12 ದಿನಗಳ ಸಂಘರ್ಷವು ಉಭಯ ರಾಷ್ಟ್ರಗಳಿಗೆ ಭಾರೀ ಹೊಡೆತ ನೀಡಿದೆ. ಎರಡೂ ದೇಶಗಳ ಜನಜೀವನ, ಆರ್ಥಿಕತೆ ಮತ್ತು ರಾಜಕೀಯ ಭವಿಷ್ಯದ ಮೇಲೆ ಗಾಢವಾದ ಪರಿಣಾಮ ಬೀರಿದೆ. ಮಾತ್ರವಲ್ಲದೆ, ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ವಿಶೇಷವಾಗಿ ತೈಲ ಬೆಲೆಗಳ ಏರಿಕೆಗೆ ಕಾರಣವಾಗಿದೆ.
ಸುಮಾರು 15 ದಿನಗಳ ಕಾಲ ನಡೆದ ಇಸ್ರೇಲ್-ಇರಾನ್ ಸಂಘರ್ಷವು ಸದ್ಯಕ್ಕೆ ಅಂತ್ಯಗೊಂಡಂತೆ ಕಾಣುತ್ತಿದೆ. ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಆದರೆ, ದಾಳಿಕೋರತನವನ್ನು ರೂಢಿಸಿಕೊಂಡಿರುವ ಇಸ್ರೇಲ್ ಮತ್ತೆ-ಮತ್ತೆ ದಾಳಿ ನಡೆಸಬಹುದಾದ ಸಾಧ್ಯತೆಗಳಿವೆ ಎಂಬ ಅಭಿಪ್ರಾಯಗಳು ದಟ್ಟವಾಗಿದೆ. ಈಗಾಗಲೇ, ಗಾಜಾ ಜೊತೆಗೆ ಕದನ ವಿರಾಮವನ್ನು 962 ಬಾರಿ ಉಲ್ಲಂಘಿಸಿರುವ ಇಸ್ರೇಲ್, ತನ್ನ ಕ್ರೌಯವನ್ನು ಜಗತ್ತಿಗೆ ತೊರಿಸಿದೆ. ಮಧ್ಯಪ್ರಾಚ್ಯದಲ್ಲಿ ತಾನೇ ಸಾರ್ವಭೌಮ ಎಂಬಂತೆ ಮೆರೆಯುತ್ತಿದ್ದ ಇಸ್ರೇಲ್ಗೆ ಇರಾನ್ ಭಾರೀ ಹೊಡೆತ ಕೊಟ್ಟಿದೆ, ಇಸ್ರೇಲ್-ಇರಾನ್ ಸಂಘರ್ಷದಿಂದ ಮಧ್ಯಪ್ರಾಚ್ಯದ ಭೌಗೋಳಿಕ-ರಾಜಕೀಯ ಭೂದೃಶ್ಯವು ಬದಲಾಗಿದೆ. ಎರಡೂ ರಾಷ್ಟ್ರಗಳು ಸಾಕಷ್ಟು ಸಾವು-ನೋವು, ಆರ್ಥಿಕ ಕುಸಿತ, ಸಂಕಷ್ಟದ ಜನಜೀವನವನ್ನು ಎದುರಿಸುತ್ತಿವೆ.
ಸಾವು-ನೋವು, ಜನಜೀವನ
ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯು ಬಹುತೇಕ ಜನವಸತಿ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡಿತ್ತು. ಇರಾನ್ನಲ್ಲಿ 74 ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 224 ಮಂದಿ ಮೃತಪಟ್ಟಿದ್ದಾರೆ. 1,800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಸರ್ಕಾರ ಹೇಳಿಕೊಂಡಿದೆ. ಆದರೆ, ಈ ಸಾವುಗಳ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ರಾಜಧಾನಿ ಟೆಹ್ರಾನ್ನಲ್ಲಿ ವಿವಿಧ ಕಟ್ಟಡಗಳು ಧ್ವಂಸಗೊಂಡಿವೆ.
