ಬೆಂಗಳೂರಿನಲ್ಲಿರುವ ತನ್ನ ಅನಾರೋಗ್ಯ ಪೀಡಿತ ತಾಯಿಯನ್ನು ಭೇಟಿಯಾಗಲು ಭಾರತ ಸರಕಾರ ವಿಸಾ ನಿರಾಕರಿಸಿದೆ ಎಂದು ಭಾರತೀಯ ಮೂಲದ ಜಾತಿ ವಿರೋಧಿ ಹೋರಾಟಗಾರ್ತಿ ಕ್ಷಮಾ ಸಾವಂತ್ ಹೇಳಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ಕ್ಷಮಾ ಸಾವಂತ್ ಅವರು 2014 ರಿಂದ 2023ರವರೆಗೆ ಸಿಯಾಟಲ್ ನಗರ ಮಂಡಳಿಯ ಪ್ರತಿನಿಧಿಯಾಗಿ ಚುನಾಯಿತರಾಗಿದ್ದರು. ಅವರು ಸಿಯಾಟಲ್ ನಗರ ಮಂಡಳಿಯಲ್ಲಿ ಮಂಡಿಸಿದ ಜಾತಿ ತಾರತಮ್ಯ ನಿಷೇಧ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ಇದರೊಂದಿಗೆ 2023 ಫೆಬ್ರವರಿಯಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸಿದ ಅಮೆರಿಕದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಸಿಯಾಟಲ್ ಪಾತ್ರವಾಗಿತ್ತು.
ತನ್ನ ವಿಸಾ ನಿರಾಕರಣೆಯನ್ನು ಬಿಜೆಪಿ ಸರಕಾರದ ರಾಜಕೀಯ ಪ್ರತೀಕಾರ ಎಂದು ಸಾವಂತ್ ಹೇಳಿದ್ದಾರೆ. ಭಾರತ ಸರಕಾರದ ಈ ನಡೆಯ ವಿರುದ್ಧ ಪ್ರತಿಭಟಿಸಿ ಅವರು ಅನ್‌ಲೈನ್ ದೂರು ಅಭಿಯಾನ ಆರಂಭಿಸಿದ್ದಾರೆ. ‘‘ಭಾರತಕ್ಕೆ ಪ್ರವೇಶಿಸುವುದನ್ನು ರದ್ದುಗೊಳಿಸುವ ಹಾಗೂ ನಿರಾಕರಿಸುವ ಮೂಲಕ ಮೋದಿ ಇತರ ಹೋರಾಟಗಾರರು ಹಾಗೂ ಪತ್ರಕರ್ತರ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದ್ದಾರೆ. ನನ್ನ 82 ವರ್ಷದ ತಾಯಿಯ ಆರೋಗ್ಯ ತೀವ್ರವಾಗಿ ಕುಸಿಯುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ: ಸಬಲಾ ಸಂಸ್ಥೆ
‘‘ಮಾನವೀಯ ನೀತಿಯನ್ನು ಅನುಸರಿಸುವಂತೆ ನಾವು ಮೋದಿ ಸರಕಾರವನ್ನು ಆಗ್ರಹಿಸುತ್ತೇವೆ. ಕ್ಷಮಾ ಅವರ ತಾಯಿಯನ್ನು ನೋಡಲು ಭಾರತಕ್ಕೆ ಪ್ರಯಾಣಿಸಲು ಸಾಧ್ಯವಾಗುವಂತೆ ಕ್ಷಮಾ ಸಾವಂತ್ ಹಾಗೂ ಅವರ ಪತಿ ಕೆಲ್ವಿನ್ ಪ್ರಿಯೆಸ್ಟ್‌ಗೆ ತುರ್ತಾಗಿ ವಿಸಾ ಮಂಜೂರು ಮಾಡಿ’’ ಆನ್‌ಲೈನ್ ದೂರಿನಲ್ಲಿ ಹೇಳಲಾಗಿದೆ.
‘‘ಅವರ ಅಧಿಕಾರದ ಅವಧಿಯಲ್ಲಿ ಮೋದಿ ಹಾಗೂ ಬಿಜೆಪಿ ಸರಕಾರದ ಮುಸ್ಲಿಂ ವಿರೋಧಿ, ಬಡವರ ವಿರೋಧಿ ಸಿಎಎ-ಎನ್‌ಆರ್‌ಸಿ (ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಿದ್ದರು. ಅಲ್ಲದೆ, ಮೋದಿ ಅವರ ಕ್ರೂರ ಹಾಗೂ ಶೋಷಕ ನೀತಿಯ ವಿರುದ್ಧದ ರೈತರ ಚಳುವಳಿಗೆ ಬೆಂಬಲ ವ್ಯಕ್ತಪಡಿಸಿದ್ದರು’’ ಎಂದು ದೂರಿನಲ್ಲಿ ಹೇಳಲಾಗಿದೆ.
ಪುಣೆ ಹಾಗೂ ಮುಂಬೈನಲ್ಲಿ ಬಾಲ್ಯ, ಶಿಕ್ಷಣ ಪೂರೈಸಿದ ಕ್ಷಮಾ ವಸಂತ್ ಅವರು ಉದ್ಯೋಗದ ನಿಮಿತ್ತ ಅಮೆರಿಕಕ್ಕೆ ತೆರಳಿದ್ದರು.2014 ರಿಂದ ಸಿಯಾಟಲ್ ನಗರ ಮಂಡಳಿಯ ಪ್ರತಿನಿಧಿಯಾಗಿ ಚುನಾಯಿತರಾಗಿದ್ದಾರೆ.
