ಗಾಜಾದಲ್ಲಿ ಯುದ್ಧ ಕೊನೆಗೊಳಿಸುವುದು ‘ಅಗತ್ಯ’ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಜರ್ಮನ್, ಯುಕೆ, ಫ್ರಾನ್ಸ್ ನಾಯಕರು ಒತ್ತಿ ಹೇಳಿದ್ದಾರೆ. ಒಂದು ವರ್ಷಕ್ಕೂ ಅಧಿಕ ಕಾಲದಿಂದ ಗಾಜಾದಲ್ಲಿ ಯುದ್ಧ ನಡೆಯುತ್ತಿದ್ದು ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್, ಜರ್ಮನಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
“ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸುವುದು, ಮಾನವೀಯ ನೆರವು ನಾಗರಿಕರನ್ನು ತಲುಪುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು, ಒತ್ತೆಯಾಳುಗಳನ್ನು ಅವರ ಕುಟುಂಬಗಳಿಗೆ ಮರಳಿಸುವುದು ತಕ್ಷಣದ ಅಗತ್ಯ” ಎಂದು ನಾಲ್ಕು ದೇಶಗಳ ನಾಯಕರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ | ಹಿಜ್ಬುಲ್ಲಾ ಉಗ್ರ ಸಂಘಟನೆಯೇ, ಹೀಗೆ ಬಿಂಬಿಸುತ್ತಿರುವುದೇಕೆ?
“ನಾಲ್ವರು ನಾಯಕರು ಬರ್ಲಿನ್‌ನಲ್ಲಿ ನಡೆದ ಸಭೆಯಲ್ಲಿ ಮಧ್ಯಪ್ರಾಚ್ಯದಲ್ಲಿನ ಘಟನೆಗಳನ್ನು ಚರ್ಚಿಸಿದ್ದಾರೆ. ನಿರ್ದಿಷ್ಟವಾಗಿ ಅಕ್ಟೋಬರ್ 7ರ ದಾಳಿಯ ಜವಾಬ್ದಾರಿಯನ್ನು ಹೊತ್ತಿರುವ ಯಾಹ್ಯಾ ಸಿನ್ವಾರ್‌ನ ಸಾವಿನ ಪರಿಣಾಮಗಳನ್ನು ಚರ್ಚಿಸಿದ್ದಾರೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಮತ್ತು ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ಇರಾನ್ ಸುಮಾರು 200 ಕ್ಷಿಪಣಿಗಳನ್ನು ಹಾರಿಸಿದೆ. ಗಾಜಾದಲ್ಲಿ 2023ರಲ್ಲಿ ಯುದ್ಧ ಆರಂಭವಾಗಿದೆ. ಪ್ಯಾಲೆಸ್ತೀನ್‌ನ ರಾಜಕೀಯ ಸಂಘಟನೆ ಹಮಾಸ್ ಯುದ್ದ ಆರಂಭಿಸಿದೆ. ಈ ದಾಳಿಯಲ್ಲಿ 1,206 ಜನರು ಸಾವನ್ನಪ್ಪಿದ್ದಾರೆ. ಇದಾದ ಬಳಿಕ ನಿರಂತರವಾಗಿ ದಾಳಿ, ಪ್ರತಿ ದಾಳಿಗಳು ನಡೆಯುತ್ತಿದೆ.
ಇಸ್ರೇಲ್ ಮಿಲಿಟರಿ ಪಡೆಯುವ ಗಾಜಾದಲ್ಲಿ ಸುಮಾರು 42,500 ಪ್ಯಾಲೇಸ್ತೇನಿಯನ್ನರನ್ನು ಕೊಂದಿದೆ. ಈ ಪೈಕಿ ಅಧಿಕ ಮಂದಿ ನಾಗರಿಕರಾಗಿದ್ದಾರೆ.
