ಇಸ್ರೇಲ್ ಹಾಗೂ ಇರಾನ್ ನಡುವೆ ಕಳೆದ 12 ದಿನಗಳಿಂದ ನಡೆಯುತ್ತಿದ್ದ ಕದನಕ್ಕೆ ವಿರಾಮ ಘೋಷಣೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರೂ ದಾಳಿ ನಿಂತಿರಲಿಲ್ಲ. ಈ ಸಂಘರ್ಷದ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಧ್ಯಮಗಳ ಎದುರು ಇಸ್ರೇಲ್ ದೇಶದ ನಡೆಯಿಂದ ಬಾಯಿಗೆ ಬಂದಂತೆ ಬಹಿರಂಗ ವಾಗ್ದಾಳಿ ನಡೆಸಿದ ಬೆಳವಣಿಗೆ ನಡೆದಿದೆ.
ಸದ್ಯ ನಡೆಯುತ್ತಿರುವ ಇಸ್ರೇಲ್-ಇರಾನ್ ಸಂಘರ್ಷದ ಬಗ್ಗೆ ಅಧ್ಯಕ್ಷ ಟ್ರಂಪ್ ತಮ್ಮ ಹತಾಶೆಯನ್ನು ಹೊರಹಾಕಿದ್ದು, “ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳು ತಮ್ಮ ಕದನ ವಿರಾಮ ಘೋಷಣೆಯನ್ನು ತ್ವರಿತವಾಗಿ ಧಿಕ್ಕರಿಸಿದ್ದಾರೆ. ಅವರು ಮತ್ತೊಮ್ಮೆ ಪರಸ್ಪರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಹಗೆತನವನ್ನು ಮುಂದುವರೆಸಿದ್ದಾರೆ. ತಮ್ಮ ಮಿತ್ರರಾಷ್ಟ್ರಗಳ ನಡೆಯ ಬಗ್ಗೆ ಸಂತೋಷವಾಗಿಲ್ಲ” ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿದ್ದೀರಾ? ಇಸ್ರೇಲ್ ಮೇಲೆ ದಾಳಿ ನಡೆಸಿ ‘ಈಗ ಕದನ ವಿರಾಮ’ ಜಾರಿಯಾಗಿದೆ ಎಂದ ಇರಾನ್
“ಎರಡು ಮಿತ್ರರಾಷ್ಟ್ರಗಳು ಬಹಳ ಸಮಯದಿಂದ ಸಂಘರ್ಷ ನಡೆಸುತ್ತಿದ್ದಾರೆ. ಅವರು ಏನು ಮಾಡುತ್ತಿದ್ದಾರೆಂದು ಅವರಿಗೇ ತಿಳಿದಿಲ್ಲ” ಎಂದು ಕೋಪದಿಂದಲೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
“ಇರಾನ್ ಮಾತ್ರವಲ್ಲದೇ ಇಸ್ರೇಲ್ ಕೂಡ ಕದನ ವಿರಾಮ ಉಲ್ಲಂಘಿಸಿದೆ. ಕದನ ವಿರಾಮದ ಬಗ್ಗೆ ಮಾತನಾಡಲು ಕರೆದಿದ್ದು ಇಸ್ರೇಲ್. ಆ ಬಳಿಕ ದಾಳಿ ನಡೆಸಿರುವುದು ಕೂಡ ಅವರೇ. ಇಷ್ಟೊಂದು ಪ್ರಮಾಣದಲ್ಲಿ ಬಾಂಬ್‌ಗಳನ್ನು ಇಸ್ರೇಲ್ ಸುರಿಸಿರುವುದನ್ನು ನಾನು ಈ ಮೊದಲು ಕಂಡಿರಲಿಲ್ಲ. ಇಸ್ರೇಲ್‌ನ ನಡೆಯ ಬಗ್ಗೆ ನಾನು ಸಂತೋಷಗೊಂಡಿಲ್ಲ” ಎಂದು ಕೋಪದಿಂದಲೇ ಡೊನಾಲ್ಡ್ ಟ್ರಂಪ್ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅಮೆರಿಕದ ಈವರೆಗಿನ ಅಧ್ಯಕ್ಷರುಗಳ ಪೈಕಿ ಈ ರೀತಿಯಾಗಿ ಯಾರೂ ಕೂಡ ಈ ಹಿಂದೆ ಈ ರೀತಿಯಲ್ಲಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿರಲಿಲ್ಲ.
