ದ್ವೇಷ ಹಗೆಗಳ ಗಡಿ ಮಾನವೀಯತೆ ನೆಲೆಯಲ್ಲಿ ಹೇಗೆ ಸಮ್ಮಿಳಿತವಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಪಾಕಿಸ್ತಾನ ದ 19 ವರ್ಷದ ಯುವತಿಯ ಹೃದಯ ಕಸಿ ಚಿಕಿತ್ಸೆಯನ್ನು ಭಾರತದ ವೈದ್ಯರು ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಕರಾಚಿಯ 19 ವರ್ಷದ ಆಯೆಶಾ ರಶಾನ್ ಎಂಬ ಯುವತಿಯ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಚೆನ್ನೈನ ಎಂಜಿಎಂ ಹೆಲ್ತ್‌ಕೇರ್ ವೈದ್ಯರು ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಮೆದುಳು ನಿಷ್ಕ್ರಿಯಗೊಂಡ ದಾನಿಯೊಬ್ಬರು ಲಭ್ಯವಾದ ನಂತರ ಆಯೆಶಾ ರಶಾನ್ ಅವರನ್ನು ಜನವರಿ 31, 2014ರಂದು ಹೃದಯ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಎಲ್ಲ ನಿಬಂಧನೆಗಳು ಪೂರ್ಣಗೊಂಡ ನಂತರ ಈಕೆ ಆಸ್ಪತ್ರೆಯಿಂದ ತವರಿಗೆ ಮರಳಿದ್ದಾರೆ.
ಹೃದಯ ಮತ್ತು ಶ್ವಾಶಕೋಶ ಕಸಿ ಮತ್ತು ಯಾಂತ್ರಿಕ ಪರಿಚಲನ ಬೆಂಬಲಿತ ಸಂಸ್ಥೆಯ ಹೃದಯ ವಿಜ್ಞಾನಗಳ ನಿರ್ದೇಶಕ ಹಾಗೂ ಅಧ್ಯಕ್ಷರಾದ ಡಾ. ಕೆ ಆರ್ ಬಾಲಕೃಷ್ಣನ್ ಮಾತನಾಡಿ, ರಶಾನ್ ಅವರು 2019ರಲ್ಲಿ ತಮಗೆ 14 ವರ್ಷವಿರುವ ಸಂದರ್ಭದಲ್ಲಿ ಹಲವು ಹೃದಯ ವೈಫಲ್ಯ ಹಾಗೂ ಕಳಪೆ ಹೃದಯ ಕಾರ್ಯ ವೈಫಲ್ಯದ ಕಾರಣದಿಂದ ಭಾರತಕ್ಕೆ ಆಗಮಿಸಿದ್ದರು. ಆಕೆ ಆ ಸಮಯದಲ್ಲಿ ತುಂಬ ಅನಾರೋಗ್ಯಗೊಂಡಿದ್ದರು. ಹೃದಯ ಸ್ತಂಭನಕ್ಕೂ ಒಳಗಾಗಿದ್ದರು. ಇದರಿಂದ ಆಕೆಗೆ ಸಿಪಿಆರ್(ಹೃದಯ ಮತ್ತು ಶ್ವಾಶಕೋಶ ಪ್ರಚೋದಕ) ಅನ್ನು ಪುನರುಜ್ಜೀವನಗೊಳಿಸಬೇಕಿತ್ತು. ಅಲ್ಲದೆ ಪರಿಚಲನೆಯನ್ನು ಉಳಿಸಿಕೊಳ್ಳಲು ಇಸಿಎಂಒ ಯಂತ್ರವನ್ನು ಅಳವಡಿಸಬೇಕಿತ್ತು. ನಾವು ಕೃತಕ ಹೃದಯ ನಳಿಕೆಯನ್ನು ಅಳವಡಿಸಿದಾಗ ಕ್ರಮೇಣವಾಗಿ ಆಕೆ ಚೇತರಿಸಿಕೊಂಡು ತನ್ನ ದೇಶಕ್ಕೆ ತೆರಳಿದ್ದರು” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಳ್ಳುಗಾರರನ್ನು ಸೋಲಿಸುವ ಸಮಯ ಬಂದಿದೆ; ಮತದಾರರೇ ಮುಂದಾಗಬೇಕಿದೆ
