ಹೆಚ್ಐವಿ ಸೋಂಕಿನ ಸಂಪೂರ್ಣ ರಕ್ಷಣೆಗಾಗಿ ವರ್ಷಕ್ಕೆ ಎರಡು ಬಾರಿಯಂತೆ ರೋಗ ನಿರೋಧಕ ಹೆಚ್ಚಿಸುವ ಎರಡು ಚುಚ್ಚುಮದ್ದುಗಳನ್ನು ನೀಡುವುದರ ಮೂಲಕ ದಕ್ಷಿಣ ಆಫ್ರಿಕಾ ಹಾಗೂ ಉಗಾಂಡ ಯಶಸ್ವಿ ಪ್ರಯೋಗ ನಡೆಸಿದೆ. ಯುವತಿಯ ಮೇಲೆ ದೊಡ್ಡ ಮಟ್ಟದಲ್ಲಿ ವೈದ್ಯಕೀಯ ಪ್ರಯೋಗ ನಡೆಸಲಾಗಿದೆ.
ಆರು ತಿಂಗಳಿಗೆ ನೀಡಲಾಗುವ ‘ಲೆನಾಕಾಪಾವಿರ್’ ಚುಚ್ಚುಮದ್ದು, ಇತರ ಹೆಚ್‌ಐವಿ ಔಷಧಗಳು ಹಾಗೂ ನಿತ್ಯ ನೀಡುವ ಗುಳಿಗೆಗಳಿಗಿಂತ ಸುರಕ್ಷಿತವಾಗಿವೆ ಎಂದು ಪ್ರಯೋಗ ಪರೀಕ್ಷೆಯಲ್ಲಿ ಸಾಬೀತಾಗಿದೆ. ಇವೆಲ್ಲ ಔಷಧಗಳು ರೋಗನಿರೋಧಕ ಶಕ್ತಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿ ಹೆಚ್‌ಐವಿ ರೋಗಾಣುಗಳನ್ನು ತಡೆಯುವ ಔಷಧಗಳಾಗಿವೆ.
ವೈದ್ಯ ವಿಜ್ಞಾನಿಯಾದ ಲಿಂಡಾ ಗೇಲ್ ಬೆಕ್ಕರ್ ಹಾಗೂ ಈ ಔಷಧ ಪ್ರಯೋಗದ ಪ್ರಧಾನ ಸಂಶೋಧಕರಾದ ನದೇನ್ ಡ್ರೇಯರ್ ಅವರು ನೂತನ ಔಷಧ ಪ್ರಯೋಗವು ಗಮನಾರ್ಹ ಮೈಲಿಗಲ್ಲು ತಲುಪಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಲೆನಾಕಾಪಾವಿರ್ ಮತ್ತು ಇತರ ಎರಡು ಔಷಧಿಯ ಮೊದಲ ಪರಿಣಾಮಕಾರಿ ಪ್ರಯೋಗವನ್ನು 5000 ಜನರ ಮೇಲೆ ಉಗಾಂಡದ ಮೂರು ಹಾಗೂ ದಕ್ಷಿಣ ಆಫ್ರಿಕಾದ 25 ಸ್ಥಳಗಳಲ್ಲಿ ಕೈಗೊಳ್ಳಲಾಗಿತ್ತು.
ಲೆನಾಕಾಪಾವಿರ್(ಲೆನ್ ಎಲ್‌ಎ) ಔಷಧ ರೋಗಾಣು ನಿಯಂತ್ರಿಸುವ ಪ್ರತಿಬಂಧಕ ಔಷಧವಾಗಿದೆ. ಇದು ಹೆಚ್‌ಐವಿ ರೋಗಾಣುವಿಗೆ ಅಡ್ಡಿಪಡಿಸುತ್ತದೆ. ಅಲ್ಲದೆ ಹೆಚ್ಐವಿಯ ಅನುವಂಶಿಕ ಹಾಗೂ ವಿವಿಧ ರೀತಿಯ ರೋಗಾಣುಗಳನ್ನು ಉತ್ಪಾದನೆಗೊಳ್ಳುವುದನ್ನು ತಡೆಯುತ್ತದೆ. ಇದನ್ನು ಆರು ತಿಂಗಳಿಗೊಮ್ಮೆ ಚರ್ಮದ ಮೂಲಕ ನೀಡಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಕೇರಳ: ಮೆದುಳು ತಿನ್ನುವ ಅಮೀಬಾ ರೋಗದಿಂದ 14 ವರ್ಷದ ಬಾಲಕ ಸಾವು
ಔಷಧಿ ಉತ್ಪಾದಕರಾದ ಗಿಲಿಯಾಡ್ ಸೈನ್ಸಸ್ ಸಂಸ್ಥೆಯ ಪ್ರಯೋಜಕತ್ವದಲ್ಲಿ ಹಲವು ಕಡೆ ಪರೀಕ್ಷಾ ಪ್ರಯೋಗಾರ್ಥ ಕೈಗೊಳ್ಳಲಾಗಿತ್ತು.
