ವ್ಯಕ್ತಿಯೊಬ್ಬರು ಮೂರು ಜನನಾಂಗಗಳನ್ನು ಹೊಂದಿದ್ದರು ಎಂಬ ಅಪರೂಪದ ಪ್ರಕರಣ ಇಂಗ್ಲೆಂಡ್‌ನಲ್ಲಿ ಬೆಳಕಿಗೆ ಬಂದಿದೆ. ವಿಶೇಷ ಎಂದರೆ, ಆತ ಮೂರು ಜನನಾಂಗ ಹೊಂದಿದ್ದ ಎಂಬುದು ಆ ವ್ಯಕ್ತಿ ಸಾವನ್ನಪ್ಪಿದ ಬಳಿಕವಷ್ಟೇ ಗೊತ್ತಾಗಿದೆ.
ಆ ವ್ಯಕ್ತಿ ತಾವು ಮೃತಪಟ್ಟ ಬಳಿಕ, ತಮ್ಮ ದೇಹವನ್ನು ‘ಯುನಿವರ್ಸಿಟಿ ಆಫ್ ಬರ್ಮಿಂಗ್‌ಹ್ಯಾಮ್’ನ ಮೆಡಿಕಲ್ ಕಾಲೇಜಿಗೆ ದಾನ ಮಾಡಬೇಕೆಂದು ಹೇಳಿಕೊಂಡಿದ್ದರು. ಅಲ್ಲದೆ, ದೇಹದಾನ ಮಾಡುವುದಾಗಿ ಕಾಲೇಜಿನ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಕೊಟ್ಟಿದ್ದರು.
78 ವರ್ಷದ ವಯಸ್ಸಾಗಿದ್ದ ಆ ವ್ಯಕ್ತಿ ಇತ್ತೀಚೆಗೆ ಸಾವನ್ನಪ್ಪಿದ್ದರು. ಅವರ ದೇಹವನ್ನು ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಲಾಗಿತ್ತು. ಅವರ ದೇಹವನ್ನಿಟ್ಟುಕೊಂಡು ಸಂಶೋಧನೆ ನಡೆಸುವಾಗ ಅವರಿಗೆ ಮೂರು ಜನನಾಂಗ ಇರುವುದು ಪತ್ತೆಯಾಗಿದೆ ಎಂಧು ಕಾಲೇಜಿನ ಸಂಶೋಧಕರು ತಿಳಿಸಿದ್ದಾರೆ.
ಈ ಬಗ್ಗೆ ಕಾಲೇಜಿನ ‘ದಿ ಜರ್ನಲ್ ಆಫ್ ಮೆಡಿಕಲ್ ಕೇಸ್ ರಿಪೋರ್ಟ್ಸ್’ನಲ್ಲಿ ಪ್ರಕಟಿಸಲಾಗಿದ್ದು, “ವ್ಯಕ್ತಿಯು ಬಾಹ್ಯವಾಗಿ ಒಂದು ಜನನಾಂಗ ಹೊಂದಿದ್ದರೆ, ಇನ್ನೆರಡು ಜನನಾಂಗಗಳು ಆಂತರಿಕವಾಗಿ (ದೇಹದೊಳಗೆ) ಇರುವುದು ಕಂಡುಬಂದಿದೆ” ಎಂದು ಹೇಳಲಾಗಿದೆ.
ಪ್ರಕರಣದಲ್ಲಿ ಅಚ್ಚರಿಯ ಸಂಗತಿ ಎಂದರೆ, ತಮಗೆ ಮೂರು ಜನನಾಂಗಗಳು ಇದ್ದದ್ದು ಸ್ವತಃ ಆ ವ್ಯಕ್ತಿಗೇ ತಿಳಿದಿರಲಿಲ್ಲ ಎಂದೂ ಸಂಶೋಧಕರು ತಿಳಿಸಿದ್ದಾರೆ.
2020ರಲ್ಲಿಯೂ ಇಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಯುರೋಪ್‌ನಲ್ಲಿ ಮೂರು ಜನನಾಂಗಗಳನ್ನು ಹೊಂದಿದ್ದ ಮಗುವೊಂದು ಜನಿಸಿತ್ತು. ಬಳಿಕ, ಅಗತ್ಯ ಶಸ್ತ್ರಚಿಕಿತ್ಸೆ ಮಾಡಿ, ಎರಡು ಜನನಾಂಗಗಳನ್ನು ತೆಗೆಯಲಾಗಿತ್ತು. ಇದೀಗ, ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.