ಸದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದ ನಡೆಯಲು ತನ್ನ ಮಧ್ಯಸ್ಥಿಕೆಯ ಕಾರಣ ಎಂದು ಹೇಳಿಕೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಜೊತೆಯಾಗಿ ಉತ್ತಮ ಭೋಜನಕೂಟ ಆಯೋಜಿಸುವಂತೆ ಉಭಯ ದೇಶಗಳಿಗೆ ಸಲಹೆ ನೀಡಿದ್ದಾರೆ.
ಸುಮಾರು 26 ಭಾರತೀಯರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಹೆಸರಲ್ಲಿ ಭಾರತೀಯ ಸೇನೆ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಇದನ್ನು ಓದಿದ್ದೀರಾ? ಟ್ರಂಪ್ ಒತ್ತಡಕ್ಕೆ ಬಗ್ಗಿ ‘ಸ್ಟಾರ್‌ಲಿಂಕ್’ ಪರವಾನಗಿ ನೀಡಿದರೆ ಮೋದಿ?
ಇದಾದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ತನ್ನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು. ಉಭಯ ದೇಶಗಳೂ ಇದನ್ನು ದೃಢಪಡಿಸಿದೆ.
ಅದಾದ ಬಳಿಕ ನಿರಂತರವಾಗಿ ಈ ಕದನ ವಿರಾಮದ ‘ಕ್ರೆಡಿಟ್’ ಅನ್ನು ಪಡೆಯುವುದರಲ್ಲೇ ಟ್ರಂಪ್ ಮಗ್ನರಾಗಿದ್ದಾರೆ. ರಿಯಾದ್‌ನಲ್ಲಿ ನಡೆದ ಹೂಡಿಕೆ ವೇದಿಕೆಯಲ್ಲಿ ಮಾತನಾಡುತ್ತಾ “ಭಾರತ ಮತ್ತು ಪಾಕಿಸ್ತಾನದ ನಾಯಕರು ಈಗ ಜೊತೆಯಾಗಿ ಒಳ್ಳೆಯ ಭೋಜನಕ್ಕೆ ಹೋಗಬಹುದು” ಎಂದು ವ್ಯಂಗ್ಯವಾಡಿದ್ದಾರೆ. ಅಂದರೆ ತನ್ನ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳ ಸಂಬಂಧ ಜೊತೆಯಾಗಿ ಊಟ ಮಾಡುವಷ್ಟು ಬದಲಾಗಿದೆ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.
“ಕೆಲವೇ ದಿನಗಳ ಹಿಂದೆ, ನನ್ನ ಆಡಳಿತವು ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಹಿಂಸಾಚಾರವನ್ನು ನಿಲ್ಲಿಸಲು ಐತಿಹಾಸಿಕ ಕದನ ವಿರಾಮವನ್ನು ಯಶಸ್ವಿಯಾಗಿ ಮಧ್ಯಸ್ಥಿಕೆ ವಹಿಸಿತು. ಕದನ ವಿರಾಮ ಒಪ್ಪಂದ ಮಾಡಿಸಲು ನಾನು ವ್ಯಾಪಾರವನ್ನು ಅಸ್ತ್ರವಾಗಿ ಬಳಸಿಕೊಂಡೆ. ‘ಬನ್ನಿ, ಪ್ಪಂದ ಮಾಡಿಕೊಳ್ಳೋಣ. ಸ್ವಲ್ಪ ವ್ಯಾಪಾರ ಮಾಡೋಣ’ ಎಂದು ಹೇಳಿದೆ” ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? BREAKING NEWS | ‘ತಕ್ಷಣ ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಕೊಂಡಿವೆ’ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್
ಕದನ ವಿರಾಮಕ್ಕೆ ಒಪ್ಪದಿದ್ದರೆ ಅಮೆರಿಕದೊಂದಿಗಿನ ವ್ಯಾಪಾರ ಸಂಬಂಧ ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ಬಳಿಕ ಉಭಯ ದೇಶಗಳು ಒಪ್ಪಂದಕ್ಕೆ ಒಪ್ಪಿದೆ ಎಂದು ಇತ್ತೀಚೆಗೆ ಟ್ರಂಪ್ ಹೇಳಿದ್ದಾರೆ. ಆದರೆ ಈ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ. ಆದರೆ ಟ್ರಂಪ್ ಮಾತ್ರ ಒಪ್ಪಂದಕ್ಕೆ ಕಾರಣ ಅಮೆರಿಕ ಎಂದು ಹೇಳುತ್ತಿದ್ದಾರೆ.