ತನ್ನ ನಾಗರಿಕರ ಮೇಲೆ ದಾಳಿ ನಡೆದಿದ್ದರ ಹೊರತಾಗಿಯೂ ಇರಾನ್, ಇಸ್ರೇಲ್ನ ಜನವಸತಿ ಪ್ರದೇಶಗಳ ಮೇಲೆ ಹೆಚ್ಚು ದಾಳಿ ಮಾಡಲಿಲ್ಲ. ಹೀಗಾಗಿ, ಇಸ್ರೇಲ್ನಲ್ಲಿ 24 ಮಂದಿ ಮೃತಪಟ್ಟಿದ್ದಾರೆ. ಆದರೆ, ಇಸ್ರೇಲ್ ರಾಜಧಾನಿ ಜೆರುಸಲೆಂ, ತೆಲ್ ಅವೀವ್, ಹೈಫಾ, ಪೆತಾಹ್ ತಿಕ್ವಾ, ಬಾಟ್ ಯಾಮ್, ತಾಮ್ರಾ ಹಾಗೂ ಬೀರ್ಶೆಬಾ ನಗರಗಳಲ್ಲಿ ಭಾರೀ ನಷ್ಟವಾಗಿದೆ. ವಸತಿ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು, ಪ್ರಮುಖ ನೆಲೆಗಳು ನಾಶಗೊಂಡಿವೆ. ಪರಿಣಾಮ ಭಾರೀ ನಷ್ಟ ಉಂಟಾಗಿದೆ. ಜನರು ಆಶ್ರಯಕ್ಕಾಗಿ ಬಂಕರ್ಗಳಲ್ಲಿ ಬೀಡುಬಿಟ್ಟಿದ್ದಾರೆ. ವಾಣಿಜ್ಯ ವಿಮಾನಯಾನ ಸ್ಥಗಿತಗೊಂಡಿದೆ. ದೇಶದಾದ್ಯಂತ ಭಯ ಮತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಇರಾನ್ನಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕಾರಣಗಳಿಗಾಗಿ ಅಲ್ಲಿನ ಸರ್ಕಾರದ ಮೇಲೆ ಜನರು ಕೋಪಗೊಂಡಿದ್ದಾರೆ. ಆದಾಗ್ಯೂ, ಇಸ್ರೇಲ್ನ ದಾಳಿಗಳಿಂದಾಗಿ ಅಲ್ಲಿನ ಜನರು ಸರ್ಕಾರದೊಂದಿಗೆ ನಿಂತಿದ್ದಾರೆ. ಶಾಂತಿಯನ್ನು ಬಯಸುತ್ತಿದ್ದ ಜನರು, ರಾಷ್ಟ್ರದ ರಕ್ಷಣೆಗಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇಸ್ರೇಲ್ನ ಅಟ್ಟಹಾಸಕ್ಕೆ ಕಡಿವಾಣ ಹಾಕಿರುವ ಇರಾನ್, ಮಧ್ಯಪ್ರಾಚ್ಯದ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ.
ಹಾನಿ ಮತ್ತು ನಷ್ಟ
ಇಸ್ರೇಲ್ನ ದಾಳಿಯಿಂದ ಇರಾನ್ನಲ್ಲಿ ಪರಮಾಣು ಸೌಲಭ್ಯಗಳು, ಸೈನಿಕ ನೆಲೆಗಳು, ಶಾರನ್ ತೈಲ ನಿಕ್ಷೇಪ ಹಾಗೂ ದಕ್ಷಿಣ ಪಾರ್ಸ್ ಗ್ಯಾಸ್ಫೀಲ್ಡ್ ಸೇರಿದಂತೆ ಪ್ರಮುಖ ಇಂಧನ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ. ಇರಾನ್ನ ಸುಮಾರು 22 ಪ್ರಮುಖ ಸೈನಿಕ ನಾಯಕರು ಮತ್ತು 10ರಿಂದ 12 ಪರಮಾಣು ವಿಜ್ಞಾನಿಗಳು ಕೊಲ್ಲಲ್ಪಟ್ಟಿದ್ದಾರೆ. ಇರಾನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಇಸ್ರೇಲ್ ಪರಿಣಾಮಕಾರಿಯಾಗಿ ಧ್ವಂಸಗೊಳಿಸಿದೆ.
ಇರಾನ್ ನಡೆಸಿದ ಪ್ರತಿದಾಳಿಗಳಿಂದ ಇಸ್ರೇಲ್ನಲ್ಲಿ ತೆಲ್ ಅವೀವ್, ಹೈಫಾ ಹಾಗೂ ಪ್ರಮುಖ ನಗರಗಳು ತತ್ತರಿಸಿಹೋಗಿವೆ. ಪ್ರಮುಖ ವಸತಿ ಮತ್ತು ಸರ್ಕಾರಿ ಕಟ್ಟಡಗಳು ಧ್ವಂಸಗೊಂಡಿವೆ. ಇಸ್ರೇಲ್ನ ರಕ್ಷಣಾ ವ್ಯವಸ್ಥೆಗಳು, ವಿಶೇಷವಾಗಿ F-35I, F-15I ಹಾಗೂ F-16 ವಿಮಾನಗಳ ಹಾನಿಯಾಗಿವೆ. ಇಸ್ರೇಲ್ ಸುಧಾರಿಸಿಕೊಳ್ಳಲು ವರ್ಷಗಳೇ ಬೇಕಾಗಬಹುದು ಎಂದು ವಿಶ್ಲೇಷಿಸಲಾಗಿದೆ.
ಆರ್ಥಿಕ ಪರಿಸ್ಥಿತಿ
ಅಮೆರಿಕ ಹೇರಿರುವ ದಶಕಗಳ ನಿರ್ಬಂಧಗಳನ್ನು ಮೆಟ್ಟಿ, ಇರಾನ್ ಸ್ವಾವಲಂಬಿಯಾಗಿ ಆರ್ಥಿಕ ಸದೃಢತೆಯತ್ತ ದಾಪುಗಾಲು ಹಾಕುತ್ತಿತ್ತು. ಹಲವು ರಾಷ್ಟ್ರಗಳೊಂದಿಗೆ ಡಾಲರ್ ಇಲ್ಲದೆಯೇ, ಕೊಡು-ಕೊಳ್ಳುವಿಕೆ ಮೂಲಕ ವ್ಯವಹಾರ ನಡೆಸುತ್ತಿತ್ತು. ಇಂತಹ ಸಂದರ್ಭದಲ್ಲಿ ಇಸ್ರೇಲ್ ನಡೆಸಿದ ದಾಳಿಯು ಇರಾನ್ಗೆ ಭಾರೀ ಪೆಟ್ಟುಕೊಟ್ಟಿದೆ. ಆರ್ಥಿಕತೆ ದುರ್ಬಲಗೊಂಡಿದೆ. ಇಸ್ರೇಲ್ನ ದಾಳಿಯಿಂದಾಗಿ ಇರಾನ್ನ ತೈಲ ರಫ್ತಿನಲ್ಲಿ ಭಾರೀ ಕುಸಿತ ಕಂಡುಬಂದಿದೆ.
ದಕ್ಷಿಣ ಪಾರ್ಸ್ ಗ್ಯಾಸ್ಫೀಲ್ಡ್ಗೆ ಆದ ಹಾನಿಯು ಇಂಧನ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಖಾರ್ಗ್ ದ್ವೀಪದಿಂದ ತೈಲ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. 2025ರಲ್ಲಿ ಇರಾನ್ನಿಂದ ದಿನನಿತ್ಯ ಸುಮಾರು 34 ಲಕ್ಷ ಬ್ಯಾರೆಲ್ ತೈಲ ರಫ್ತಾಗುತ್ತಿತ್ತು. ಆದರೆ, ಸಂಘರ್ಷದಿಂದಾಗಿ, ರಫ್ತು 10.2 ಲಕ್ಷ ಬ್ಯಾರೆಲ್ಗೆ ಕುಸಿದಿದೆ. ತೈಲ ಮಾರಾಟವೇ ಆದಾಯದ ಮೂಲವಾಗಿದ್ದ ಇರಾನ್ಗೆ ಈ ಕುಸಿತವು ಭಾರೀ ಹೊಡೆತ ನೀಡಿದೆ.
