ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ 164ನೇ ಜನ್ಮದಿನದ ಅಂಗವಾಗಿ, ಕರ್ನಾಟಕ ಸಂಘ ಕತಾರ್ (KSQ) ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಸಹಯೋಗದೊಂದಿಗೆ 2025ರ ‘ಎಂಜಿನಿಯರ್ಸ್ ಡೇ’ಯನ್ನು ಯಶಸ್ವಿಯಾಗಿ ಆಚರಿಸಲಾಯಿತು.
ದೋಹಾದ ಐಸಿಸಿಯ ಅಶೋಕ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ ಭಾರತೀಯ ರಾಯಭಾರ ಕಚೇರಿಯ ಉಪ ಮುಖ್ಯಸ್ಥರಾದ ಸಂದೀಪ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಹಾಗೂ ಗ್ಲೋಬಲ್ ಫೆಡರೇಶನ್ ಆಫ್ ಎಂಜಿನಿಯರ್ಸ್‌ನ ಅಧ್ಯಕ್ಷರಾದ ಅಹ್ಮದ್ ಜಾಸಿಮ್ ಅಲ್ ಜೊಲೊ ಅವರು ಗೌರವ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗಣ್ಯರಿಂದ ಸಾಂಪ್ರದಾಯಿಕ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರುಷ್ಟಿ ಚಂದಿರಹಾಸ ಅವರಿಂದ ಆಕರ್ಷಕ ಸ್ವಾಗತ ನೃತ್ಯ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ ಮತ್ತು ಕೊಡುಗೆಗಳನ್ನು ಪ್ರದರ್ಶಿಸುವ ವಿಡಿಯೋ ಪ್ರಸ್ತುತಿ ಪಡಿಸಲಾಯಿತು.
ಕೆಎಸ್‌ಕ್ಯೂ ಅಧ್ಯಕ್ಷರಾದ ರವಿ ಶೆಟ್ಟಿ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಗೌರವ ಸಲ್ಲಿಸಿ, ಜ್ಞಾನ, ನಮ್ರತೆ, ಬುದ್ಧಿಶಕ್ತಿ ಮತ್ತು ರಾಷ್ಟ್ರೀಯ ಸೇವೆಗೆ ಸಮರ್ಪಣೆಯ ಮಹತ್ವವನ್ನು ಸಾರುವ ಸಂಸೃತ ಶ್ಲೋಕವನ್ನು ಅರ್ಪಿಸಿದರು. ಐಸಿಸಿ ಮತ್ತು ಸಂಘದ ಸಮಿತಿ ಸದಸ್ಯರ ಸಹಕಾರವನ್ನು ಶ್ಲಾಘಿಸಿದರು.
ಎಲ್ & ಟಿ ಕತಾರ್‌ನ ಎಂಜಿನಿಯರಿಂಗ್ ವ್ಯವಸ್ಥಾಪಕರಾದ ಪಳನಿ ಗೋಪಾಲನ್ ಅವರು ಜಾಗತಿಕ ತಾಪಮಾನ ಏರಿಕೆ ಮತ್ತು ಇಂಗಾಲದ ಹೆಜ್ಜೆ ಗುರುತುಗಳನ್ನು ಕಡಿಮೆ ಮಾಡಲು ಎಂಜಿನಿಯರಿಂಗ್ ಪರಿಹಾರಗಳ ಕುರಿತು ತಮ್ಮ ತಾಂತ್ರಿಕ ಜ್ಞಾನವನ್ನು ಹಂಚಿಕೊಂಡರು.
ಟೆಕ್ನಿಪ್ ಎನರ್ಜಿಸ್‌ನ ಎಲೆಕ್ಟ್ರಿಕಲ್ ಎಂಜಿನಿಯರ್ ಕಿಶೋರ್ ಅವರು “ಸಬ್‌ಸೀ ಅಂಬಲಿಕಲ್ ಮತ್ತು ಕೇಬಲ್ಸ್ ಆಫ್ ಕತಾರ್ ಆಫ್ಶೊರ್ ಫೆಸಿಲಿಟಿಸ್” ಕುರಿತು ಪ್ರಸ್ತುತಿ ನೀಡಿದರು. ಇಬ್ಬರೂ ಎಂಜಿನಿಯರ್‌ಗಳನ್ನೂ ಮತ್ತು ನೃತ್ಯ ಪ್ರದರ್ಶನ ನೀಡಿದ ಶ್ರುಷ್ಟಿ ಚಂದಿರಹಾಸ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಐಸಿಸಿ ಅಧ್ಯಕ್ಷರಾದ ಮಣಿಕಂಠನ್ ಎ.ಪಿ. ಅವರು ಸಮುದಾಯ ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳ ಪಾತ್ರವನ್ನು ಪ್ರಶಂಸಿಸಿದರು. ಮುಖ್ಯ ಅತಿಥಿ ಸಂದೀಪ್ ಕುಮಾರ್ ಅವರು ಮಾತನಾಡಿ, ಸರ್. ಎಂ. ವಿಶ್ವೇಶ್ವರಯ್ಯ ಅವರ ಅದ್ವಿತೀಯ ಕೊಡುಗೆಗಳನ್ನು ಸ್ಮರಿಸಿದರು.
ಗೌರವ ಅತಿಥಿ ಅಹ್ಮದ್ ಜಾಸಿಮ್ ಅಲ್ ಜೊಲೊ ಅವರು ಕತಾರ್ ಮತ್ತು ಜಾಗತಿಕ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಭಾರತೀಯ ಎಂಜಿನಿಯರ್‌ಗಳ ಕೊಡುಗೆಯನ್ನು ಶ್ಲಾಘಿಸಿದರು.
