ಭಾರತವು ‘ಭಾರೀ ಸುಂಕ’ಗಳನ್ನು ವಿಧಿಸುತ್ತದೆ ಎಂದು ಪುನರುಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ನೀವು ಆ (ಭಾರತ) ದೇಶದಲ್ಲಿ ಏನನ್ನೂ ಮಾರಾಟ ಮಾಡಲು ಸಾಧ್ಯವಿಲ್ಲ’ ಎಂದು ಶುಕ್ರವಾರ ಹೇಳಿದ್ದಾರೆ. ಭಾರತವು ತನ್ನ ಸುಂಕಗಳನ್ನು ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂದೂ ಹೇಳಿದ್ದಾರೆ.
ಅಮೆರಿಕದ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಭಾರತವು ನಮಗೆ ಭಾರೀ ಸುಂಕಗಳನ್ನು ವಿಧಿಸುತ್ತದೆ. ನೀವು ಭಾರತದಲ್ಲಿ ಏನನ್ನೂ ಮಾರಾಟ ಮಾಡಲು ಸಹ ಸಾಧ್ಯವಿಲ್ಲ. ಈ ಅವರು (ಭಾರತ) ತಾವು ವಿಧಿಸುವ ಸುಂಕಗಳನ್ನು ಕಡಿತಗೊಳಿಸಲು ಬಯಸುತ್ತಿದ್ದಾರೆ. ಏಕೆಂದರೆ, ಕೊನೆಗೂ ಯಾರೋ ಅವರನ್ನು ಅವರ ಧೋರಣೆಳನ್ನು ಬಹಿರಂಗಪಡಿಸುತ್ತಿದ್ದಾರೆ” ಎಂದಿದ್ದಾರೆ.
ಇದೇ ವರ್ಷದ ಜನವರಿ 20ರಂದು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಟ್ರಂಪ್, ಭಾರತ ಮತ್ತು ಇತರ ದೇಶಗಳು ಹೆಚ್ಚಿನ ಸುಂಕ ವಿಧಿಸುತ್ತಿರುವ ಕಾರಣಕ್ಕಾಗಿ ಭಾರತವನ್ನು ನಿರಂತರವಾಗಿ ಟೀಕಿಸಿದ್ದಾರೆ. ಇತ್ತೀಚೆಗೆ ಅವರು, ‘ಭಾರತ ವಿಧಿಸುವ ಹೆಚ್ಚಿನ ಸುಂಕಗಳು ಬಹಳ ಅನ್ಯಾಯ. ಭಾರತವು ವಾಹನಗಳ ಮೇಲೆ ನಮಗೆ ಶೇಕಡಾ 100ಕ್ಕಿಂತ ಹೆಚ್ಚು ಸುಂಕಗಳನ್ನು ವಿಧಿಸುತ್ತದೆ’ ಎಂದೂ ಹೇಳಿದ್ದರು.
“ಇತರ ದೇಶಗಳು ದಶಕಗಳಿಂದ ನಮ್ಮ ವಿರುದ್ಧ ಸುಂಕಗಳನ್ನು ಹೇರುತ್ತಿವೆ. ಈಗ ಆ ದೇಶಗಳ ವಿರುದ್ಧ ಸುಂಕಗಳನ್ನು ವಿಧಿಸುವ ಸರದಿ ನಮ್ಮದು” ಎಂದು ಅಧ್ಯಕ್ಷರಾಗಿ ಮೊದಲ ಭಾಷಣದಲ್ಲೇ ಹೇಳಿದ್ದರು.
ಇನ್ನು, ಅಮೆರಿಕ ಸೆನೆಟ್‌ನಲ್ಲಿ ತಮ್ಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಟ್ರಂಪ್, “ಯುರೋಪಿಯನ್ ಒಕ್ಕೂಟ, ಚೀನಾ, ಬ್ರೆಜಿಲ್, ಭಾರತ, ಮೆಕ್ಸಿಕೊ ಹಾಗೂ ಕೆನಡಾ – ನೀವು ಈ ರಾಷ್ಟ್ರಗಳ ಬಗ್ಗೆ ಕೇಳಿದ್ದೀರಾ? ಈ ರಾಷ್ಟ್ರಗಳು ಮತ್ತು ಇತರ ರಾಷ್ಟ್ರಗಳು ನಾವು ವಿಧಿಸುವುದಕ್ಕಿಂತ ಹೆಚ್ಚಿನ ಸುಂಕಗಳನ್ನು ನಮಗೆ ವಿಧಿಸುತ್ತವೆ. ಇದು ತುಂಬಾ ಅನ್ಯಾಯ” ಎಂದಿದ್ದರು.
ಕಳೆದ ತಿಂಗಳು ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ, “ಭಾರತವು ಸುಂಕ ವಿಧಿಸುವಲ್ಲಿ ಭಾರೀ ಬಲಶಾಲಿಯಾಗಿದೆ. ನಾನು ಅವರನ್ನು ದೂಷಿಸುವುದಿಲ್ಲ. ಆದರೆ ಇದು ವ್ಯವಹಾರ ಮಾಡುವ ವಿಭಿನ್ನ ಮಾರ್ಗವಾಗಿದೆ. ಭಾರತಕ್ಕೆ ಮಾರಾಟ ಮಾಡುವುದು ತುಂಬಾ ಕಷ್ಟ. ಏಕೆಂದರೆ ಅಲ್ಲಿ ವ್ಯಾಪಾರ ಅಡೆತಡೆಗಳು, ಹೆಚ್ಚಿನ ಸುಂಕಗಳು ಇವೆ” ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದರು.
ವರದಿಗಳ ಪ್ರಕಾರ, ಭಾರತದ ಜೊತೆ ಅಮೆರಿಕದ ಒಟ್ಟು ಸರಕುಗಳ ವ್ಯಾಪಾರವು 2024ರಲ್ಲಿ ಅಂದಾಜು 129.2 ಬಿಲಿಯನ್ ಡಾಲರ್ ಆಗಿತ್ತು. 2024ರಲ್ಲಿ ಭಾರತಕ್ಕೆ ಅಮೆರಿಕದ ಸರಕುಗಳ ರಫ್ತು ಮೌಲ್ಯ 41.8 ಬಿಲಿಯನ್ ಯುಎಸ್ ಡಾಲರ್ ಆಗಿದ್ದರೆ, ಭಾರತದ ಜೊತೆಗಿನ ಅಮೆರಿಕದ ಸರಕುಗಳ ವ್ಯಾಪಾರ ಕೊರತೆಯು 45.7 ಬಿಲಿಯನ್ ಯುಎಸ್ ಡಾಲರ್ ಆಗಿತ್ತು. ಇದು 2023 ಕ್ಕಿಂತ 5.4% ಅಂದರೆ, 2.4 ಬಿಲಿಯನ್ ಡಾಲರ್ ಹೆಚ್ಚಾಗಿದೆ.