ಭಾರತ-ಪಾಕಿಸ್ತಾನವೆಂಬ ಅವಳಿ ದೇಶಗಳು ರಾಜಕೀಯವಾಗಿ ಪರಸ್ಪರ ಬದ್ಧ ವೈರಿಗಳು. ಆದರೆ ಎರಡೂ ದೇಶಗಳ ಯುವಕ-ಯುವತಿಯರ ಪ್ರೇಮ ಪ್ರಕರಣಗಳು ಸರಹದ್ದಿನ ಗೆರೆಗಳನ್ನು ಆಗಾಗ ಅಳಿಸಿ ಹಾಕಿ ಸುದ್ದಿ ಮಾಡುತ್ತಲೇ ಇರುತ್ತವೆ. ಯುವಕ-ಯುವತಿಯರು ಪಡಬಾರದ ಪಾಡು ಪಟ್ಟು ಉಭಯ ದೇಶಗಳ ಗಡಿಗಳನ್ನು ದಾಟಿ ಪ್ರೇಮಿಗಳನ್ನು ಅರಸುವ ನಿದರ್ಶನಗಳು ನೂರಾರು.
ತನ್ನ ನಾಲ್ಕು ಚಿಕ್ಕ ಮಕ್ಕಳ ಜೊತೆ ಗಡಿ ದಾಟಿ ಬಂದು ದೆಹಲಿಯ ಹೊರವಲಯದ ಸಚಿನ್ ಎಂಬ ತನ್ನ ಪ್ರೇಮಿಯನ್ನು ಕೂಡಿಕೊಂಡಿದ್ದ ಪಾಕಿಸ್ತಾನಿ ಯುವತಿಯೊಬ್ಬಳನ್ನು ಪೊಲೀಸರು 2023ರಲ್ಲಿ ಬಂಧಿಸಿದ್ದರು. ಪಾಕಿಸ್ತಾನದಿಂದ ನೇಪಾಳ ತಲುಪಿ ಅಲ್ಲಿಂದ ಭಾರತವನ್ನು ಪ್ರವೇಶಿಸಿದ್ದಳು ಈ ಯುವತಿ.
ಇದೀಗ ಇಂತಹುದೇ ಮಗದೊಂದು ಪ್ರೇಮಪ್ರಕರಣ ವರದಿಯಾಗಿದೆ. ಈ ಸಲದ ಸರದಿ ಉತ್ತರಪ್ರದೇಶದ ಅಲೀಗಢ ಜಿಲ್ಲೆಯ ತರುಣ ಬಾದಲ್ ಬಾಬುವಿನದು. ಪಾಕಿಸ್ತಾನದ ಪಂಜಾಬ್ ರಾಜ್ಯದ ಮಂಡಿ ಬಹಾವುದ್ದೀನ್ ಎಂಬ ಪಟ್ಟಣದ ಜೈಲು ಕಂಬಿ ಎಣಿಸುತ್ತಿದ್ದಾನೆ.
ಈ ಅಪರಿಚಿತ ತರುಣನ ಕುರಿತು ಸ್ಥಳೀಯರು ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಬುವನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಮಂಡಿ ಬಹಾವುದ್ದೀನ್ ನ ಯುವತಿಯೊಬ್ಬಳ ಜೊತೆ ಭಾರತದ ಬಾದಲ್ ಬಾಬು ಫೇಸ್ಬುಕ್ ನಲ್ಲಿ ಗೆಳೆತನ ಬೆಳೆಸಿದ್ದಾನೆ. ಗೆಳೆತನ ಪ್ರೇಮದ ತಿರುವು ಪಡೆದಿದೆ. ಈ ಯುವತಿ ತೀವ್ರ ಧಾರ್ಮಿಕ ಕುಟುಂಬವೊಂದಕ್ಕೆ ಸೇರಿದವಳು. ಪಾಕಿಸ್ತಾನದ ಪೊಲೀಸರು ಈಕೆಯ ಕುಟುಂಬವನ್ನು ವಿಚಾರಣೆಗೆ ಕರೆದಿಲ್ಲ.
“ಬಟ್ಟೆ ಹೊಲಿಯುವ ಕೆಲಸಕ್ಕೆಂದು ದಿಲ್ಲಿಗೆ ಹೋಗಿದ್ದ ನಮ್ಮ ಮಗ. ದೀಪಾವಳಿಗೆ ಇನ್ನೂ 15 ದಿನ ಬಾಕಿ ಇರುವಂತೆಯೇ ಅಲ್ಲಿಂದ ಮತ್ತೆಲ್ಲಿಗೋ ಹೋಗಿದ್ದಾನೆ. ಒಮ್ಮೆ ಅವನೇ ಫೋನ್ ಮಾಡಿ ಗೆಳೆಯನ ಫೋನಿನಿಂದ ಮಾತಾಡುತ್ತಿರುವುದಾಗಿಯೂ, ತನ್ನ ಬಗ್ಗೆ ಚಿಂತೆ ಮಾಡಬಾರದೆಂದೂ ತಿಳಿಸಿದ್ದ. ಮತ್ತೊಮ್ಮೆ ವಿಡಿಯೋ ಕಾಲ್ ಮಾಡಿ ದುಬೈನಲ್ಲಿರುವುದಾಗಿ ಹೇಳಿದ್ದ” ಎನ್ನುತ್ತಾರೆ ಬಾದಲ್‌ನ ಪೋಷಕರು.