ಈ ಲೇಖನ ಓದಿದ್ದೀರಾ?: ಇಸ್ರೇಲ್-ಇರಾನ್ ಸಂಘರ್ಷ | ಟ್ರಂಪ್ ಹುಚ್ಚಾಟ ಅನಾವರಣ
ಇಸ್ರೇಲ್ ಕೂಡ ಆರ್ಥಿಕವಾಗಿ ಗಮನಾರ್ಹ ಒತ್ತಡವನ್ನು ಎದುರಿಸುತ್ತಿದೆ. 2023ರಲ್ಲಿ 60 ಬಿಲಿಯನ್ ಶೆಕೆಲ್ ಇದ್ದ ಇಸ್ರೇಲ್ನ ರಕ್ಷಣಾ ಬಜೆಟ್ 2024ರಲ್ಲಿ 99 ಬಿಲಿಯನ್ ಮತ್ತು 2025ರಲ್ಲಿ 118 ಬಿಲಿಯನ್ ಶೆಕೆಲ್ಗಳಿಗೆ ಏರಿಕೆಯಾಗಿದೆ. ಈ ಏರಿಕೆಯು ಇಸ್ರೇಲ್ನಲ್ಲಿನ ಮೂಲ ಸೌಕರ್ಯಗಳು ಮತ್ತು ಜನ ಯೋಜನೆಗಳ ಮೇಲಿನ ಬಜೆಟ್ಅನ್ನು ಕಡಿತಗೊಳಿಸಿವೆ. ಇದು ದೇಶದ ಆರ್ಥಿಕತೆಯ ಮೇಲೆ ಒತ್ತಡವನ್ನು ಉಂಟುಮಾಡಿದೆ. ಇಸ್ರೆಲ್ನ 60,000 ಕಂಪನಿಗಳು ಕಾರ್ಮಿಕ ಕೊರತೆ, ಲಾಜಿಸ್ಟಿಕ್ಸ್ ಸಮಸ್ಯೆಗಳು ಹಾಗೂ ಕಡಿಮೆ ವ್ಯಾಪಾರ ವಹಿವಾಟುಗಳಿಂದ ತತ್ತರಿಸಿವೆ. ಇರಾನ್ ನಡೆಸಿದ ಪ್ರತಿದಾಳಿಯು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.
ಜೊತೆಗೆ, ನಗರಗಳು ಅಪಾರ ಹಾನಿಗೆ ತುತ್ತಾಗಿದ್ದು, ನಗರಗಳನ್ನು ಮರುನಿರ್ಮಾಣ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದು, ಹೆಚ್ಚು ಆರ್ಥಿಕ ಹೊರೆಯನ್ನು ಉಂಟುಮಾಡಿದೆ. ಇಸ್ರೇಲ್ನ ಕ್ರೆಡಿಟ್ ರೇಟಿಂಗ್ A ರಿಂದ A- ಗೆ ಕುಸಿಯುವ ಸಾಧ್ಯತೆಯಿದೆ. ಇದು ಸಾಲ ಮತ್ತು ವೆಚ್ಚವನ್ನು ಹೆಚ್ಚಿಸಬಹುದು. ಇದು ಅಲ್ಲಿನ ಜನರಲ್ಲಿ ಭಯ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸಿದೆ.
ಏನೇ ಇರಲಿ, 12 ದಿನಗಳ ಸಂಘರ್ಷವು ಉಭಯ ರಾಷ್ಟ್ರಗಳಿಗೆ ಭಾರೀ ಹೊಡೆತ ನೀಡಿದೆ. ಎರಡೂ ದೇಶಗಳ ಜನಜೀವನ, ಆರ್ಥಿಕತೆ ಮತ್ತು ರಾಜಕೀಯ ಭವಿಷ್ಯದ ಮೇಲೆ ಗಾಢವಾದ ಪರಿಣಾಮ ಬೀರಿದೆ. ಮಾತ್ರವಲ್ಲದೆ, ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ವಿಶೇಷವಾಗಿ ತೈಲ ಬೆಲೆಗಳ ಏರಿಕೆಗೆ ಕಾರಣವಾಗಿದೆ. ಈ ನಡುವೆ, ಅಮೆರಿಕದ ಕುಮ್ಮಕ್ಕಿನಿಂದ ತಾನೇ ಪ್ರಬಲ ಎಂಬಂತೆ ದಾಳಿ, ದಮನವನ್ನು ನಡೆಸುತ್ತಿದ್ದ ಇಸ್ರೇಲ್ಗೆ ಇರಾನ್ ಭಾರೀ ಪೆಟ್ಟು ಕೊಟ್ಟಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇಸ್ರೇಲ್ಅನ್ನು ಎದುರಿಸುವ ಪ್ರಬಲ ಶಕ್ತಿಯಾಗಿ ಜಗತ್ತಿಗೆ ತನ್ನ ಸಾಮರ್ಥ್ಯವನ್ನು ತೋರಿಸಿದೆ.