ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಹೆಚ್ಚಾಗುತ್ತಿರುವ ನಡುವೆ ಮಂಗಳವಾರ ಇಸ್ರೇಲ್‌ನ ಮೊಸಾದ್ ಬೇಹುಗಾರಿಕೆ ಸಂಸ್ಥೆಯ ಕೇಂದ್ರವನ್ನು ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿದೆ.
“ಐಆರ್‌ಜಿಸಿ ಟೆಲ್ ಅವಿವ್‌ನಲ್ಲಿರುವ ಜಿಯೋನಿಸ್ಟ್ ಆಡಳಿತದ ಮೊಸಾದ್ ಬೇಹುಗಾರಿಕೆ ಸಂಸ್ಥೆಯ ಪ್ರಮುಖ ಕೇಂದ್ರದ ಮೇಲೆ ಯಶಸ್ವಿಯಾಗಿ ಕ್ಷಿಪಣಿ ದಾಳಿಯನ್ನು ನಡೆಸಲಾಗಿದೆ ಎಂದು ಇರಾನ್ ಘೋಷಿಸಿದೆ” ಎಂದು ಸುದ್ದಿ ಸಂಸ್ಥೆ ತಸ್ನಿಮ್ ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಟಿವಿಯಲ್ಲಲ್ಲ, ಮನೆಯ ಹೊರಗೆ ಯುದ್ಧ ನಡೆಯುತ್ತಿದೆ: ಇರಾನ್-ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರು
ಏರೋಸ್ಪೇಸ್ ಫೋರ್ಸ್ ಘಟಕಗಳು ಕ್ಷಿಪಣಿ ದಾಳಿಯನ್ನು ನಡೆಸಿದೆ. ಹತ್ಯೆ ಮತ್ತು ದುಷ್ಟ ಕೃತ್ಯಗಳ ಯೋಜನೆ ರೂಪಿಸುವ ಮೊಸಾದ್‌ನ ಕೇಂದ್ರ ಮತ್ತು ಇಸ್ರೇಲ್‌ನ ಮಿಲಿಟರಿ ಗುಪ್ತಚರ ನಿರ್ದೇಶನಾಲಯ AMAN ಅನ್ನು ಹೊಡೆದುರುಳಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇಸ್ರೇಲ್ ಇನ್ನೂ ಈ ದಾಳಿಯನ್ನು ದೃಢಪಡಿಸಿಲ್ಲ.
ಆದರೆ ಇರಾನಿನ ದಾಳಿಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದ್ದು, ಮೊಸಾದ್ ಕೇಂದ್ರವು ಹೊಗೆಯಿಂದ ಆವರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈಗಾಗಲೇ ಇಸ್ರೇಲ್ ತನ್ನ ಮಿಲಿಟರಿಯ ಭಾಗವಾಗಿ ಇರಾನಿನ ಮಿಲಿಟರಿ ನೆಲೆಗಳು ಮತ್ತು ಪರಮಾಣು ಸೌಲಭ್ಯಗಳ ಮೇಲೆ ದಾಳಿ ನಡೆಸಿದ ನಂತರ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗಿದೆ.
BREAKING:
— Globe Eye News (@GlobeEyeNews) June 17, 2025
Iran strikes Israeli intelligence agency Mossad's HQ. pic.twitter.com/7KxhG4fbhq
ಉಭಯ ದೇಶಗಳಲ್ಲಿ ನಡೆದ ದಾಳಿ ಪ್ರತಿದಾಳಿಯಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಸ್ರೇಲ್‌ನಲ್ಲಿ ಕನಿಷ್ಠ 24 ಮಂದಿ, ಇರಾನ್‌ನಲ್ಲಿ 224 ಮಂದಿ ಮೃತಪಟ್ಟಿದ್ದಾರೆ. ಇರಾನ್‌ನಲ್ಲಿ ಬಹುತೇಕ ಮಹಿಳೆಯರು, ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಇರಾನ್ ಹೇಳಿದೆ.
ಇಸ್ರೇಲ್‌ನಿಂದ ಗ್ರೀಸ್, ಸೈಪ್ರಸ್ ತೆರಳುತ್ತಿರುವ ಜನರು
ಇರಾನ್‌ನ ಕ್ಷಿಪಣಿ ದಾಳಿಗಳಿಂದ ತಪ್ಪಿಸಿಕೊಳ್ಳಲು ಇಸ್ರೇಲಿಗಳು ಮತ್ತು ಇಸ್ರೇಲಿನಲ್ಲಿ ನೆಲೆಸಿರುವ ವಿದೇಶಿಗರು ಹೆರ್ಜ್ಲಿಯಾ, ಹೈಫಾ, ಮತ್ತು ಅಶ್ಕೆಲಾನ್ ಬಂದರುಗಳಿಂದ ಸಾವಿರಾರು ಡಾಲರ್ ತೆತ್ತು ಸೈಪ್ರಸ್, ಗ್ರೀಸ್ ತಲುಪುತ್ತಿದ್ದಾರೆ.
ಇಸ್ರೇಲ್‌ನ ವಾಯುಪ್ರದೇಶವು ಅನಿರ್ದಿಷ್ಟಾವಧಿಗೆ ಮುಚ್ಚಲ್ಪಟ್ಟಿರುವುದರಿಂದ ವಿದೇಶಗಳಲ್ಲಿ ಸಿಲುಕಿರುವ ಹತ್ತಾರು ಸಾವಿರ ನಾಗರಿಕರು ಸೈಪ್ರಸ್ ಅಥವಾ ಗ್ರೀಸ್‌ಗೆ ವೇಗವಾಗಿ ಧಾವಿಸಬೇಡಿ ಎಂದು ಇಸ್ರೇಲ್ ಅಧಿಕಾರಿಗಳು ಭಾನುವಾರ ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ಇಸ್ರೇಲ್‌ನಿಂದ ಗ್ರೀಸ್ ಮತ್ತು ಸೈಪ್ರಸ್‌ಗೆ ಜನರು ಸಾವಿರಾರು ಡಾಲರ್ ತೆತ್ತು ಹೋಗುತ್ತಿರುವುದಾಗಿ ವರದಿಯಾಗಿದೆ.