“ಮುಂದಿನ ಕೆಲವು ವರ್ಷದ ನಂತರ ರಶಾನ್ ಅವರ ಹೃದಯ ಕವಾಟಗಳು ಸೋರಿಕೆಯಾದ ಕಾರಣ ಮತ್ತೆ ಅನಾರೋಗ್ಯಗೊಂಡಿದ್ದರು. ಹೃದಯದ ಬಲಭಾಗದಲ್ಲಿ ತೀವ್ರ ವೈಫಲ್ಯವುಂಟಾಗಿ ಸೋಂಕು ಉಂಟಾಗಿತ್ತು. ಈ ರೀತಿ ಆದರೆ ಚಿಕಿತ್ಸೆ ನೀಡಲು ತುಂಬ ಕಷ್ಟವಾಗುತ್ತದೆ. ಆ ಸಂದರ್ಭದಲ್ಲಿ ಆಕೆಗೆ ವಿಸಾ ಸಿಗಲು ತುಂಬ ಕಷ್ಟವಾಗಿತ್ತು. ಆಕೆಗೆ ತಾಯಿ ಮಾತ್ರ ಇದ್ದು ಆರ್ಥಿಕವಾಗಿ ಸದೃಢರಾಗಿರಲಿಲ್ಲ. ನಾವು ಆಸ್ಪತ್ರೆ ವೆಚ್ಚವನ್ನು ಒಳಗೊಂಡು ಎಲ್ಲ ವೆಚ್ಚವನ್ನು ಭರಿಸಿದೆವು” ಎಂದು ಬಾಲಕೃಷ್ಣನ್ ಹೇಳಿದರು.
ಚೆನ್ನೈ ಮೂಲದ ಸ್ವಯಂಸೇವಾ ಸಂಸ್ಥೆ ಐಶ್ವರ್ಯ ಟ್ರಸ್ಟ್ ಹಾಗೂ ಇತರ ಕಸಿ ರೋಗಿಗಳು ನೆರವು ನೀಡಿದ ಕಾರಣ ರಶಾನ್ ಅವರಿಗೆ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಯಿತು.
ಮೆದುಳು ನಿಷ್ಕ್ರಿಯಗೊಂಡ ದೆಹಲಿ ಮೂಲದ ವ್ಯಕ್ತಿಯೊಬ್ಬರು ತಮ್ಮ ಅಂಗಾಗಗಳನ್ನು ದಾನ ಮಾಡಿದ ನಂತರ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
“ಹಣವಿಲ್ಲದಿದ್ದರೆ ಈ ರೀತಿಯ ಚಿಕಿತ್ಸೆಗಳು ದೊಡ್ಡ ಸವಾಲಾಗುತ್ತದೆ. ಈ ಚಿಕಿತ್ಸೆಗೆ 30 ರಿಂದ 40 ಲಕ್ಷ ರೂ.ಗಳ ಆರ್ಥಿಕ ನೆರವು ಬೇಕಾಗಿತ್ತು. ಇದು ಖಾಸಗಿ ಆಸ್ಪತ್ರೆಯಾದ ಕಾರಣ ನಾವು ನಮ್ಮದೆ ಸಂಪನ್ಮೂಲಗಳ ಮೂಲಕ ಟ್ರಸ್ಟ್‌ನ ಅಡಿಯಲ್ಲಿ ಹಣವನ್ನು ಸಂಗ್ರಹಿಸಿದೆವು. ಇದು ಅತ್ಯಂತ ಸವಾಲಿನದಾಗಿತ್ತು. ಇವೆಲ್ಲವನ್ನು ಮೀರಿ ನಾವು ಯುವತಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದೇವೆ” ಎಂದು ಬಾಲಕೃಷ್ಣನ್ ಹೇಳಿದರು.
ಫ್ಯಾಷನ್ ಡಿಸೈನರ್ ಆಗಬೇಕು ಎಂಬ ಆಕಾಂಕ್ಷೆ ಹೊಂದಿರುವ ಆಯೆಶಾ ರಶಾನ್ ಚಿಕಿತ್ಸೆ ಹಾಗೂ ವಿಸಾ ನೀಡಿದ್ದಕ್ಕೆ ಭಾರತ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಮಾಧ್ಯಮಗಳ ವರದಿಯಂತೆ ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನದ 6 ಮಂದಿ ಭಾರತದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