ಕೆಎಸ್‌ಕ್ಯೂ ಸಂಪ್ರದಾಯದಂತೆ ಕತಾರ್ ಮತ್ತು ವಿಶ್ವದಾದ್ಯಂತ ಕನ್ನಡ ಸಂಸ್ಕೃತಿ ಮತ್ತು ಎಂಜಿನಿಯರಿಂಗ್ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಅನಿಲ್ ಭಾಸಗಿ ಅವರಿಗೆ ಪ್ರತಿಷ್ಠಿತ “ಅಭಿಯಂತರಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಹಿಂದೆ ನಡೆದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದ ಡಾ. ರಂಜನ್ ಎಂ. ಮಥಿಯಾಸ್, ಡಾ. ರಮ್ಯಾ ಗಿರೀಶ್, ಡಾ. ಗಿರೀಶ್ ಬಾಲರಾಜು, ಡಾ. ಮೊಹಮ್ಮದ್ ಮುಸ್ತಫಾ, ಶ್ರೀಮತಿ ಮಮತಾ ಭಾರತಿ ಮತ್ತು ಶ್ರೀಮತಿ ಪ್ರೇಮಾ ನವೀನಾ ಸೇರಿದಂತೆ ಹಲವಾರು ವೈದ್ಯಕೀಯ ವೃತ್ತಿಪರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಕೆಎಸ್‌ಕ್ಯೂ ಎಂಜಿನಿಯರ್‌ಗಳಾದ ಅನಿಲ್ ಭಾಸಗಿ, ಅಮಿತ್ ಶೆಟ್ಟಿ, ಸಂತೋಷ್ ಕುಮಾರ್, ಸಂತೋಷ್ ಮಂಕಣಿ ಮತ್ತು ಸೇವಿಯಸ್ ಕ್ರಾಸ್ತಾ ಅವರು ಸಂಗೀತ ಮತ್ತು ಕವನದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಸಲಹಾ ಸಮಿತಿಯ ಸದಸ್ಯರಾದ ವಿ.ಎಸ್. ಮನ್ನಂಗಿ ಅವರು ಮುಂಬರುವ ಕರ್ನಾಟಕ ರಾಜ್ಯೋತ್ಸವ – ರಜತ ಸಂಭ್ರಮ ಸಮಾರೋಪ ಕರಪತ್ರವನ್ನು ಅನಾವರಣಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಐಐಎಂ ನಾಗ್ಪುರದ ಡೀನ್ ಪ್ರೊ. ಪ್ರಶಾಂತ್ ಗುಪ್ತಾ ಮತ್ತು ಪ್ರೊ. ಡಾ. ಶೈಲೇಂದ್ರ ನಿಗಮ್, ಮಾಜಿ ICBF ಮತ್ತು ISC ಅಧ್ಯಕ್ಷರಾದ ನೀಲಾಂಶು ಡೇ, ಕೆಎಸ್‌ಕ್ಯೂ ಸಲಹೆಗಾರರಾದ ಅರುಣ್ ಕುಮಾರ್ ಮತ್ತು ಡಾ. ಸಂಜಯ್ ಕುದರಿ, ತುಳುಕೂಟದ ಅಧ್ಯಕ್ಷ ಸಂದೇಶ್ ಆನಂದ್, ಎಂಸಿಸಿ ಅಧ್ಯಕ್ಷ ಕ್ರಿಶ್ಚಿಯನ್ ಲೋಬೊ, ಎಸ್ ಕೆ ಎಂ ಡಬ್ಲ್ಯೂ ಎ ಅಧ್ಯಕ್ಷರಾದ ಇಮ್ರಾನ್ ಬಾವಾ, ಎಂ ಸಿ ಎ ಅಧ್ಯಕ್ಷರಾದ ಗ್ಲಾಡ್ಸನ್ ಅಲ್ಮೇಡಾ, ಬಂಟ್ಸ್ ಕತಾರ್ ಅಧ್ಯಕ್ಷರಾದ ನವೀನ್ ಶೆಟ್ಟಿ ಇರುವೈಲ್, ಬಿಲ್ಲವಾಸ್ ಪ್ರಧಾನ ಕಾರ್ಯದರ್ಶಿಯಾದ ಉಮೇಶ್ ಪೂಜಾರಿ, ಅಮೇರಿಕನ್ ಆಸ್ಪತ್ರೆಯ ಜನರಲ್ ಮ್ಯಾನೇಜರ್ ಇಕ್ಬಾಲ್ ಅಬ್ದುಲ್ಲಾ, TUV ವ್ಯವಸ್ಥಾಪಕ ನಿರ್ದೇಶಕರಾದ ಅನಂತಕೃಷ್ಣನ್, DTMನ ರಾಮಮೋಹನ್ ರೈ, ICC ಮತ್ತು KSQ ಸಮಿತಿ ಮತ್ತು ಹಿರಿಯ ಸದಸ್ಯರು ಸೇರಿದಂತೆ ಪ್ರಮುಖ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಕೆಎಸ್‌ಕ್ಯೂ ಪ್ರಧಾನ ಕಾರ್ಯದರ್ಶಿ ಕುಮಾರ್ ಸ್ವಾಮಿ ಅವರು ಯಶಸ್ವಿಯಾಗಿ ನಿರೂಪಿಸಿದರೆ, ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಭಾವನಾ ನವೀನ್ ಧನ್ಯವಾದ ಅರ್ಪಿಸಿದರು. ಕರ್ನಾಟಕ ಸಂಘ ಕತಾರ್ ಎಂಸಿ ಸದಸ್ಯರು ಮತ್ತು ಸ್ವಯಂಸೇವಕರ ಸಹಕಾರದಿಂದಾಗಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.







