ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅಲ್ಲಿನ ಬಡಜನರ ಸಮಸ್ಯೆಗಳನ್ನು ಅರಿತು, ಅವರಿಗೆ ಸ್ಪಂದಿಸುವ ಮೂಲಕ ದಲಿತ ಚಳುವಳಿಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಬೇಕು ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ದೇವಗಳ್ಳಿ ಸೋಮಶೇಖರ ಕರೆ ನೀಡಿದರು.
ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಹುಣಸೂರು ತಾಲ್ಲೂಕು ದಸಂಸ ಪುನರ್ರಚನಾ ಸಭೆಯಲ್ಲಿ ಮಾತನಾಡಿದ ಅವರು, 25-30 ವರ್ಷಗಳ ಹಿಂದೆ ದಸಂಸ ಕಾರ್ಯಕರ್ತರು ಪ್ರತಿ ಹಳ್ಳಿಗೂ ತೆರಳಿ ಬಡಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದರು. ಇದರಿಂದ ಸಂಘಟನೆ ಜನರ ಮನದಲ್ಲಿ ಗಟ್ಟಿಯಾಗಿ ನೆಲೆಸಿತ್ತು. ಅದೇ ಮಾದರಿಯಲ್ಲಿ ಈಗಲೂ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದರು.
ಯಾವುದೇ ಸಮಸ್ಯೆ ಅಥವಾ ದೂರು ಬಂದಾಗ ಸ್ಥಳಕ್ಕೆ ತೆರಳಿ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಸಂಚಾಲಕ ಎಸ್.ಡಿ. ಸಣ್ಣಸ್ವಾಮಿ ಸರಗೂರು ಮಾತನಾಡಿ, ದಸಂಸ ಪುನರ್ರಚನೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಸಭೆಗಳನ್ನು ನಡೆಸಿ ಸಂಘಟನೆಯನ್ನು ಬಲಪಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಹುಣಸೂರು ತಾಲ್ಲೂಕು ಹಾಗೂ ನಗರ ಸಮಿತಿಯ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಘೋಷಿಸಲಾಯಿತು.
ಹುಣಸೂರು ತಾಲ್ಲೂಕು ಸಮಿತಿ ಸಂಚಾಲಕರಾಗಿ ಕಿರಣ್ ಕುಮಾರ್ ಮಲ್ಲಾಡಿ, ಸಂಘಟನಾ ಸಂಚಾಲಕರಾಗಿ ದೇವರಾಜ್ ಹಾರೋಹಳ್ಳಿ, ಸಿಂಗ್ರಯ್ಯ ಮುಳ್ಳೂರು, ಕೃಷ್ಣ ಚಿಕ್ಕಡಗನಹಳ್ಳಿ, ಖಜಾಂಚಿಯಾಗಿ ಲೋಹಿತ್ ಮಂಗಳೂರು ಮಾಳ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ತಟ್ಟೆಕೆರೆ ನಾಗರಾಜು, ಮಂಜಣ್ಣ, ಕರಣನಕುಪ್ಪೆ ಮಾರನಹಳ್ಳಿ ಶಿವಣ್ಣ ಹಾಗೂ ರಾಮಕೃಷ್ಣ ಬೀರನಹಳ್ಳಿ ಆಯ್ಕೆಯಾದರು.
ಹುಣಸೂರು ನಗರ ಸಮಿತಿ ಸಂಚಾಲಕರಾಗಿ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದೇವರಾಜ್, ಸಂಘಟನಾ ಸಂಚಾಲಕರಾಗಿ ಶಿವಣ್ಣ, ನರಸಿಂಹಸ್ವಾಮಿ ತಿಟ್ಟು, ಜವರಯ್ಯ ಮರೂರು ಹಾಗೂ ಮಂಜು ಕರಣಕುಪ್ಪೆ ಆಯ್ಕೆಯಾದರು. ಖಜಾಂಚಿಯಾಗಿ ರಾಮಣ್ಣ ಚಿಕ್ಕಹುಣಸೂರು ಆಯ್ಕೆಯಾದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಶುಂಠಿ ಬೆಳೆ: ಮಣ್ಣಿನಲ್ಲಿ ಜೀವವಿದೆ. ಆ ಜೀವ ಉಳಿದರೆ ಮಾತ್ರ ಕೃಷಿ ಉಳಿಯುತ್ತದೆ
ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಆಲಗೂಡು ಶಿವಣ್ಣ, ಬೊಕ್ಕಳ್ಳಿ ಲಿಂಗಯ್ಯ, ಬೂತಗಳ್ಳಿ ಪುಟ್ಟ ಮಾದಯ್ಯ, ದೇವರಾಜ್ ಮಲ್ಲಾಡಿ, ಮಹಿಳಾ ಒಕ್ಕೂಟದ ರತ್ನಮ್ಮ, ಹುಣಸೂರು ತಟ್ಟೆಕೆರೆ ನಾಗರಾಜು, ಜಿಲ್ಲಾ ಸಂಘಟನಾ ಸಂಚಾಲಕರಾದ ದೇವರಾಜ್ ಮಲ್ಲಾಡಿ, ಕಿರಣ್ ಕುಮಾರ್ ಮಲ್ಲಾಡಿ ಸೇರಿದಂತೆ ಹಲವರು ಇದ್ದರು.





