ಪಹಲ್ಗಾಮ್ ದಾಳಿಯ ನಂತರ ಭಾರತದಿಂದ ಸೇನಾ ದಾಳಿ ಸನ್ನಿಹಿತವಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸೀಫ್ ಆತಂಕ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ನಮ್ಮ ಪಡೆಗಳನ್ನು ಸಜ್ಜುಗೊಳಿಸಲು ಕಾರಣವೆಂದರೆ ಅದು ಈಗ ಸನ್ನಿಹಿತವಾಗಿದೆ, ಪ್ರಸ್ತುತ ಸಂದರ್ಭದಲ್ಲಿ ಕೆಲವು ಕಾರ್ಯಾಚರಣೆಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದ್ದು, ಈ ನಿರ್ಧಾರಗಳನ್ನೆ ತೆಗೆದುಕೊಳ್ಳಲಾಗುತ್ತಿದೆ. ಪಾಕಿಸ್ತಾನದ ಸೈನ್ಯ ಬಲಪಡಿಸುವಿಕೆ ಅಂತಹ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.
ಭಾರತದ ಕಾರ್ಯತಂತ್ರಗಳು ಹೆಚ್ಚಾಗುತ್ತಿದ್ದು, ಸರ್ಕಾರವು ಭಾರತ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಸೇನೆಗೆ ಮಾಹಿತಿ ನೀಡಿದೆ. ಭಾರತದಿಂದ ಯಾವ ರೀತಿಯಲ್ಲಿ ಸೇನಾ ದಾಳಿಯಾಗುವ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಆಸೀಫ್ ನಿರಾಕರಿಸಿದರು.
ಭಾರತದ ದಾಳಿಯ ಬಗ್ಗೆ ಪಾಕಿಸ್ತಾನದ ಮಿಲಿಟರಿ ಮತ್ತು ಸರ್ಕಾರಕ್ಕೆ ಮಾಹಿತಿ ನೀಡಿದೆ. ಈ ಕಾರಣಕ್ಕೆ ಪಾಕಿಸ್ತಾನವು ಎಚ್ಚರಿಕೆಯಿಂದಿದ್ದು, ತನ್ನ ಅಸ್ತಿತ್ವಕ್ಕೆ ಅಪಾಯವಾದರೆ ಮಾತ್ರ ಪರಮಾಣು ಅಸ್ತ್ರಗಳನ್ನು ಬಳಸಲಿದೆ” ಎಂದು ಖವಾಜಾ ಆಸೀಫ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಳಮೀಸಲಾತಿ ಗಣತಿ ಚಾರಿತ್ರಿಕ ದಾಖಲೆ, ತಪ್ಪದೇ ಭಾಗಿಯಾಗಿರಿ
“ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಇದೆ ಎಂದು ಭಾರತ ಆರೋಪಿಸುತ್ತಿದೆ. ಆದರೆ ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ. ಆದರೆ ಭಾರತ ಈಗ ನಮ್ಮ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಅದು ಖಂಡಿತವಾಗಿಯೂ ನಮ್ಮ ಮೇಲೆ ದಾಳಿ ನಡೆಸಲಿದೆ. ಹೀಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ” ಎಂದು ಪಾಕ್ ರಕ್ಷಣಾ ಸಚಿವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಉಗ್ರರ ದಾಳಿಯ ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ನಿಗ್ನ ವಾತಾವರಣ ನಿರ್ಮಾಣವಾಗಿದೆ.
ಇನ್ನು ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ ಭಾರತದ ಕ್ರಮ ಹೆಚ್ಚಾಗುತ್ತಿದ್ದಂತೆಯೇ ಪಹಲ್ಗಾಮ್ ದಾಳಿಯಲ್ಲಿ ಯಾವುದೇ ಪಾತ್ರವಿಲ್ಲ ಎಂದು ನಿರಾಕರಿಸಿತ್ತು. ಸೈಬರ್ ಹ್ಯಾಕ್ ನಡೆದಿದ್ದು, ದಾಳಿ ಹೊಣೆ ಹೊತ್ತುಕೊಂಡಿದ್ದೇವೆಂದು ಪೋಸ್ಟ್ ಮಾಡಲಾಗಿದೆ ಎಂದು ಹೇಳಿತ್ತು.