ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೂರ್ಣ ಸುರಕ್ಷತೆ ಮತ್ತು ಸಂರಕ್ಷಣೆಯನ್ನು ನೀಡಬೇಕೆಂದು ಭಾರತ ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದ (ಸಿಪಿಐ-ಎಂ) ಪಾಲಿಟ್ ಬ್ಯೂರೋ ಆ ದೇಶದ ಉಸ್ತುವಾರಿ ಸರ್ಕಾರವನ್ನು ಆಗ್ರಹಪಡಿಸಿದೆ.
ಈ ಕುರಿತು ಇದೇ ಶನಿವಾರ ಮತ್ತು ಭಾನುವಾರ ಜರುಗಿದ ಪಕ್ಷದ ಪಾಲಿಟ್ ಬ್ಯೂರೋ ಗೊತ್ತುವಳಿಯನ್ನು ಅಂಗೀಕರಿಸಿತು.
ಇದೇ ಸಂದರ್ಭದಲ್ಲಿ ಇಸ್ಲಾಮಿಸ್ಟ್ ಮೂಲಭೂತವಾದಿ ಶಕ್ತಿಗಳ ಚಟುವಟಿಕೆಗಳನ್ನು ಬಾಂಗ್ಲಾದೇಶದ ಹಾಲಿ ಸರ್ಕಾರ ನಿರ್ಲಕ್ಷಿಸಿದೆಯೆಂದು ತೋರುತ್ತಿದೆ. ಬಾಂಗ್ಲಾದೇಶದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆರೆಸ್ಸೆಸ್- ಬಿಜೆಪಿ ಮತ್ತಿತರೆ ಹಿಂದುತ್ವ ಸಂಘಟನೆಗಳು ಭಾರತದಲ್ಲಿ ಭಾವನೆಗಳಿಗೆ ಕಿಚ್ಚು ಹಚ್ಚಿ ಬಡಿದೆಬ್ಬಿಸುವ ಕೃತ್ಯಗಳಲ್ಲಿ ತೊಡಗಿರುವುದು ಖಂಡನೀಯ. ಇಂತಹ ಕೃತ್ಯಗಳು ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಹಿತಕ್ಕೆ ಪೂರಕವಾಗಿಲ್ಲ. ಸರಹದ್ದಿನ ಆಚೆಯ ಮತ್ತು ಈಚೆಯ ಎಲ್ಲ ಪ್ರಕಾರದ ಕೋಮುವಾದದ ವಿರುದ್ಧ ಉಭಯ ದೇಶಗಳ ಎಲ್ಲ ಸೆಕ್ಯೂಲರ್ ಮತ್ತು ಜನತಾಂತ್ರಿಕ ಶಕ್ತಿಗಳು ಬಲವಾದ ದನಿಯೆತ್ತಬೇಕಿದೆ ಎಂದೂ ಸಭೆ ಹೇಳಿದೆ.
ಶತಮಾನಗಳಷ್ಟು ಪುರಾತನ ಮಸೀದಿಗಳ ಅಡಿಯಲ್ಲಿ ದೇವಸ್ಥಾನಗಳಿದ್ದವು ಎಂಬುದಾಗಿ ಸಲ್ಲಿಸಲಾಗುತ್ತಿರುವ ತಕರಾರು ಅರ್ಜಿಗಳನ್ನು ಅಧೀನ ನ್ಯಾಯಾಲಯಗಳು ವಿಚಾರಣೆಗೆ ಎತ್ತಿಕೊಂಡು ಪ್ರೋತ್ಸಾಹಿಸುತ್ತಿರುವ ಕುರಿತು ಪಾಲಿಟ್ ಬ್ಯೂರೋ ಸಭೆ ಆತಂಕ ಪ್ರಕಟಿಸಿತು. ವಾರಾಣಸಿ ಮತ್ತು ಮಥುರಾದ ನಂತರ ಸಂಭಲ್ ನ ಮಸೀದಿಯ ಸರ್ವೆಗೆ ಅಧೀನ ನ್ಯಾಯಾಲಯವೊಂದು ಆದೇಶ ನೀಡಿದೆ. ಪರಿಣಾಮವಾಗಿ ಜರುಗಿದ ಹಿಂಸಾಚಾರದಲ್ಲಿ ನಾಲ್ವರು ಮುಸ್ಲಿಮ್ ಯುವಕರ ಹತ್ಯೆಯಾಗಿದೆ. ಇಂತಹುದೇ ಮತ್ತೊಂದು ಅರ್ಜಿ ಅಜ್ಮೇರ್ ಶರೀಫ್ ದರ್ಗಾ ಕುರಿತು ಅಜ್ಮೇರ್ ನ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದೆ. ಸುಪ್ರೀಮ್ ಕೋರ್ಟು 1991ರ ಪೂಜಾಸ್ಥಳಗಳ (ವಿಶೇಷ) ಕಾಯಿದೆಯನ್ನು ಎತ್ತಿ ಹಿಡಿದು ಇಂತಹ ತಕರಾರು ಅರ್ಜಿ ಸಲ್ಲಿಕೆಗೆ ಪೂರ್ಣವಿರಾಮ ಹಾಕದಿರುವುದು ದುರದೃಷ್ಟಕರ, ಈ ಕಾಯಿದೆಯ ಸಿಂಧುತ್ವ ಮತ್ತು ಜಾರಿಯನ್ನು ಆಯೋಧ್ಯೆಯ ವಿವಾದ ಕುರಿತು ವಿಚಾರಣೆ ನಡೆಸಿದ ಸುಪ್ರೀಮ್ ಕೋರ್ಟ್ ಪೀಠ ನಿರ್ವಿವಾದವಾಗಿ ಎತ್ತಿ ಹಿಡಿದಿತ್ತು.
ಈಗಲೂ ಅದೇ ಕೆಲಸ ಮಾಡಬೇಕಿದೆ ಎಂಬ ಮತ್ತೊಂದು ಗೊತ್ತುವಳಿಯನ್ನು ಪಾಲಿಟ್ ಬ್ಯೂರೋ ಅಂಗೀಕರಿಸಿದೆ.
ದೆಹಲಿ ಗಡಿಭಾಗದ ಗ್ರೇಟರ್ ನೋಯ್ಡಾದಲ್ಲಿ ರೈತದಮನ ಕ್ರಮಗಳು ಖಂಡನೀಯ. ಅಖಿಲಭಾರತ ಕಿಸಾನ್ ಸಭಾ ಮತ್ತಿತರೆ ರೈತ ಸಂಘಟನೆಗಳಿಗೆಸೇರಿದ 150 ರೈತರನ್ನು ಜೈಲಿಗೆ ತಳ್ಳಲಾಗಿದೆ. ಬಂಧಿತ ರೈತರು ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಹಲವಾರು ರೈತ ಹೋರಾಟಗಾರರನ್ನು ಗೃಹಬಂಧನದಲ್ಲಿ ಇರಿಸಲಾಗುತ್ತಿದೆ. ಚಳವಳಿಯ ಮುಂಚೂಣಿಯಲ್ಲಿರುವ ಮಹಿಳೆಯರ ಮೇಲೆ ಪೊಲೀಸರ ದಾಳಿ ಆಘಾತಕರ. ಕಾಲಾಂತರದಲ್ಲಿ ರಿಯಲ್ ಎಸ್ಟೇಟ್ ಯೋಜನೆಗಳಿಗಾಗಿ 45 ಗ್ರಾಮಗಳಲ್ಲಿನ ಭೂಸ್ವಾಧೀನದ ವಿರುದ್ಧ ರೈತರು ನಡೆಸಿರುವ ಆಂದೋಲನವಿದು. ಸ್ವಾಧೀನಪಡಿಸಿಕೊಳ್ಳಲಾದ ಜಮೀನುಗಳಿಗೆ ಪರಿಷ್ಕೃತ ದರ ನಿಗದಿ ಮಾಡಿ ಪರಿಹಾರ ನೀಡಬೇಕು, 1997ರ ಒಪ್ಪಂದದ ಪ್ರಕಾರ ರೈತರಿಗೆ ನಿವೇಶನಗಳನ್ನು ನೀಡಬೇಕು ಹಾಗೂ ಕಡ್ಡಾಯ ಉದ್ಯೋಗ ನೀತಿಯನ್ನು ಜಾರಿಗೊಳಿಸಬೇಕು ಎಂಬ ಬೇಡಿಕೆಗಳನ್ನು ರೈತರ ಬೇಡಿಕೆಗಳನ್ನು ಪಾಲಿಟ್ ಬ್ಯೂರೋ ಬೆಂಬಲಿಸಿದೆ.