ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಅಮೆರಿಕ ನೆರವು ನೀಡುವುದಾಗಿ ಹೇಳಿಕೊಂಡಿದೆ. ಇದೀಗ, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ್ದಾರೆ. ಉದ್ವಿಗ್ನತೆಯನ್ನು ಶಮನಗೊಳಿಸಲು ತಾಕೀತು ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಅಮೆರಿಕ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. “ಭಾರತ ಮತ್ತು ಪಾಕಿಸ್ತಾನ ನಡುವಿನ ಹಗೆತನದಲ್ಲಿ ಉದ್ವಿಗ್ನತೆಯು ನಾಟಕೀಯವಾಗಿ ಏರುತ್ತಿದೆ. ಇದು ಸುಮಾರು ಮೂರು ದಶಕಗಳಲ್ಲಿ ನಂತರದ ಅತ್ಯಂತ ತೀವ್ರವಾದ ಮುಖಾಮುಖಿಯಾಗಿದೆ” ಎಂದು ಹೇಳಿದೆ.
“ಉದ್ವಿಗ್ನತೆಯನ್ನು ಶಮನಗೊಳಿಸಲು ಅಗತ್ಯ ಮಾರ್ಗಗಳನ್ನು ಕಂಡುಕೊಳ್ಳುವಂತೆ ಎರಡೂ ದೇಶಗಳ ನಾಯಕರಿಗೆ ಅಮೆರಿಕ ಕಾರ್ಯದರ್ಶಿ ರುಬಿಯೊ ಒತ್ತಾಯಿಸಿದ್ದಾರೆ. ಭವಿಷ್ಯದ ಘರ್ಷಣೆಗಳನ್ನು ತಡೆಗಟ್ಟಲು ರಚನಾತ್ಮಕ ಸಂವಾದವನ್ನು ಪ್ರಾರಂಭಿಸುವಲ್ಲಿ ಅಮೆರಿಕವು ಸಹಾಯ ಮಾಡಲಿದೆ. ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿಗಾಗಿ ಅಮೆರಿಕವು ಬದ್ಧತೆಯಿಂದ ಬೆಂಬಲಿಸುವ ಇಚ್ಛೆಯನ್ನು ಹೊಂದಿರುವುದಾಗಿ ರುಬಿಯೋ ಹೇಳಿದ್ದಾರೆ” ಎಂದು ಇಲಾಖೆ ಹೇಳಿದೆ.
ಪಾಕಿಸ್ತಾನವು ಶನಿವಾರ ಮುಂಜಾನೆ ಭಾರತದ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಜಮ್ಮು ಮತ್ತು ಕಾಶ್ಮೀರದ ಉತ್ತರ ಭಾಗದ ಕ್ಷಿಪಣಿ ಸಂಗ್ರಹಣಾ ನೆಲೆಗಳ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ ಓರ್ವ ಅಧಿಕಾರಿ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.