ಅಮೆರಿಕ ಪಡೆಗಳು ದಕ್ಷಿಣ ಇರಾನ್ನ ಸಿರಿಕ್ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದ ಮೇಲೆ ಅಮೆರಿಕದ ದಾಳಿ ನಡೆಸಿದ ಪರಿಣಾಮ ಒಂದು ಮಗು ಸೇರಿದಂತೆ ಕನಿಷ್ಠ ನಾಲ್ವರು ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಈ ಘಟನೆಯ ಬಳಿಕ ಅಮೆರಿಕ ಪಡೆಗಳಿಗೆ “ಕಠಿಣ ಶಿಕ್ಷೆ” ನೀಡುವುದಾಗಿ ಶಪಥ ಮಾಡಿರುವ ಇರಾನ್, ಬಹ್ರೇನ್, ಕುವೈತ್ ಮತ್ತು ಜೋರ್ಡಾನ್ನಲ್ಲಿರುವ ಅಮೆರಿಕದ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸಿದೆ. ಇತ್ತೀಚೆಗೆ ನೇರ ಬಾಂಬ್ ದಾಳಿ ಪುನರಾರಂಭಗೊಂಡ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ, “ಅಮೆರಿಕಕ್ಕೆ ಮರೆಯಲಾಗದ ಪಾಠ ಕಲಿಸಲು ನಮ್ಮ ಸಶಸ್ತ್ರ ಪಡೆಗಳು ಸಜ್ಜಾಗಿವೆ” ಎಂದು ಎಚ್ಚರಿಸಿದ್ದಾರೆ. ಐಆರ್ಜಿಸಿ ವಕ್ತಾರ ಹೊಸೈನ್ ಮೊಹೆಬಿ ಕೂಡ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ವಾಷಿಂಗ್ಟನ್ ತನ್ನ ಹೊಸ ದಾಳಿಗಳ ಬಗ್ಗೆ ಪಶ್ಚಾತ್ತಾಪ ಪಡಲಿದೆ ಮತ್ತು ಆಕ್ರಮಣಕಾರರಿಗೆ ತಕ್ಕ ಶಾಸ್ತಿಯಾಗಲಿದೆ ಎಂದು ಗುಡುಗಿದ್ದಾರೆ.
ಭಾನುವಾರದಿಂದ ಇರಾನ್ ಗುರಿಗಳ ಮೇಲೆ ವಾಷಿಂಗ್ಟನ್ ದಾಳಿ ಆರಂಭಿಸಿದ್ದು, ಮಂಗಳವಾರ ಈ ದಾಳಿಯನ್ನು ತೀವ್ರಗೊಳಿಸಿತ್ತು. ದಕ್ಷಿಣ ಇರಾನ್ನ ಆಯಕಟ್ಟಿನ ಸ್ಟ್ರೈಟ್ ಆಫ್ ಹಾರ್ಮುಜ್ ಮತ್ತು ಗಲ್ಫ್ನ ದ್ವೀಪವೊಂದರಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಇರಾನ್ನ ಸರ್ಕಾರಿ ಟೆಲಿವಿಷನ್ ವರದಿ ಮಾಡಿದೆ. ದಕ್ಷಿಣ ಪ್ರಾಂತ್ಯದ ಕೆರ್ಮನ್ನಲ್ಲಿರುವ ವಿಮಾನ ನಿಲ್ದಾಣದ ಮೇಲೂ ಅಮೆರಿಕ ಪಡೆಗಳು ದಾಳಿ ನಡೆಸಿವೆ. ಸಿರಿಕ್ನ ಕುವೆಸ್ತಕ್ ನಗರದ ವಿವಾಹ ಸಮಾರಂಭದ ಹೊರತಾಗಿ, ಚಬಹಾರ್ ಮತ್ತು ಕೊನಾರಕ್ ಕೌಂಟಿಗಳ ವ್ಯಾಪ್ತಿಯಲ್ಲೂ ನಾಲ್ಕು ಕ್ಷಿಪಣಿಗಳು ಅಪ್ಪಳಿಸಿವೆ ಎಂದು ಇರಾನ್ನ ಅಧಿಕೃತ ಸುದ್ದಿ ಸಂಸ್ಥೆ ಐಆರ್ಎನ್ಎ (IRNA) ವರದಿ ಮಾಡಿದೆ.
“ಅಮೆರಿಕನ್ನರು ತಮ್ಮ ಅಪರಾಧಗಳಿಗೆ ಪಶ್ಚಾತ್ತಾಪ ಪಡುವವರೆಗೂ ಈ ಕಾರ್ಯಾಚರಣೆ ಮುಂದುವರಿಯಲಿದೆ” ಎಂದು ಇರಾನ್ನ ಖತಮ್ ಅಲ್-ಅನ್ಬಿಯಾ ಸೆಂಟ್ರಲ್ ಹೆಡ್ಕ್ವಾರ್ಟರ್ಸ್ನ ವಕ್ತಾರ ಕರ್ನಲ್ ಇಬ್ರಾಹಿಂ ಜೊಲ್ಫಘಾರಿ ಎಚ್ಚರಿಸಿದ್ದಾರೆ. ಇರಾನ್ನ ಪಡೆಗಳು ಅಮೆರಿಕದ ನೆಲೆಗಳ ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರಗಳನ್ನು ನಾಶಪಡಿಸಿದ್ದು, ಅಮೆರಿಕ ಸೇನೆಗೆ ಸಹಕರಿಸುವ ಯಾವುದೇ ದೇಶವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.





