ತನ್ನ ಮೂರು ದಶಕಗಳ ಮೃತ್ತಿಜೀವನದಲ್ಲಿ ಸುಮಾರು 300 ಮಕ್ಕಳ ಮೇಲೆ ಶಸ್ತ್ರಚಿಕಿತ್ಸಕನೊಬ್ಬ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಪ್ರಕರಣ ಫ್ರಾನ್ಸ್‌ನಲ್ಲಿ ಬೆಳಕಿಗೆ ಬಂದಿದೆ. ಕಾಮುಕ ಆರೋಪಿ, ಶಸ್ತ್ರಚಿಕಿತ್ಸಕ (ಸರ್ಜನ್) ಜೊಯೆಲ್ ಲೆ ಸ್ಕೌರ್ನೆಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದ್ದು, ತನ್ನ ಕೃತ್ಯವನ್ನು ಆತ ಒಪ್ಪಿಕೊಂಡಿದ್ದಾನೆ.
ಈ ಪ್ರಕರಣ ಬಳೆಕಿಗೆ ಬಂದ ಬಳಿಕ ಇಡೀ ಫ್ರಾನ್ಸ್ ಆಘಾತಕ್ಕೊಳಗಾಗಿದೆ. ಇಂತಹ ಸರ್ಜನ್‌ವೊಬ್ಬ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾನೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆದರೂ, ಈತ ಈವರೆಗೆ ಸಿಕ್ಕಿಬೀಳದೇ ಇದ್ದದ್ದು ಹೇಗೆ ಎಂಬ ಪ್ರಶ್ನೆ ವ್ಯಕ್ತವಾಗಿದೆ.
ಕಾಮುಕ ಸರ್ಜನ್, 1989ರಿಂದ 2014ರವರೆಗೆ 158 ಬಾಲಕರು ಮತ್ತು 141 ಬಾಲಕಿಯರು ಸೇರಿ ಒಟ್ಟು 299 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕಾಮುಕ ಸರ್ಜನ್‌ನಿಂದ ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳಲ್ಲಿ ಬಹುತೇಕರು ಅಪರಾಧಗಳು ನಡೆದಾಗ ಸರಾಸರಿ 11 ವರ್ಷ ವಯಸ್ಸಿನವರಾಗಿದ್ದರು ಎಂದು ವರದಿಯಾಗಿದೆ.
ಇದು ಫ್ರೆಂಚ್ ಇತಿಹಾಸದಲ್ಲಿ ಅತಿದೊಡ್ಡ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವೆಂದು ಹೇಳಲಾಗಿದೆ. ಆತನ ವಿರುದ್ಧದ ಆರೋಪಿಗಳು ನ್ಯಾಯಾಲಯದಲ್ಲಿ ಸಾಬೀತಾದರೆ ಫ್ರಾನ್ಸ್ ಕಾನೂನಿನ ಪ್ರಕಾರ ಆತನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಆರೋಪಿಯನ್ನು 2017ರ ಮೇ 2 ರಂದು ಬಂಧಿಸಲಾಗಿದೆ. ಆತನಿಗೆ ಈಗಾಗಲೇ ಬೇರೊಂದು ಪ್ರಕರಣದಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ. ನಾಲ್ವರು ಅಪ್ರಾಪ್ತರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದಲ್ಲಿ ಕಾಮುಕ ಸರ್ಜನ್ ಸ್ಕೌರ್ನೆಕ್‌ಗೆ 2020ರಲ್ಲಿ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ತನಿಖಾಧಿಕಾರಿಗಳು ಆರೋಪಿ ಸ್ಕೌರ್ನೆಕ್‌ನ ಕಂಪ್ಯೂಟರ್‌ಅನ್ನು ವಶಕ್ಕೆ ಪಡೆದಿದ್ದು, ಅದರಲ್ಲಿದ್ದ ರೋಗಿಗಳ ವರದಿಗಳಿಂದ ನೂರಾರು ಸಂತ್ರಸ್ತರನ್ನು ಗುರುತಿಸಿದ್ದಾರೆ. ಹಲವಾರು ಸಂತ್ರಸ್ತರನ್ನು ವಿಚಾರಣೆಗೆ ಒಳಪಡಿಸಿದ್ದು, ಅನೇಕರು ತಮಗೆ ‘ಅರವಳಿಕೆ’ ಚುಚ್ಚುಮದ್ದು ನೀಡಿ, ತಮ್ಮ ಮೇಲೆ ಸರ್ಜನ್ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ಆತ್ಮಹತ್ಯೆ, ಪ್ರತಿಭಟನೆ, ಹೊರಹಾಕುವಿಕೆ, ಬಂಧನ: ಕೆಐಐಟಿ ವಿವಿಯಲ್ಲಿ ಆಗಿದ್ದೇನು?
ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಕುರಿತ ಫ್ರಾನ್ಸ್‌ನ ‘ಫ್ರೀಡಂ ಕಮಿಷನ್’ನ 2023ರ ವರದಿ ಪ್ರಕಾರ, ಫ್ರಾನ್ಸ್‌ನಲ್ಲಿ ಪ್ರತಿ ವರ್ಷ ಅಂದಾಜು 1,60,000 ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಾರೆ. ಆದರೆ, ಸಂತ್ರಸ್ತರಲ್ಲಿ ಕೆಲವರು ತಮ್ಮ ಮೇಲಿನ ದೌರ್ಜನ್ಯಗಳ ಬಗ್ಗೆ ಎಂದಿಗೂ, ಎಲ್ಲಿಯೂ ಬಹಿರಂಗಪಡಿಸುವುದಿಲ್ಲ. ಹೀಗಾಗಿ, ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ತೀರಾ ಕಡಿಮೆ ಇದೆ ಎಂದು ವರದಿ ಹೇಳಿದೆ.
ನ್ಯಾಯ ಸಚಿವಾಲಯದ ಅಂಕಿಅಂಶಗಳನ್ನು ಉಲ್ಲೇಖಿಸಿ, ಅಪ್ರಾಪ್ತರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 10ರಲ್ಲಿ 1 ಮತ್ತು ಲೈಂಗಿಕ ದೌರ್ಜನ್ಯಕ್ಕೆ ಪ್ರಕರಣಗಳಲ್ಲಿ 6 ದೂರುಗಳಲ್ಲಿ 1 ಪ್ರಕರಣದಲ್ಲಿ ಮಾತ್ರವೇ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
2007ರಲ್ಲಿ ಮೃತಪಟ್ಟ ರೋಮನ್ ಕ್ಯಾಥೋಲಿಕ್ ಪಾದ್ರಿ ಅಬ್ಬೆ ಪಿಯರ್ ವಿರುದ್ಧವೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳಿದ್ದವು.