ಅಮೆರಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಡ ಹೇರುವ ಬೆದರಿಕೆ ಹಾಕಿದರೂ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುವುದನ್ನು ಮುಂದುವರಿಸುತ್ತದೆ ಎಂದು ಭಾರತೀಯ ಸರ್ಕಾರದ ಎರಡು ಮೂಲಗಳು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಭಾರತವು ಅಮೆರಿಕಕ್ಕೆ ಮಾಡುವ ರಫ್ತಿನ ಮೇಲೆ ಹೊಸದಾಗಿ ಶೇಕಡ 25ರಷ್ಟು ಸುಂಕವನ್ನು ವಿಧಿಸಿರುವ ಟ್ರಪ್, “ರಷ್ಯಾದ ಶಸ್ತ್ರಾಸ್ತ್ರ ಮತ್ತು ತೈಲ ಖರೀದಿಸುವ ಭಾರತವು ಹೆಚ್ಚುವರಿ ದಂಡವನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದರು. ಹಾಗೆಯೇ ತನ್ನ ಈ ಬೆದರಿಕೆ ಬಳಿಕ ಭಾರತ ರಷ್ಯಾದಿಂದ ತೈಲ ಖರೀದಿಸುವುದು ನಿಲ್ಲಿಸುವ ನಿರ್ಧಾರ ಮಾಡಿದೆ ಎಂಬ ಮಾಹಿತಿ ಲಭಿಸಿದೆ ಎಂದೂ ಹೇಳಿದ್ದರು.
ಇದನ್ನು ಓದಿದ್ದೀರಾ? ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲಿದೆ ಎನ್ನಲಾಗುತ್ತಿದೆ: ಡೊನಾಲ್ಡ್ ಟ್ರಂಪ್
ಆದರೆ ರಷ್ಯಾದಿಂದ ತೈಲ ಆಮದು ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ರಾತ್ರೋರಾತ್ರಿ ಖರೀದಿಯನ್ನು ನಿಲ್ಲಿಸುವುದು ಅಷ್ಟು ಸುಲಭವಲ್ಲ. ದೀರ್ಘಾವಧಿಯ ತೈಲ ಒಪ್ಪಂದಗಳಿವು ಎಂದು ಸರ್ಕಾರದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
“ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎನ್ನಲಾಗುತ್ತಿದೆ. ಇದು ಉತ್ತಮ ನಿರ್ಧಾರ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ. ಹಾಗೆಯೇ ಇದು ಖಚಿತವಿಲ್ಲ ಎಂಬುದನ್ನೂ ಟ್ರಂಪ್ ಒಪ್ಪಿಕೊಂಡಿದ್ದಾರೆ.
“ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ನನಗೆ ಅರ್ಥವಾಗಿದೆ. ಇದು ನನಗೆ ಕೇಳಿ ಬಂದಿರುವ ಮಾಹಿತಿ, ಇದು ಸರಿಯೋ ಇಲ್ಲವೋ ನನಗೆ ತಿಳಿದಿಲ್ಲ. ಆದರೆ ಇದು ಉತ್ತಮ ನಿರ್ಧಾರ. ಏನಾಗುತ್ತದೆ ಎಂದು ನಾವು ನೋಡುತ್ತೇವೆ” ಎಂದು ಡೊನಾಲ್ಡ್ ಟ್ರಂಪ್ ವರದಿಗಾರರಿಗೆ ತಿಳಿಸಿದರು.
ಟ್ರಂಪ್ ಇದೇ ರೀತಿ ಸುಳ್ಳು ಹೇಳಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಹೇಳಿಕೆಗಳನ್ನು ನೇರವಾಗಿ ಖಂಡಿಸದಿರುವುದು ಟೀಕೆಗೆ ಗ್ರಾಸವಾಗಿದೆ.
