ಸಿಂಗಾಪುರದ ಶಾಲೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಈ ಅಗ್ನಿ ದುರಂತದಲ್ಲೇ ನಟ, ಆಂಧ್ರಪ್ರದೇಶ ಸಚಿವ ಪವನ್ ಕಲ್ಯಾಣ್ ಅವರ 7 ವರ್ಷದ ಮಗ ಸೇರಿದಂತೆ 20 ಮಂದಿಗೆ ಗಾಯವಾಗಿದೆ. ಆರು ವಯಸ್ಕರಿಗೂ ಗಾಯವಾಗಿದೆ.
ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆಕೆ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. “ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಅಕ್ರಮ ನಡೆದಿರುವುದು ಪತ್ತೆಯಾಗಿಲ್ಲ. ಪೊಲೀಸ್ ತನಿಖೆ ನಡೆಯುತ್ತಿದೆ” ಎಂದು ನ್ಯೂಸ್ ಏಷ್ಯಾ ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ ನೇಮಕ
ಕೆಲವು ಮಕ್ಕಳು ಪ್ರಜ್ಞೆ ತಪ್ಪಿದ್ದರು. ಕೆಲವು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ ಎಂದು ಅಗ್ನಿ ದುರಂತ ನಡೆದ ಸ್ಥಳದಲ್ಲಿದ್ದ ವೈಯಕ್ತಿಕ ತರಬೇತುದಾರರಾದ, ಪ್ರತ್ಯಕ್ಷದರ್ಶಿ ಶೇಕ್ ಅಮಿರುದ್ದೀನ್ ಹೇಳಿದ್ದಾರೆ.
ಶಾಲೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರ ಮಾರ್ಕ್ ಶಂಕರ್ ಗಾಯಗೊಂಡಿದ್ದಾರೆ ಎಂದು ಜನ ಸೇನಾ ಪಕ್ಷ ವಿಜಯವಾಡದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಮಾರ್ಕ್ ಶಂಕರ್ ಅವರ ಕೈ ಮತ್ತು ಕಾಲುಗಳಲ್ಲಿ ಸುಟ್ಟ ಗಾಯಗಳಾಗಿವೆ. ಹೊಗೆ ಉಸಿರಾಡಿದ ಕಾರಣ ಶ್ವಾಸಕೋಶದ ಮೇಲೂ ಪರಿಣಾಮ ಬೀರಿದೆ. ಪ್ರಸ್ತುತ ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪವನ್ ಕಲ್ಯಾಣ್ ಸಿಂಗಾಪುರಕ್ಕೆ ಪ್ರಯಾಣಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹತ್ತಿರದ ಸ್ಥಳದಲ್ಲಿದ್ದ ಕೆಲವು ಕಟ್ಟಡ ಕಾರ್ಮಿಕರು ಮಕ್ಕಳನ್ನು ರಕ್ಷಿಸಲು ಸಹಾಯ ಮಾಡಿದರು. 30 ನಿಮಿಷಗಳಲ್ಲಿ ಮೂರು ‘ವಾಟರ್ ಜೆಟ್’ಗಳ ಮೂಲಕ ಬೆಂಕಿಯನ್ನು ನಂದಿಸಲಾಗಿದೆ, ತನಿಖೆ ನಡೆಯುತ್ತಿದೆ.
