ಗಾಝಾದ ಮೇಲೆ ಇಸ್ರೇಲ್ ದಾಳಿ ಕೊನೆಗೊಳಿಸುವ ನಿಟ್ಟಿನಲ್ಲಿ ಕದನ ವಿರಾಮ ಪ್ರಸ್ತಾಪದ ಬಗ್ಗೆ ಚರ್ಚಿಸಲು ಒಪ್ಪಿಕೊಂಡಿರುವುದಾಗಿ ಹಮಾಸ್ ಹೇಳಿದೆ. ಗಾಝಾ, ಇಸ್ರೇಲ್ ಯುದ್ಧದಲ್ಲಿ ಈಗಾಗಲೇ 62 ಸಾವಿರಕ್ಕೂ ಅಧಿಕ ಪ್ಯಾಲೇಸ್ತಿನಿಯನ್ನರು ಬಲಿಯಾಗಿದ್ದಾರೆ. ಗಾಝಾದಲ್ಲಿ ಕದನ ವಿರಾಮಕ್ಕೆ ಹೊಸ ಪ್ರಸ್ತಾಪವನ್ನು ಈಜಿಪ್ಟ್‌ನಲ್ಲಿರುವ ಹಮಾಸ್ ಪ್ರತಿನಿಧಿಗಳು ಪಡೆದಿದ್ದಾರೆ ಎಂದು ವರದಿಯಾಗಿದೆ.
“ಹಮಾಸ್, ಪ್ಯಾಲೇಸ್ತೇನ್ ಬಣಕ್ಕೆ, ಕತಾರಿ ಮತ್ತು ಈಜಿಪ್ಟ್ ಮಧ್ಯವರ್ತಿಗಳು ನಿನ್ನೆ ಮಂಡಿಸಿದ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ” ಎಂದು ಹಮಾಸ್ ಸೋಮವಾರ ಒಂದು ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ. ಇಸ್ರೇಲ್ ಹಮಾಸ್‌ನ ಪ್ರತಿಕ್ರಿಯೆಯನ್ನು ಸ್ವೀಕರಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ಮತ್ತು ಚಾನೆಲ್ 12 ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಗಾಝಾ ಕದನ ವಿರಾಮ ವಿರೋಧಿಸಿ ಇಸ್ರೇಲಿನ ಮೂವರು ಮಂತ್ರಿಗಳ ರಾಜೀನಾಮೆ
60 ದಿನಗಳವರೆಗೆ ಮಿಲಿಟರಿ ಕಾರ್ಯಾಚರಣೆಗಳ ತಾತ್ಕಾಲಿಕ ಸ್ಥಗಿತದ ಪ್ರಸ್ತಾಪ ಇದಾಗಿದೆ. ಇದೇ ವೇಳೆಯಲ್ಲಿ ಪ್ಯಾಲೇಸ್ತಿನಿಯನ್ನರ ಬದಲಿಗೆ 50 ಇಸ್ರೇಲಿ ಸೆರೆಯಾಳುಗಳಲ್ಲಿ ಅರ್ಧದಷ್ಟು ಜನರನ್ನು ಹಸ್ತಾಂತರ ಮಾಡಲಾಗುವುದು ಎಂದು ವರದಿಯಾಗಿದೆ.
ಕತಾರ್ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಬಿನ್ ಜಾಸಿಮ್ ಅಲ್ ಥಾನಿ ಕೈರೋದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಹಮಾಸ್ ಕದನ ವಿರಾಮದ ಘೋಷಣೆ ಮಾಡಿದೆ.
