಮತ್ತು 96,794 ಜನರು ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನ ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ 1,139 ಜನರು ಸಾವನ್ನಪ್ಪಿದ್ದರು ಮತ್ತು 200ಕ್ಕೂ ಹೆಚ್ಚು ಜನರನ್ನು ಹಮಾಸ್ ಒತ್ತೆಯಾಳಾಗಿಟ್ಟುಕೊಂಡಿತ್ತು.