ರಷ್ಯಾ ಉಕ್ರೇನ್ ಯುದ್ಧದ ನಡುವೆ ರಷ್ಯಾದ ಮಿಲಿಟರಿ ಶಿಬಿರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯರೊಬ್ಬರು ಬಲಿಯಾಗಿದ್ದಾರೆ. ಕೇರಳದ ವ್ಯಕ್ತಿಯೊಬ್ಬರು ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ.
36 ವರ್ಷದ ಸಂದೀಪ್ ತ್ರಿಶೂರ್ ಜಿಲ್ಲೆಯ ತ್ರಿಕ್ಕೂರ್ ಪಂಚಾಯತ್‌ನ ನಾಯರಂಗಡಿ ಮೂಲದವರಾಗಿದ್ದರು. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಅವರು ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡಲು ಏಪ್ರಿಲ್‌ನಲ್ಲಿ ರಷ್ಯಾಕ್ಕೆ ತೆರಳಿದ್ದರು.
“ಎರಡು ದಿನಗಳ ಹಿಂದೆ, ತ್ರಿಶೂರ್‌ನ ವ್ಯಕ್ತಿಯೊಬ್ಬರು ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಮಲಯಾಳಿ ಸಂಘದಿಂದ ನಮಗೆ ಸಂದೇಶ ಬಂದಿತ್ತು. ಈ ರಷ್ಯಾದ ಮಿಲಿಟರಿ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವುದಾಗಿ ಉಲ್ಲೇಖಿಸಲಾಗಿತ್ತು. ಮೃತ ವ್ಯಕ್ತಿಯನ್ನು ಗುರುತಿಸಲು ಸಂಘವು ಬಯಸಿತ್ತು. ನಂತರ, ನಾವು ವಿವರಗಳನ್ನು ಪರಿಶೀಲಿಸಿದ್ದೇವೆ ಮತ್ತು ಅದು ಸಂದೀಪ್ ಎಂದು ತಿಳಿಯಿತು” ಎಂದು ಸಂದೀಪ್ ಅವರ ಸೋದರಸಂಬಂಧಿ ಸರಣ್ ಹೇಳಿದರು.
ಇದನ್ನು ಓದಿದ್ದೀರಾ? ಉಕ್ರೇನ್ ಯುದ್ಧ | ರಷ್ಯಾ ಸೇನೆಯಲ್ಲಿದ್ದ ಭಾರತೀಯ ಯುವಕ ಸಾವು: ಬಲವಂತದ ನೇಮಕಾತಿ ಆರೋಪ
ಇತ್ತೀಚೆಗೆ ಸಂದೀಪ್ ಜತೆ ಸಂಪರ್ಕ ಕಳೆದುಕೊಂಡಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. “ಸಂದೀಪ್ ಮಾಸ್ಕೋದಲ್ಲಿ ಉದ್ಯೋಗಿಯಾಗಿದ್ದ. ಒಂದು ತಿಂಗಳ ಸಂಬಳವನ್ನು ಮನೆಗೆ ಕಳುಹಿಸಿದ್ದ. ಒಂದು ತಿಂಗಳ ನಂತರ, ಅಪರೂಪವಾಗಿ ಕುಟುಂಬದ ಸಂಪರ್ಕಕ್ಕೆ ಸಿಗುತ್ತಿದ್ದರು. ಅವರನ್ನು ಮಾಸ್ಕೋದಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿತ್ತು. ಉಕ್ರೇನ್ ಪಡೆಗಳ ದಾಳಿಗೆ ತುತ್ತಾದ ಸೇನಾ ಕ್ಯಾಂಟೀನ್‌ನಲ್ಲಿ ಸಂದೀಪ್ ಕೂಡಾ ಇದ್ದ ಎಂದು ನಂತರ ನಮಗೆ ತಿಳಿಯಿತು” ಎಂದು ಸರನ್ ತಿಳಿಸಿದ್ದಾರೆ.
ಸಂದೀಪ್ ವಿವಾಹಿತರಲ್ಲ. ಅವರು ತನ್ನ ತಂದೆ ಚಂದ್ರನ್ ಮತ್ತು ತಾಯಿ ವಲ್ಸಲಾ ಅವರನ್ನು ಅಗಲಿದ್ದಾರೆ. ಇವರ ತಂದೆ ತಾಯಿ ಇಬ್ಬರೂ ಕೃಷಿ ಕಾರ್ಮಿಕರಾಗಿದ್ದಾರೆ. ಸಂದೀಪ್ ಮೃತದೇಹವನ್ನು ಕೇರಳಕ್ಕೆ ತರಲು ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮಧ್ಯಸ್ಥಿಕೆಗಾಗಿ ಕುಟುಂಬವು ಕಾಯುತ್ತಿದೆ ಎಂದು ಸರನ್ ಹೇಳಿದ್ದಾರೆ.