ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತರ ಸಂಖ್ಯೆ ಏರಿಕೆಯಾಗುತ್ತಿದ್ದು, ಸಾವಿರ ದಾಟಿದೆ. ಈವರೆಗೆ ಮ್ಯಾನ್ಮಾರ್‌ನಲ್ಲಿ 1,002 ಮಂದಿ ಸಾವನ್ನಪ್ಪಿದ್ದಾರೆ, 2,376 ಮಂದಿ ಗಾಯಗೊಂಡಿದ್ದಾರೆ.
ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ನಲ್ಲಿ ಶುಕ್ರವಾರ 7.7ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಮೃತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮೊದಲಿಗೆ 7.7 ತೀವ್ರತೆಯ ಭೂಕಂಪವಾಗಿದ್ದು, ಬಳಿಕ 11 ನಿಮಿಷದ ಅಂತರದಲ್ಲಿ ಮತ್ತೆ 6.4 ತೀವ್ರತೆಯ ಭೂಕಂಪವಾಗಿದೆ. ಮ್ಯಾನ್ಮಾರ್‌ನ ಎರಡನೇ ಅತೀ ದೊಡ್ಡ ನಗರವಾಗಿರುವ ಮ್ಯಾಂಡಲೆ ಭೂಕಂಪದ ಕೇಂದ್ರಬಿಂದುವಾಗಿದೆ.
ಇದನ್ನು ಓದಿದ್ದೀರಾ? ಮ್ಯಾನ್ಮಾರ್‌ನಲ್ಲಿ ಭೂಕಂಪ: 150 ಮಂದಿ ಸಾವು
ಭೂಕಂಪದಿಂದಾಗಿ ಸೇತುವೆಗಳು, ರಸ್ತೆಗಳು, ಕಟ್ಟಡ ಮೊದಲಾದ ಮೂಲಸೌಕರ್ಯಗಳಿಗೆ ಹಾನಿಯಗಿದೆ. ಭೂಕಂಪ ನಡೆದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸರ್ಕಾರ ತಿಳಿಸಿದೆ. ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತರದಲ್ಲಿದ್ದ 30 ಮಹಡಿಯ ಸರ್ಕಾರಿ ಕಟ್ಟಡ ಕುಸಿದಿದೆ.
ಇನ್ನು ಈಗಾಗಲೇ ಭಾರತ, ಚೀನಾ, ಅಮೆರಿಕ, ರಷ್ಯಾ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳು ಮ್ಯಾನ್ಮಾರ್‌ಗೆ ಸಹಾಯಹಸ್ತ ಚಾಚಿದೆ. ಭಾರತ ಈಗಾಗಲೇ ಹೊದಿಕೆ, ಟೆಂಟ್, ಸೋಲರ್ ಲ್ಯಾಂಪ್, ಆಹಾರ, ಔಷಧಿ, ಜನರೇಟರ್ ಸೇರಿದಂತೆ ಸುಮಾರು 15 ಟನ್‌ನಷ್ಟು ಅಗತ್ಯ ವಸ್ತುಗಳನ್ನು ಕಳುಹಿಸಿದೆ.
