ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ನಡುವೆ ಜಗಳ ನಡೆದಿದ್ದು, 22 ವರ್ಷದ ಎಂಟೆಕ್ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿದೆ ಎಂದು ಮೃತ ವಿದ್ಯಾರ್ಥಿಯ ಚಿಕ್ಕಪ್ಪ ಸೋಮವಾರ ಹೇಳಿದ್ದಾರೆ.
ಮೆಲ್ಬೋರ್ನ್‌ನಲ್ಲಿ ಸ್ಥಳೀಯ ಕಾಲಮಾನ ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದ ಘಟನೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾನೆ ಎಂದೂ ಮೃತ ವಿದ್ಯಾರ್ಥಿಯ ಚಿಕ್ಕಪ್ಪ ಯಶ್ವೀರ್ ಮಾಹಿತಿ ನೀಡಿದ್ದಾರೆ.
ಬಾಡಿಗೆ ವಿಚಾರದಲ್ಲಿ ಭಾರತೀಯ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯುತ್ತಿದ್ದಾಗ ನವಜೀತ್ ಸಂಧು ಎಂಬ ವಿದ್ಯಾರ್ಥಿ ಮಧ್ಯಪ್ರವೇಶ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ವಿದ್ಯಾರ್ಥಿಯೋರ್ವ ಚಾಕುವಿನಿಂದ ಇರಿದಿದ್ದಾನೆ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಕೆನಡಾ: ಭಾರತೀಯ ಮೂಲದ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ
“ನವಜೀತ್‌ನ ಬಳಿ ಕಾರು ಇತ್ತು, ಅದರಿಂದಾಗಿ ಆತನ ಸ್ನೇಹಿತ (ಮತ್ತೊಬ್ಬ ಭಾರತೀಯ ವಿದ್ಯಾರ್ಥಿ) ನವಜೀತ್ ಜೊತೆಗಿದ್ದ. ಸ್ನೇಹಿತ ಒಳಗೆ ಹೋದಾಗ, ನವಜೀತ್‌ಗೆ ಕೂಗಾಟ ಕೇಳಿಬಂದಿದೆ. ಗಲಾಟೆ ನೋಡಿ ಜಗಳ ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ. ಈ ಸಂದರ್ಭದಲ್ಲಿ ನವಜೀತ್ ಎದೆಗೆ ಚಾಕುವಿನಿಂದ ಮಾರಣಾಂತಿಕವಾಗಿ ಇರಿದಿದ್ದಾನೆ” ಎಂದು ಯಶ್ವಿರ್ ಹೇಳಿದರು.
“ನವಜೀತ್ ಹಾಗೂ ಆರೋಪಿ ಇಬ್ಬರೂ ಕೂಡಾ ಕರ್ನಾಲ್ ಮೂಲದವರು. ಭಾನುವಾರ ಮುಂಜಾನೆ ಈ ಘಟನೆಯ ಬಗ್ಗೆ ಕುಟುಂಬಕ್ಕೆ ಮಾಹಿತಿ ಲಭಿಸಿದೆ. ಘಟನೆಯಲ್ಲಿ ನವಜೀತ್ ಅವರ ಜೊತೆಗಿದ್ದ ಸ್ನೇಹಿತನಿಗೂ ಗಾಯಗಳಾಗಿವೆ” ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಓಹಿಯೋದಲ್ಲಿ ಶವವಾಗಿ ಪತ್ತೆ: ಈ ವರ್ಷದಲ್ಲಿ 11ನೇ ಪ್ರಕರಣ
“ಕುಟುಂಬ ಈಗ ಆಘಾತಕ್ಕೆ ಒಳಗಾಗಿದೆ. ನವಜೀತ್ ಉತ್ತಮ ವಿದ್ಯಾರ್ಥಿ, ಜುಲೈನಲ್ಲಿ ರಜೆಯಿದ್ದು ಭಾರತಕ್ಕೆ ಬರಲಿದ್ದ. ನವಜೀತ್ ಒಂದೂವರೆ ವರ್ಷಗಳ ಹಿಂದೆ ಸ್ಟಡಿ ವೀಸಾದ ಮೇಲೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಕೃಷಿಕರಾಗಿರುವ ನವಜೀತ್ ತಂದೆ ಶಿಕ್ಷಣಕ್ಕಾಗಿ ತಮ್ಮ ಒಂದೂವರೆ ಎಕರೆ ಜಮೀನನ್ನು ಮಾರಾಟ ಮಾಡಿದ್ದರು” ಎಂದು ಮೃತ ವಿದ್ಯಾರ್ಥಿಯ ಚಿಕ್ಕಪ್ಪ ಯಶ್ವೀರ್ ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಆದಷ್ಟು ಬೇಗ ಮೃತದೇಹವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.