ಸಿಂಗಾಪುರದ ವಿವಿಧ ಜನಾಂಗೀಯ ಗುಂಪುಗಳ ನಡುವೆ ಸಾಮರಸ್ಯ ಕದಡುವ ರೀತಿಯಲ್ಲಿ ಟಿಕ್‌ಟಾಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯ ಮೂಲದ ಬ್ಲಾಗರ್‌ಗೆ ದಂಡ ವಿಧಿಸಲಾಗಿದೆ. ಸಿಂಗಾಪುರ ನ್ಯಾಯಾಲಯವು ಭಾರತೀಯ ಮೂಲದ ಬ್ಲಾಗರ್ ಮನ್ಮೀತ್ ಸಿಂಗ್ ಎಂಬಾತನಿಗೆ SGD 6,000 (ಸುಮಾರು 4 ಲಕ್ಷ ರೂ.) ದಂಡ ವಿಧಿಸಿದೆ.
2024ರ ಆಗಸ್ಟ್ 12ರಂದು ಪೋಸ್ಟ್ ಮಾಡಿದ್ದ ಮನ್ಮೀತ್ ಸಿಂಗ್, ತಮ್ಮ ಪೋಸ್ಟ್‌ನಲ್ಲಿ, ‘ಮುಂಬರುವ ಸಿಂಗಾಪುರ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷವು ಭಾರತೀಯ ಮೂಲದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಸಿಂಗಾಪುರ ಪ್ರಧಾನಿ ವಾಂಗ್ ಹೇಳಿದ್ದಾರೆ’ ಎಂಬ ವಿಡಿಯೋವನ್ನು ಹಂಚಿಕೊಂಡಿದ್ದರು. ಜೊತೆಗೆ, ಸಿಂಗಾಪುರದ ಡಿಜಿಟಲ್ ಅಭಿವೃದ್ಧಿ ಮತ್ತು ಮಾಹಿತಿ ಸಚಿವೆ ಜೋಸೆಫೀನ್ ಟಿಯೊ ಅವರು ಸಿಂಗಾಪುರದಲ್ಲಿ ಒಟ್ಟು ಜನಸಂಖ್ಯೆಯ 15%ಗೂ (60 ಲಕ್ಷ) ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಂ ಸಮುದಾಯವಾದ ‘ಮಲಯನ್’ ಜನಾಂಗದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಸಿಂಗ್ ಆರೋಪಿಸಿದ್ದರು.
ಸಿಂಗಾಪುರದಲ್ಲಿ ಕಳೆದ 59 ವರ್ಷಗಳಲ್ಲಾದ ಅಭಿವೃದ್ಧಿಯ ಕುರಿತು ಚೀನೀ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಸಚಿವೆ ಟಿಯೋ (ಚೀನಾ ಮೂಲದವರು) ಅವರು ಮಲಯಾಳಂನ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಸಿಂಗ್ ತಮ್ಮ ಪೋಸ್ಟ್‌ನಲ್ಲಿ ದೂರಿದ್ದರು.
ವಿಡಿಯೋವನ್ನು ಗಮನಿಸಿದ್ದ ಸಚಿವೆ ಟಿಯೊ ಅವರು ತನ್ನ ಪತ್ರಿಕಾ ಕಾರ್ಯದರ್ಶಿಗೆ ಈ ಬಗ್ಗೆ ಪರಿಶೀಲಿಸಲು ಸೂಚಿಸಿದ್ದರು. ಬಳಿಕ, ಈ ವಿಡಿಯೋವನ್ನು ಪತ್ರಿಕಾ ಕಾರ್ಯದರ್ಶಿ ಡೌನ್‌ಲೋಡ್ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿದ್ದರು. ನಂತರವಷ್ಟೇ, ಸಿಂಗ್ ಅವರು ತಮ್ಮ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ಅಲ್ಲದೆ, ಈ ಬಗ್ಗೆ ಅಪರಿಚಿತ ವ್ಯಕ್ತಿಯಿಂದ ಮಾಹಿತಿ ಮತ್ತು ವಿಡಿಯೋ ಪಡೆದುಕೊಂಡಿದ್ದಾಗಿ ಸಿಂಗ್ ಹೇಳಿಕೊಂಡಿದ್ದರು.
ಬಳಿಕ, ಮತ್ತೊಂದು ವಿಡಿಯೋ ಹಂಚಿಕೊಂಡಿದ್ದ ಸಿಂಗ್, ಸಚಿವೆ ಟಿಯೊ ಅವರ ಬಳಿ ಕ್ಷಮೆಯಾಚಿಸಿದ್ದರು. ತಾನು ಹಿಂದಿನ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದ ಆರೋಪ ಮತ್ತು ಮಾಹಿತಿ ಬಹುಶಃ ಸುಳ್ಳಾಗಿರಬಹುದು ಎಂದು ಹೇಳಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು 2025ರ ಫೆಬ್ರವರಿ 4ರಂದು ಸಿಂಗ್ ಅವರನ್ನು ಬಂಧಿಸಿದ್ದರು. ಮರುದಿನವೇ ಜಾಮೀನು ಪಡೆದು ಸಿಂಗ್ ಜೈಲಿನಿಂದ ಬಿಡುಗಡೆಯಾಗಿದ್ದರು.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುವ ವೇಳೆ ಸಿಂಗ್ ಪರವಾಗಿ ವಾದ ಮಂಡಿಸಿದ್ದ ವಕೀಲರು, “ಸಿಂಗ್ ಅವರು ತಮ್ಮ ತಪ್ಪಿನಿಂದ ನೊಂದಿದ್ದಾರೆ. ತಪ್ಪಿತಸ್ಥ ಭಾವನೆಯಿಂದ ಬಳಲುತ್ತಿದ್ದಾರೆ. ಅವರು ಲಾಭ ಅಥವಾ ಪ್ರಭಾವ ಬೆಳಸಿಕೊಳ್ಳುವ ಉದ್ದೇಶದಿಂದ ಸಾಮಾಜಿಕ ಜಾಲತಾಣವನ್ನು ಬಳಸುತ್ತಿಲ್ಲ. ಅವರು ಜಾಗೃತಿ ಮೂಡಿಸುವ ಪೋಸ್ಟ್‌ಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಾರೆ. ಅಂತೆಯೇ, ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಆದರೆ, ಅದು ನಕಲಿ ಎಂಬುದು ಗೊತ್ತಾದ ಬೆನ್ನಲ್ಲೇ, ಅದನ್ನು ಡಿಲೀಟ್ ಮಾಡಿದ್ದಾರೆ” ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ವಾದವನ್ನು ಆಲಿಸಿದ ನ್ಯಾಯಾಲಯವು ಸಿಂಗ್ ಅವರಿಗೆ ಸುಮಾರು 4 ಲಕ್ಷ ರೂ. ದಂಡವನ್ನು ವಿಧಿಸಿದೆ. ಆದಾಗ್ಯೂ, ಜನಾಂಗೀಯ ನಿಂದನೆಯಂತಹ ಪ್ರಕರಣಗಳಿಗೆ ಸಿಂಗಾಪುರದಲ್ಲಿ 3 ವರ್ಷ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.