ಅದು 1942ರ ಸಮಯ. ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್‌ನ ಆಡಳಿತವು ನರಮೇಧ ನಡೆಸಲು ಆರಂಭಿಸಿದ್ದ ಕಾಲ. ಇಡೀ ಜಗತ್ತನ್ನೇ ಗೆಲ್ಲುತ್ತೆನೆಂದು ಹಿಟ್ಲರ್ ತನ್ನ ನಾಝಿ ಪಡೆಯೊಂದಿಗೆ ನಾನಾ ದೇಶಗಳ ಮೇಲೆ ಆಕ್ರಮ ನಡೆಸಲು ಆರಂಭಿಸಿದ್ದ ಮತ್ತು ಎರಡನೇ ಮಹಾಯುದ್ಧ ನಡೆಯುತ್ತಿದ್ದ ಸಮಯ. ಹಿಟ್ಲರ್‌ನ ನಾಝಿ ಪಡೆ ಫ್ರಾನ್ಸ್‌ನ ಪ್ಯಾರಿಸ್‌ಗೂ ನುಗ್ಗಿ ಯಹೂದಿಗಳ ನರಮೇಧ ನಡೆಸಲಾರಂಭಿಸಿತ್ತು. ಅಂದು, ನಾಝಿಗಳ ನರಮೇಧದಿಂದ ತಪ್ಪಿಸಿಕೊಂಡು ಬದುಕುಳಿದಿದ್ದ ಅಂದಿನ ಬಾಲಕಿ (ಈಗ 88 ವರ್ಷದ ಮಹಿಳೆ) ಕಳೆದ ವಾರ ಸಾವನ್ನಪ್ಪಿದ್ದಾರೆ. ಅವರೇ ಸುಝೇನ್ ರಪ್ಪಪೋರ್ಟ್ ರಿಪ್ಟನ್.
1942ರಲ್ಲಿ ಸುಝೇನ್ ಅವರಿಗೆ ಕೇವಲ 6 ವರ್ಷಗಳು. ಅವರು ತಮ್ಮ ಪೋಷಕರೊಂದಿಗೆ ಪ್ಯಾರಿಸ್‌ನಲ್ಲಿ ನೆಲೆಸಿದ್ದರು. ಆದರೆ, ಪ್ಯಾರಿಸ್ ಮೇಲೆ ನಾಝಿಗಳು ದಾಳಿ ಮಾಡಿ, ಭೀಕರ ನರಮೇಧ ನಡೆಸಿದರು. ಆ ವೇಳೆ, ಸುಝೇನ್ ಅವರ ತಂದೆ-ತಾಯಿಯನ್ನು ಬಂಧಿಸಿ, ಆಶ್ವಿಟ್ಜ್-ಬಿರ್ಕೆನಾವ್ ಎಂಬ ಕುಖ್ಯಾತ ಹತ್ಯಾಕಾಂಡದ ಶಿಬಿರಕ್ಕೆ ಎಳೆದೊಯ್ಯಲಾಗಿತ್ತು. ಅದೃಷ್ಟವಶಾತ್ ಸುಝೇನ್ ಅವರನ್ನು ನೆರೆಹೊರೆಯವರು ರಕ್ಷಿಸಿದ್ದರು. ಅಂದು ಬದುಕುಳಿದ ಸುಝೇನ್ ಅವರ ಬದುಕಿನ ದಿಕ್ಕು ಅಂದೇ ಬದಲಾಗಿತ್ತು.
ಸುಝೇನ್ ಅವರನ್ನು ಪಕ್ಕದ ಮನೆಯವರು ರಕ್ಷಿಸಿ, ವಾರಗಳ ಕಾಲ ತಮ್ಮ ಅಡುಗೆ ಮನೆಯಲ್ಲಿಯೇ ಬಚ್ಚಿಟ್ಟಿದ್ದರು. ಯುದ್ಧ ಮುಗಿದ ಬಳಿಕ, ಅವರನ್ನು ಇಂಗ್ಲೆಂಡ್‌ಗೆ ಸ್ಥಳಾಂತರಿಸಲಾಯಿತು. ಇಂಗ್ಲೆಂಡ್‌ಗೆ ಬಂದ ಸುಝೇನ್ ಅವರು ಲಂಡನ್‌ನಲ್ಲಿ ಶಿಕ್ಷಣ ಪಡೆದರು. ಮಾತ್ರವಲ್ಲ,ಸಮಾಜದಲ್ಲಿ ಸಕ್ರಿಯ ಸಾಮಾಜಿಕ ಕಾರ್ಯಕರ್ತೆಯಾಗಿ ತೊಡಗಿಸಿಕೊಂಡರು. ಆ ನಂತರ ಲೀಡ್ಸ್‌ಗೆ ಬಂದು ನೆಲೆಸಿದ ಅವರು ‘ಲೀಡ್ಸ್ ಜ್ಯೂಯಿಶ್ ಹೌಸಿಂಗ್ ಅಸೋಸಿಯೇಷನ್’ನಲ್ಲಿ (LJHA) 13 ವರ್ಷಗಳ ಕಾಲ ಕೆಲಸ ಮಾಡಿದರು.
ಅವರ ನಡೆ, ನುಡಿ, ಕೆಲಸಗಳನ್ನು ಹತ್ತಿರರಿಂದ ನೋಡಿದ್ದ LJHA ಸಮುದಾಯ ಸಂಯೋಜಕ ಸೈಮನ್ ಫಿಲಿಪ್ಸ್ ಅವರು, “ಸುಝೇನ್ ಯಾವಾಗಲೂ ನಗುಮುಖದಿಂದ ನಮ್ಮೊಂದಿಗೆ ಇರುತ್ತಿದ್ದರು. ಅವರು ನಿಜವಾದ ‘ಎಯ್ಸೆತ್ ಚಾಯಿಲ್’ (ಮೌಲ್ಯಯುತ ಮಹಿಳೆ) ಆಗಿದ್ದರು,” ಎಂದು ಸ್ಮರಿಸಿದ್ದಾರೆ.