ಲೆನಾಕಾಪಾವಿರ್ ಮೊದಲ ಚುಚ್ಚುಮದ್ದು 16 ರಿಂದ 25 ವರ್ಷದ ಮಹಿಳೆಯರಿಗೆ ಹಲವು ದಶಕಗಳಿಂದ ಉಪಯೋಗಿಸಲಾಗುತ್ತಿದ್ದ ಇತರ ಔಷಧಗಳಾದ ಟ್ರುವೆಡ ಎಫ್/ಟಿಡಿಎಫ್, ನಿತ್ಯ ಬಳಸುವ ಪ್ರೆಪ್ ಗುಳಿಗೆಗಳಿಗಿಂತ ಹೆಚ್‌ಐವಿ ಸೋಂಕಿನ ವಿರುದ್ಧದ ರಕ್ಷಣೆಗೆ ಸುರಕ್ಷಿತ ಹಾಗೂ ಹೆಚ್ಚು ರಕ್ಷಣೆ ನೀಡುತ್ತದೆ ಎಂದು ತಿಳಿಯಲಾಗಿದೆ.
ಎರಡನೇ ಚುಚ್ಚುಮದ್ದು ನಿತ್ಯ ಬಳಸುವ ದೆಸ್‌ಕೊವಿ ಎಫ್/ಟಿಎಎಫ್ ಗುಳಿಗೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಪ್ರಯೋಗದ ಮೂಲಕ ಕಂಡುಕೊಳ್ಳಲಾಗಿದೆ. ದೆಸ್‌ಕೊವಿ ಎಫ್/ಟಿಎಎಫ್ ಗುಳಿಗೆಯನ್ನು ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಪುರುಷರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಹೆಚ್ಚಾಗಿ ಬಳಸುತ್ತಾರೆ.
ನಿತ್ಯ ಬಳಸುವ ಪ್ರೆಪ್ ಗುಳಿಗೆಯನ್ನು ದಕ್ಷಿಣ ಆಫ್ರಿಕಾ ಹಾಗೂ ಪೂರ್ವ ರಾಷ್ಟ್ರಗಳಲ್ಲಿಆಗಷ್ಟೆ ಹೆಚ್‌ಐವಿ ಸೋಂಕಿತರಾದವರು ಬಳಸುತ್ತಾರೆ.
ಹೆಚ್‌ಐವಿ ಸೋಂಕಿತ 2134 ಮಹಿಳೆಯರಿಗೆ ಲೆನಾಕಾಪಾವಿರ್ ಔಷಧವನ್ನು ಪ್ರಯೋಗದ ಮೂಲಕ ನೀಡಲಾಗಿತ್ತು. ನಂತರದಲ್ಲಿ ಔಷಧವು ಇವರೆಲ್ಲರಿಗೂ ಶೇ.100 ರಷ್ಟು ಪರಿಣಾಮ ಬೀರಿತ್ತು.
ವರ್ಷಕ್ಕೆ ಎರಡು ಬಾರಿ ನೀಡುವ ಲೆನಾಕಾಪಾವಿರ್ ಚುಚ್ಚು ಮದ್ದು ಹೆಚ್‌ಐವಿ ಸೋಂಕಿನಿಂದ ಬಳಲುವರಿಗೆ ಶೀಘ್ರ ಚೇತರಿಸಿಕೊಳ್ಳಲು ಉತ್ತಮ ಔಷಧಿಯಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಒಂದು ವರ್ಷದಲ್ಲಿ 13 ಲಕ್ಷ ಮಂದಿ ವಿಶ್ವದಲ್ಲಿ ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಕಳೆದ ಒಂದು ದಶಕಕ್ಕೆ ಹೋಲಿಸಿದರೆ ಇದು ಇಳಿಕೆಯಾಗಿದೆ.
ವಿಶ್ವದ ಇತರ ರಾಷ್ಟ್ರಗಳ ಹೆಚ್‌ಐವಿ ಸೋಂಕಿತರಿಗೆ ಲೆನಾಕಾಪಾವಿರ್ ಚುಚ್ಚುಮದ್ದನ್ನು ಶಿಫಾರಸ್ಸು ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಮತ್ತಷ್ಟು ಪರೀಕ್ಷೆಗೊಳಪಡಿಸುವ ಸಾಧ್ಯತೆಯಿದೆ.