ಸೊಮಾಲಿಯಾದ ಕರಾವಳಿ ಬಳಿ ನಿನ್ನೆ ಸಂಜೆ ಲೈಬೀರಿಯನ್ ಧ್ವಜವನ್ನು ಹೊಂದಿದ್ದ ಹಡಗನ್ನು ಅಪಹರಣ ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆ ಮಾಹಿತಿ ನೀಡಿದೆ. ಈ ಹಡಗಿನಲ್ಲಿ 15 ಭಾರತೀಯ ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ. ಇದೀಗ ಈ ಹಡಗಿನ ಚಲನವಲನಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಭಾರತೀಯ ನೌಕಾಪಡೆಯು ಹೇಳಿದೆ.
ಹಡಗನ್ನು ಅಪಹರಣ ಮಾಡಿರುವ ಬಗ್ಗೆ ಭಾರತೀಯ ನೌಕಾಪಡೆ ನಿನ್ನೆ (ಗುರುವಾರ ಜ.4) ಸಂಜೆ ಮಾಹಿತಿ ನೀಡಲಾಗಿದೆ. ಲೈಬೀರಿಯನ್ ಧ್ವಜದ ಹಡಗು ‘ಎಂವಿ ಲಿಲಾ ನಾರ್ಫೋಕ್(MV LILA NORFOLK)’ ಎಂದು ಗುರುತಿಸಲಾಗಿದ್ದು, ಇದರಲ್ಲಿ 15 ಭಾರತೀಯ ಸಿಬ್ಬಂದಿಗಳು ಇದ್ದರು ಎಂದು ಹೇಳಲಾಗಿದೆ.
ಅಧಿಕಾರಿಗಳ ಪ್ರಕಾರ, “ಅಪಹರಣಕ್ಕೊಳಗಾದ ಹಡಗಿನ ಚಲನವಲನಗಳ ಮೇಲೆ ಸದಾ ನಿಗಾ ಇಡಲು ಭಾರತೀಯ ನೌಕಾಪಡೆಯ ವಿಮಾನಗಳನ್ನು ನಿಯೋಜಿಸಲಾಗಿದೆ. ಇನ್ನು ಹೈಜಾಕ್ ಆಗಿರುವ ಹಡಗಿನ ಸಿಬ್ಬಂದಿಯೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಲಾಗಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ಚೆನ್ನೈಯಿಂದ ಅಪಹರಣಕ್ಕೊಳಗಾದ ಹಡಗಿನ ಕಡೆಗೆ ಚಲಿಸುತ್ತಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್‌ನನ್ನು ನಾನೇ ಕೊಲೆ ಮಾಡುತ್ತೇನೆ: ಅಯೋಧ್ಯ ಸ್ವಾಮೀಜಿಯ ವಿವಾದಾತ್ಮಕ ಹೇಳಿಕೆ
ಹಡಗಿನ ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆಯಲು ಸಂಪರ್ಕಿಸಲಾಗಿದೆ. ಗುರುವಾರ ಸಂಜೆ ಸುಮಾರು ಐದರಿಂದ ಆರು ಅಪರಿಚಿತ ಶಸ್ತ್ರಧಾರಿಗಳು ಹಡಗಿನೊಳಗೆ ನುಗ್ಗಿ ಹೈಜಾಕ್ ಮಾಡಿರುವುದಾಗಿ ಸೂಚಿಸುವ ಸಂದೇಶವನ್ನು ಕಳುಹಿಸಿದ್ದರು. ಹಡಗಿನಲ್ಲಿ ಒಟ್ಟು ಎಷ್ಟು ಮಂದಿ ಸಿಬ್ಬಂದಿ ಇದ್ದರು ಎಂಬ ಬಗ್ಗೆ ಪೂರ್ಣ ಮಾಹಿತಿ ಇನ್ನೂ ವರದಿಯಾಗಿಲ್ಲ.