ಸುಝೇನ್ ರಪ್ಪಪೋರ್ಟ್ ರಿಪ್ಟನ್ ಅವರು ತಾವು ನಾಝಿ ಆಕ್ರಮಣದ ಸಮಯದಲ್ಲಿ ಕಂಡಿದ್ದ, ಅದುರಿಸಿದ್ದ ಭೀಕರತೆಯನ್ನು, ನರಮೇಧದ ಕ್ರೌರ್ಯವನ್ನು ಜಗತ್ತಿಗೆ ತಿಳಿಸುವ ಕೆಲಸವನ್ನೂ ಮಾಡಿದರು. ಹಡ್ಡರ್ಸ್‌ಫೀಲ್ಡ್‌ನಲ್ಲಿ ಸ್ಥಾಪನೆಗೊಂಡ ‘ಹೋಲೋಕಾಸ್ಟ್ ಸರ್ವೈವರ್ಸ್ ಫ್ರೆಂಡ್‌ಶಿಪ್ ಅಸೋಸಿಯೇಷನ್’ (ಹೋಲೋಕಾಸ್ಟ್ ಸೆಂಟರ್ ನಾರ್ತ್)ನ ಸ್ಥಾಪಕ ಸದಸ್ಯರಾಗಿದ್ದ ಸುಝೇನ್, ತಾವು ಬಾಲ್ಯದಲ್ಲಿ ಎದುರಿಸಿದ್ದ ಭೀರಕತೆಯನ್ನು ಸಾಕ್ಷ್ಯಚಿತ್ರವಾಗಿ ದಾಖಲಿಸಿದ್ದಾರೆ. ಅವರ ಈ ಕಾರ್ಯಕ್ಕಾಗಿ ಅವರಿಗೆ BEM (British Empire Medal) ಪ್ರಶಸ್ತಿಯೂ ದೊರೆತಿದೆ.
ಈ ಲೇಖನ ಓದಿದ್ದೀರಾ?: ಟಿವಿಯಲ್ಲಲ್ಲ, ಮನೆಯ ಹೊರಗೆ ಯುದ್ಧ ನಡೆಯುತ್ತಿದೆ: ಇರಾನ್-ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರು
2025ರ ಜನವರಿಯಲ್ಲಿ, ಲೀಡ್ಸ್‌ನಲ್ಲಿ ನಡೆದ ‘ನರಮೇಧ ಸ್ಮರಣ ದಿನ’ದ ಕಾರ್ಯಕ್ರಮದಲ್ಲಿ ಸುಝೇನ್ ಅವರು ಬರೆದ ಸಂದೇಶವನ್ನು ಓದಲಾಗಿತ್ತು. ಆ ಸಂದೇಶವು ಅವರ ಕೊನೆಯ ಸಾರ್ವಜನಿಕ ಸಂದೇಶವಾಗಿದೆ. ಈ ಸಂದೇಶದಲ್ಲಿ ಅವರು ತಮ್ಮ ಜೀವನದ ಕಥೆಯ ಜೊತೆಗೆ, ತಾಳ್ಮೆ, ಸಹಿಷ್ಣುತೆ ಹಾಗೂ ಮಾನವೀಯತೆಯ ಮೌಲ್ಯಗಳ ಬಗ್ಗೆ ಒತ್ತಿಹೇಳಿದ್ದಾರೆ.
ಸುಝೇನ್‌ರ ನಿಧನಕ್ಕೆ ಸಂತಾಪ ಸೂಚಿಸಿರುವ ಹೋಲೋಕಾಸ್ಟ್ ಸೆಂಟರ್ ನಾರ್ತ್‌ನ ನಿರ್ದೇಶಕ ಡಾ. ಅಲೆಸ್ಸಾಂಡ್ರೊ ಬುಕ್ಕಿ, “ಸುಝೇನ್‌ರ ಕೊಡಗೆಗಳನ್ನು ನೆನೆಯುವುದರ ಜೊತೆಗೆ, ಅವರ ಕೆಲಸಗಳನ್ನು ಮುಂದುವರೆಸುತ್ತೇವೆ” ಎಂದು ಹೇಳಿದ್ದಾರೆ.
ಸುಝೇನ್ ಅವರು ಭಯಾನಕ ದುರಂತದ ನಡುವೆಯೂ, ಸಾಮಾಜಿಕ ನ್ಯಾಯಕ್ಕಾಗಿ, ಶಿಕ್ಷಣಕ್ಕಾಗಿ ಹಾಗೂ ಒಗ್ಗಟ್ಟಿಗಾಗಿ ಕೆಲಸ ಮಾಡಿದ್ದಾರೆ. ಆ ಮೂಲಕ ಜಗತ್ತನ್ನುಉತ್ತಮ ಹಾದಿಯನ್ನು ಮುಂದುಯ್ಯಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಅವರ ಜೀವನಗಾಥೆಯು ಯುವಜನರಿಗೆ ಸ್ಫೂರ್ತಿಯಾಗಲಿದೆ ಎಂದು ಬುಕ್ಕಿ ಹೇಳಿದ್ದಾರೆ.
ಮಾಹಿತಿ ಮೂಲ: ಬಿಬಿಸಿ