ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಹಿರಿಯ ಮುಸ್ಲಿಂ ನೇತಾರ ಡಾ. ಎಸ್ ಎಂ ಸಯ್ಯದ್ ಖಲೀಲ್ ಬುಧವಾರ ತಡರಾತ್ರಿ ದುಬೈಯ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಭಟ್ಕಳದ ಪ್ರಪ್ರಥಮ ಚಾರ್ಟರ್ಡ್ಅಕೌಂಟೆಂಟ್‌ಗಳಲ್ಲಿ ಒಬ್ಬರಾದ ಸಯ್ಯದ್ ಖಲೀಲ್ ಅವರು ‘ ಸಿ ಎ ಖಲೀಲ್ ‘ ಎಂದೇ ಚಿರಪರಿಚಿತರಾಗಿದ್ದರು. ದುಬೈನಲ್ಲಿ ವಾಸವಿದ್ದ ಅವರು, ಖ್ಯಾತ ಅನಿವಾಸಿ ಕನ್ನಡಿಗರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದರು.
“ಬುಧವಾರ ತಡರಾತ್ರಿ 1.30 ರ ಸುಮಾರಿಗೆ ನಮ್ಮ ತಂದೆ ಇಹಲೋಕ ತ್ಯಜಿಸಿದ್ದಾರೆ. ಗುರುವಾರ ಮಗ್ರಿಬ್(ಸಂಜೆ) ನಮಾಝಿನ ನಂತರ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುವುದು” ಎಂದು ಸಯ್ಯದ್ ಖಲೀಲ್ ಅವರ ಪುತ್ರ ಎಸ್ ಎಂ ಸಯ್ಯದ್ ರಯೀಸ್ ಖಲೀಲ್ ಮಾಹಿತಿ ನೀಡಿದ್ದಾರೆ.
ದುಬೈ ಸಹಿತ ಗಲ್ಫ್ ದೇಶಗಳಲ್ಲಿ ಕನ್ನಡ ಹಾಗೂ ಕೊಂಕಣಿ ಭಾಷೆ ಹಾಗೂ ಸಂಸ್ಕೃತಿಯ ಕಂಪು ಹರಡುವಲ್ಲಿ ಮಹತ್ವದ ಕೊಡುಗೆ ನೀಡಿದವರು. ನೂರಾರು ಯುವಜನರಿಗೆ ಉದ್ಯೋಗ ಪಡೆಯಲು ನೆರವಾದವರು. ಭಟ್ಕಳ, ಮಂಗಳೂರು ಸಹಿತ ಹತ್ತಾರು ಕಡೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸಂಘ ಸಂಸ್ಥೆಗಳಿಗೆ ಪೋಷಕರಾಗಿ, ಪದಾಧಿಕಾರಿಯಾಗಿ ಆಸರೆಯಾಗಿ ನಿಂತಿದ್ದರು.

ಚಾರ್ಟರ್ಡ್ ಅಕೌಂಟೆಂಟ್ ಪದವಿ ಪಡೆದ ಬಳಿಕ ಭಾರತದಲ್ಲಿ ಕೆಲ ಸಮಯ ಮಹೀಂದ್ರ ಕಂಪೆನಿಯಲ್ಲಿ ಸೇವೆ ಸಲ್ಲಿಸಿದ್ದ ಎಸ್ ಎಂ ಖಲೀಲ್ ಅವರು, 1978 ರಲ್ಲಿ ದುಬೈಗೆ ಹೋಗಿದ್ದರು. ಅಲ್ಲಿ ಅವರು ಪ್ರತಿಷ್ಠಿತ ಗಲದಾರಿ ಸಮೂಹ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಸೇರಿ ಅಲ್ಲೇ ದಶಕಗಳ ಕಾಲ ಸೇವೆ ಸಲ್ಲಿಸಿ ಅತ್ಯುನ್ನತ ಹುದ್ದೆಗೆ ತಲುಪಿ ಆ ಸಮೂಹದ ಅಭಿವೃದ್ಧಿಗೆ ನಿರ್ಣಾಯಕ ಕೊಡುಗೆ ನೀಡಿದವರು. ಬಳಿಕ ತಮ್ಮ ಸ್ವಂತ ಸಂಸ್ಥೆ ಕೆ & ಕೆ ಎಂಟರ್ ಪ್ರೈಸಸ್ ಸ್ಥಾಪಿಸಿದ್ದರು.
ಭಟ್ಕಳದ ಅಂಜುಮನ್ ಹಾಮಿ ಎ ಮುಸ್ಲಿಮೀನ್, ರಾಬಿತಾ ಸೊಸೈಟಿ ಸಹಿತ ಹಲವಾರು ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಹತ್ತಾರು ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೇಶದ ಖ್ಯಾತ ರಾಜಕೀಯ, ಧಾರ್ಮಿಕ ನಾಯಕರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದರು.
ಡಾ ಎಸ್ ಎಂ ಸೈಯದ್ ಖಲೀಲ್ ಅವರು 2022ರಲ್ಲಿ ಯುಎಇಯ 100 ಬುದ್ಧಿವಂತ ವ್ಯಕ್ತಿಗಳ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದರು.
ದುಬೈನಿಂದ ಇಂಗ್ಲಿಷ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ‘ಅರೇಬಿಯನ್ ಬ್ಯುಸಿನೆಸ್’ ಎಂಬ ಸಾಪ್ತಾಹಿಕವು ‘ಯುಎಇಯಲ್ಲಿನ 100 ಬುದ್ಧಿವಂತ ಜನರು(The 100 smartest people in the UAE) ಎಂಬ ವಿಶೇಷ ಸಂಚಿಕೆಯನ್ನು ಹೊರತಂದಿತ್ತು. ಈ ಪಟ್ಟಿಯಲ್ಲಿ ಡಾ ಸೈಯದ್ ಖಲೀಲುರ್ರಹ್ಮಾನ್ ಅವರ ಹೆಸರನ್ನು ಉಲ್ಲೇಖಿಸಿದ್ದರಿಂದ ನಮ್ಮ ದೇಶಕ್ಕೆ ಹೆಸರು ತಂದುಕೊಟ್ಟಿತ್ತು.