“ಪರಮಾಣು ಕ್ಷಿಪಣಿಗಳ ವ್ಯಾಪಾರ ಬೇಡ. ನೀವು ಮಾಡುವ ವಸ್ತುಗಳನ್ನು ಸುಂದರವಾಗಿ ವ್ಯಾಪಾರ ಮಾಡೋಣ ಎಂದು ಹೇಳಿದೆ. ಉಭಯ ದೇಶಗಳು ಬಹಳ ಶಕ್ತಿಶಾಲಿ, ಬಲಿಷ್ಠ, ಉತ್ತಮ, ಬುದ್ಧಿವಂತ ನಾಯಕರನ್ನು ಹೊಂದಿವೆ. ನಮ್ಮ ಮಧ್ಯಸ್ಥಿಕೆ ಮಾತಿನಿಂದ ಎಲ್ಲಾ ಕದನವೂ ನಿಂತುಹೋಯಿತು. ಈ ಸ್ಥಿತಿ ಹಾಗೆಯೇ ಉಳಿಯುತ್ತದೆ ಎಂಬ ಆಶಾಭಾವನೆಯಿದೆ” ಎಂದು ಮಂಗಳವಾರ ರಿಯಾದ್‌ನಲ್ಲಿ ಟ್ರಂಪ್ ಹೇಳಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಮಾರ್ಕೊ ರುಬಿಯೊ ಮತ್ತು ಭಾರತ, ಪಾಕಿಸ್ತಾನ ‘ಕದನ ವಿರಾಮ’ಕ್ಕೆ ಒಪ್ಪುವಂತೆ ಮಾಡಲು ಶ್ರಮಿಸಿದ ಎಲ್ಲ ಜನರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದೂ ಹೇಳಿದ್ದಾರೆ. “ಮಾರ್ಕೊ, ಎದ್ದು ನಿಲ್ಲಿ. ಈ ಕದನ ವಿರಾಮಕ್ಕಾಗಿ ನೀವು ಉತ್ತಮ ಕೆಲಸ ಮಾಡಿದ್ದೀರಿ. ಧನ್ಯವಾದಗಳು. ಇಡೀ ತಂಡ ನಿಮ್ಮೊಂದಿಗೆ ಕೆಲಸ ಮಾಡಿದೆ. ಇದು ಉತ್ತಮ ಕೆಲಸ” ಎಂದು ತನ್ನ ತಂಡವನ್ನು ಹಾಡಿಹೊಗಳಿದರು.
ಹಾಗೆಯೇ ಈ ವೇಳೆ ವ್ಯಂಗ್ಯವಾಡಿದ ಟ್ರಂಪ್, “ಬಹುಶಃ ನಾವು ಅವರನ್ನು (ಭಾರತ ಪಾಕಿಸ್ತಾನ) ಸ್ವಲ್ಪ ಜೊತೆ ಸೇರಿಸಬಹುದು. ಉಭಯ ದೇಶದ ನಾಯಕರು ಹೊರಗೆ ಹೋಗಿ ಒಟ್ಟಿಗೆ ಉತ್ತಮ ಭೋಜನ ಮಾಡುತ್ತಾರೆ. ಅದು ಚೆನ್ನಾಗಿರುವುದಿಲ್ಲವೇ ಮಾರ್ಕೊ” ಎಂದು ಪ್ರಶ್ನಿಸಿದರು.
US President Donald Trump comments on the escalating conflict between India and Pakistan. "Maybe we can even get them together a little bit, Marco, where they go out and have a nice dinner together…" pic.twitter.com/ZXtXwvdF28
— Mohammed Zubair (@zoo_bear) May 13, 2025
“ಆದರೆ ನಾವು, ನಾವು ಬಹಳ ದೂರ ಬಂದಿದ್ದೇವೆ. ಅದು ನಿಮಗೆ ತಿಳಿದಿದೆ. ಲಕ್ಷಾಂತರ ಜನರು ಆ ಸಂಘರ್ಷದಿಂದ ಸಾಯಬಹುದಿತ್ತು. ಸಣ್ಣದಾಗಿ ಪ್ರಾರಂಭವಾದ ಸಂಘರ್ಷ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿತ್ತು” ಎಂದಿದ್ದಾರೆ
ಅಮೆರಿಕದ ಅಧ್ಯಕ್ಷ ಟ್ರಂಪ್ ಶನಿವಾರ, ಭಾನುವಾರ ಮತ್ತು ಸೋಮವಾರದಂದು ತಮ್ಮ ಆಡಳಿತವು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯವರ್ತಿಯ ಪಾತ್ರವನ್ನು ವಹಿಸುತ್ತಿದೆ ಎಂಬ ತಮ್ಮ ಹೇಳಿಕೆಗಳನ್ನು ಪುನರಾವರ್ತಿಸಿದ್ದರು.
