- ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ ಪ್ರಧಾನಿ ಮಾರ್ಕ್ ರುಟ್ಟೆ
- ಜನವರಿ 2022ರಲ್ಲಿ ಅಧಿಕಾರ ವಹಿಸಿಕೊಂಡಿದ್ದ ಮೈತ್ರಿ ಸರ್ಕಾರ
ವಲಸೆ ನೀತಿಯ ಕುರಿತು ಒಮ್ಮತಕ್ಕೆ ಬರಲು ಸಮ್ಮಿಶ್ರ ಪಕ್ಷಗಳು ವಿಫಲವಾದ ಹಿನ್ನೆಲೆಯಲ್ಲಿ ಡಚ್(ನೆದರ್ ಲ್ಯಾಂಡ್ಸ್) ಪ್ರಧಾನಿ ಮಾರ್ಕ್ ರುಟ್ಟೆ ಅವರ ಸರ್ಕಾರವು ಪತನಗೊಂಡಿದೆ.
“ವಲಸೆ ನೀತಿಯ ಕುರಿತು ಮಿತ್ರ ಪಕ್ಷಗಳ ನಡುವಿನ ಬಿಕ್ಕಟ್ಟಿನ ಮಾತುಕತೆಗಳು ವಿಫಲವಾಗಿದೆ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳು ವಲಸೆ ನೀತಿಯ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಆದ್ದರಿಂದ ನಾನು ಇಡೀ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಶನಿವಾರ ರಾಜೀನಾಮೆಯನ್ನು ಡಚ್ ರಾಜ ವಿಲಿಯಮ್ ಅಲೆಕ್ಸಾಂಡರ್ ಅವರಿಗೆ ಸಲ್ಲಿಸುತ್ತೇನೆ” ಎಂದು ಪ್ರಧಾನ ಮಂತ್ರಿ ಮಾರ್ಕ್ ರುಟ್ಟೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
56ರ ಹರೆಯದ ರುಟ್ಟೆ, ಡಚ್‌ನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿಯಾಗಿದ್ದಾರೆ. 2010ರಿಂದ ಅಧಿಕಾರದಲ್ಲಿದ್ದರು. 2022ರ ಜನವರಿಯಲ್ಲಿ ಪ್ರಸ್ತುತ ಮೈತ್ರಿ ಸರ್ಕಾರವು ಅಧಿಕಾರ ವಹಿಸಿಕೊಂಡಿತ್ತು. ರುಟ್ಟೆಯವರ ನೇತೃತ್ವದಲ್ಲಿ ನಡೆದ ನಾಲ್ಕನೇ ಮೈತ್ರಿ ಸರ್ಕಾರ ಇದಾಗಿತ್ತು.
ಸರ್ಕಾರ ಪತನಕ್ಕೆ ಕಾರಣವೇನು?
18 ತಿಂಗಳ ಹಿಂದೆ ರಚನೆಯಾದ ಡಚ್ ಸರ್ಕಾರದ ಒಕ್ಕೂಟವು, ಎರಡು ವರ್ಷಗಳ ಅವಧಿಯ ನಂತರ ಪ್ರತಿ ತಿಂಗಳು 200 ಜನರಿಗೆ ಯುದ್ಧ ವಲಯಗಳಿಂದ ಬರುವ ನಿರಾಶ್ರಿತರಿಗೆ ಕುಟುಂಬದ ಜೊತೆಗೆ ಪುನರ್ಮಿಲನದ ಹಕ್ಕನ್ನು ಸೀಮಿತಗೊಳಿಸುವುದಾಗಿ ಪ್ರಧಾನಿ ರುಟ್ಟೆ ಇತ್ತೀಚೆಗೆ ಪ್ರಸ್ತಾಪಿಸಿದ್ದರು.
ಈ ಪ್ರಸ್ತಾಪಕ್ಕೆ ಸಮ್ಮಿಶ್ರ ಸರ್ಕಾರದ ಭಾಗವಾಗಿದ್ದ ಪಕ್ಷಗಳಾದ ಡಿ66 ಮತ್ತು ಕ್ರಿಶ್ಚಿಯನ್ ಯೂನಿಯನ್, ಇದನ್ನು ನಾವು ಒಪ್ಪುವುದಿಲ್ಲ ಎಂದಿದ್ದವು. ಇದರಿಂದಾಗಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಬೆಳವಣಿಗೆಯೇ ಸರ್ಕಾರ ಪತನಕ್ಕೆ ಪ್ರಮುಖ ಕಾರಣವಾಯಿತು.
ಪಿಎಂ ರುಟ್ಟೆ ಅವರ ಸ್ವಂತ ಪಕ್ಷವಾದ ಪೀಪಲ್ಸ್ ಪಾರ್ಟಿ ಫಾರ್ ಫ್ರೀಡಮ್ ಅಂಡ್ ಡೆಮಾಕ್ರಸಿಯು, ನೆದರ್‌ಲ್ಯಾಂಡ್‌ಗೆ ಆಗಮಿಸಿ ಆಶ್ರಯ ಕೋರುವವರ ಸಂಖ್ಯೆಯನ್ನು ಮಿತಿಗೊಳಿಸುವಂತೆ ಒಳಗಿನಿಂದ ಒತ್ತಡವನ್ನು ಎದುರಿಸುತ್ತಿದೆ. ನಿರಾಶ್ರಿತರ ಸಂಖ್ಯೆಯಿಂದ ದೇಶಕ್ಕೆ ಅಧಿಕ ಹೊರೆಯಾಗುತ್ತಿದೆ ಮತ್ತು ಈ ಬಗ್ಗೆ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದು ಪಕ್ಷದ ಹೆಚ್ಚು ಬಲಪಂಥೀಯ ಸದಸ್ಯರು ಒತ್ತಡ ಹೇರಿದ್ದರು ಎಂದು ವರದಿಯಾಗಿದೆ.
ಡಿ66 ಪಕ್ಷ ಮತ್ತು ಕ್ರಿಶ್ಚಿಯನ್ ಯೂನಿಯನ್ ಪಕ್ಷವು, ನೆದರ್ಲ್ಯಾಂಡ್ಸ್‌ಗೆ ನಿರಾಶ್ರಿತರು ಬರಲು ಕಷ್ಟಕರವಾಗಿಸುವ ಯಾವುದೇ ಕ್ರಮಗಳನ್ನು ಬೆಂಬಲಿಸುವುದಿಲ್ಲ ಎಂದು ರುಟ್ಟೆ ಅವರಿಗೆ ಎಚ್ಚರಿಕೆ ನೀಡಿದ್ದರು. ಸರಣಿ ಸಭೆಗಳು ನಡೆಸಿದ ಹೊರತಾಗಿಯೂ, ಮೈತ್ರಿ ಪಕ್ಷಗಳು ವಲಸೆ ನೀತಿಯ ಕುರಿತು ಒಮ್ಮತಕ್ಕೆ ಬರಲು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಇಡೀ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ಡಚ್ ಚುನಾವಣಾ ಆಯೋಗವು ನವೆಂಬರ್ ನಲ್ಲಿ ಮತ್ತೆ ಚುನಾವಣೆ ನಡೆಸಬಹುದು ಎಂದು ವರದಿಯಾಗಿದೆ.