ಗಾಜಾಕ್ಕೆ ನೆರವು ಸಾಮಗ್ರಿಗಳನ್ನು ಹೊತ್ತು ಬರುತ್ತಿರುವ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಅವರು ಸೇರಿದಂತೆ ಪ್ಯಾಲೆಸ್ತೀನ್ ಪರವಿರುವ 12 ಅಂತಾರಾಷ್ಟ್ರೀಯ ಕಾರ್ಯಕರ್ತರು ಇರುವ ದೊಡ್ಡ ದೋಣಿಯನ್ನು ಗಾಝಾ ಪ್ರವೇಶಿಸಲು ಬಿಡಲ್ಲ ಎಂದು ಎರಡು ದಿನಗಳ ಹಿಂದೆ ಇಸ್ರೇಲ್ ಬೆದರಿಕೆ ಹಾಕಿತ್ತು. ಇದೀಗ “ನಾವಿರುವ ದೊಡ್ಡ ದೋಣಿಯನ್ನು ಇಸ್ರೇಲ್ ಅಪಹರಿಸಿದೆ” ಎಂದು ಗ್ರೇಟಾ ಥನ್ಬರ್ಗ್ ಆರೋಪಿಸಿದ್ದಾರೆ.
ಆದರೆ ಇಸ್ರೇಲ್ ಈ ಆರೋಪವನ್ನು ಅಲ್ಲಗಳೆದಿದೆ. “ದೊಡ್ಡ ದೋಣಿ ಸುರಕ್ಷಿತವಾಗಿ ಇಸ್ರೇಲ್ ತೀರಕ್ಕೆ ತಲುಪಿದೆ. ಅವರು(ಕಾರ್ಯಕರ್ತರು) ತಮ್ಮ ತಮ್ಮ ದೇಶಗಳಿಗೆ ಮರಳುವ ನಿರೀಕ್ಷೆಯಿದೆ” ಎಂದು ಇಸ್ರೇಲ್ ಹೇಳಿದೆ.
ಇದನ್ನು ಓದಿದ್ದೀರಾ? ಗಾಜಾದಲ್ಲಿ ಮುಂದುವರೆದ ಇಸ್ರೇಲ್ ಕ್ರೌರ್ಯ; 120 ಪ್ಯಾಲೆಸ್ತೀನಿಯರ ಹತ್ಯೆ
ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ(ಎಫ್ಎಫ್ಸಿ) ಕಾರ್ಯಕರ್ತರು ಇರುವ ದೊಡ್ಡ ದೋಣಿ ಸೋಮವಾರ ಮುಂಜಾನೆ ಗಾಜಾದ ನೌಕಾ ದಿಗ್ಬಂಧನವನ್ನು ಮುರಿದು ಮುಂದೆ ಸಾಗಲು ಯತ್ನಿಸುತ್ತಿದ್ದಾಗ, ಇಸ್ರೇಲಿ ಪಡೆಗಳು ಹಡಗನ್ನು ತಡೆದಿವೆ. ಈ ಸಂಬಂಧ ಗ್ರೆಟಾ ಥನ್ಬರ್ಗ್ ಎಕ್ಸ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
SOS! the volunteers on 'Madleen' have been kidnapped by Israeli forces.
— Freedom Flotilla Coalition (@GazaFFlotilla) June 9, 2025
Greta Thunberg is a Swedish citizen.
Pressure their foreign ministries and help us keep them safe!
Web: https://t.co/uCGmx8sn8j
X : @SweMFA
FB : @SweMFA
IG : swedishmfa#AllEyesOnMadeleen pic.twitter.com/76Myrg2Bnz
“ನಮ್ಮನ್ನು ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ ತಡೆದು ಅಪಹರಿಸಲಾಗಿದೆ ಎಂಬುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ನನ್ನನ್ನು ಮತ್ತು ಇತರರನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಲು ಸ್ವೀಡಿಷ್ ಸರ್ಕಾರದ ಮೇಲೆ ಒತ್ತಡ ಹೇರಿ” ಎಂದು ತಮ್ಮ ಬೆಂಬಲಿಗರಿಗೆ ಗ್ರೆಟಾ ಕರೆ ನೀಡಿದರು.
ಗ್ರೆಟಾ ಮಾತ್ರವಲ್ಲದೇ ಈ ದೊಡ್ಡ ದೋಣಿಯಲ್ಲಿ ಮಾನವ ಹಕ್ಕು ಹೋರಾಟಗಾರ್ತಿ ರಿಮಾ ಹಸನ್, ಸಾಮಾಜಿಕ ಕಾರ್ಯಕರ್ತರಾದ ರೇವಾ ವಿಯಾರ್ಡ್, ಬ್ಯಾಪ್ಟಿಸ್ಟ್ ಆಂಡ್ರೆ, ಪ್ಯಾಸ್ಕಲ್ ರೇಮಂಡ್ ಮೌರಿಯರಾಸ್, ಯಾನಿಸ್ ಮಹಮ್ಡಿ(ಇವರೆಲ್ಲರೂ ಫ್ರಾನ್ಸ್ನವರು), ಸೆರ್ಗಿಯೊ ಟೊರಿಬಿಯೊ (ಸ್ಪೇನ್), ಮಾರ್ಕ್ ವ್ಯಾನ್ ರೆನ್ನೆಸ್ (ಡೆನ್ಮಾರ್ಕ್), ಹುಸೇಯಿನ್ ಶುಯೆಬ್ ಒರ್ಡು (ಟರ್ಕಿ), ಯಾಸೆಮಿನ್ ಅಕಾರ್ (ಜರ್ಮನಿ), ಮತ್ತು ಥಿಯಾಗೊ ಅವಿಲಾ (ಬ್ರೆಜಿಲ್) ಇದ್ದಾರೆ.
ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟವು ಗಾಜಾಕ್ಕೆ ನೆರವು ನೀಡಲು ದೊಡ್ಡ ದೋಣಿಯಲ್ಲಿ ಪ್ರಯಾಣ ಆರಂಭಿಸಿದಾಗಲೇ ಇದಕ್ಕೆ ನಾವು ಅವಕಾಶ ನೀಡಲಾರೆವು ಎಂದು ಇಸ್ರೇಲ್ ಹೇಳಿಕೊಂಡಿತ್ತು. ಕಳೆದ ತಿಂಗಳು ಈ ತಂಡ ಗಾಜಾ ತಲುಪಲು ಪ್ರಯತ್ನಿಸಿತ್ತು. ಆದರೆ ಮಾಲ್ಟಾ ಬಳಿಯ ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ ಹಡಗಿಗೆ ಎರಡು ಡ್ರೋನ್ಗಳು ಡಿಕ್ಕಿ ಹೊಡೆದು ದೊಡ್ಡ ದೋಣಿಯ ಮುಂಭಾಗಕ್ಕೆ ಹಾನಿಯಾಗಿತ್ತು.
