ಇಸ್ರೇಲ್ ಹಾಗೂ ಇರಾನ್ನ ನಡುವೆ ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ಕದನಕ್ಕೆ ಜೂನ್ 25ರಂದು ವಿರಾಮ ಘೋಷಣೆ ಮಾಡಲಾಗಿದೆ. ಈ ನಡುವೆ ರಷ್ಯಾದ ವಿಮಾನ ನಿಲ್ದಾಣವೊಂದರಲ್ಲಿ ಯಹೂದಿ ವ್ಯಕ್ತಿಯೋರ್ವ ಇರಾನ್ನ ಪುಟ್ಟ ಬಾಲಕನನ್ನು ಮೇಲಕ್ಕೆತ್ತಿ ನೆಲಕ್ಕೆ ಬಡಿದಿರುವ ಆಘಾತಕಾರಿ ಘಟನೆ ನಡೆದಿದೆ.
ರಷ್ಯಾದ ಮಾಸ್ಕೋದ ಶೆರೆಮೆಟಿಯೆವೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೆಲಕ್ಕೆ ಬಡಿದ ನಂತರ ಇರಾನಿನ ಎರಡು ವರ್ಷದ ಪುಟ್ಟ ಬಾಲಕ ಕೋಮಾದ ಸ್ಥಿತಿಗೆ ತಲುಪಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
“ಮಾಸ್ಕೋ ವಿಮಾನ ನಿಲ್ದಾಣದ ಆಗಮನದ ವಿಭಾಗದಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಯನ್ನು ಬೆಲಾರೂಸ್ನ 31 ವರ್ಷದ ವ್ಲಾಡಿಮಿರ್ ವಿಟ್ಕೋವ್ ಎಂದು ಗುರುತಿಸಲಾಗಿದೆ. ಪರಾರಿಯಾಗಲು ಯತ್ನಿಸಿದ ವೇಳೆ ಆತನನ್ನು ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ. ಸಂತ್ರಸ್ತ ಎರಡು ವರ್ಷದ ಬಾಲಕನ ತಲೆಬುರುಡೆ ಮುರಿತಕ್ಕೊಳಗಾಗಿದ್ದು ಮತ್ತು ಬೆನ್ನುಮೂಳೆಗೂ ಗಂಭೀರ ಗಾಯಗಳಾಗಿವೆ. ಬಾಲಕ ಕೋಮಾದಲ್ಲಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇರಾನ್ನ ಮೇಲೆ ಇಸ್ರೇಲ್ ಬಾಂಬ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಗು ಮತ್ತು ಆತನ ತಾಯಿ ನಂತರ ರಷ್ಯಾಕ್ಕೆ ಬಂದಿದ್ದರು ಎಂದು ವರದಿಗಳು ತಿಳಿಸಿವೆ.
ಗರ್ಭಿಣಿಯಾಗಿದ್ದ ತಾಯಿ, ತನ್ನ ಎರಡು ವರ್ಷದ ಪುಟ್ಟ ಮಗನೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆ ಬಳಿಕ ತಮ್ಮ ಬ್ಯಾಗ್ಗಳನ್ನು ಇರಿಸಿಕೊಳ್ಳಲೆಂದು ಟ್ರೋಲಿಯನ್ನು ತರಲೆಂದು ಹೋಗಿದ್ದರು. ಈ ವೇಳೆ ತನ್ನ ಟ್ರಾಲಿ ಬ್ಯಾಗ್ ಅನ್ನು ಕೈಯ್ಯಲ್ಲಿ ಹಿಡಿದುಕೊಂಡು ಬಾಲಕ ತನ್ನ ಕೆಲಸದಲ್ಲಿ ನಿರತನಾಗಿದ್ದ. ಇದೇ ವೇಳೆ ಹಿಂಬದಿಯಲ್ಲಿ ನಿಂತಿದ್ದ ದುಷ್ಕರ್ಮಿ ವ್ಲಾಡಿಮಿರ್ ವಿಟ್ಕೋವ್, ಬಾಲಕನನ್ನು ಮೇಲಕ್ಕೆತ್ತಿ ಬಡಿದಿದ್ದಾನೆ. ಆ ಬಳಿಕ ತನ್ನ ನೆತ್ತಿಯ ಮೇಲಿದ್ದ ಕಪ್ಪು ಕನ್ನಡಕವನ್ನು ಹಾಕಿ ಏನೂ ಮಾಡಿಲ್ಲ ಎಂಬಂತೆ ನೆಲದಲ್ಲಿ ಕೂತು ವಿಚಿತ್ರವಾಗಿ ವರ್ತಿಸಿದ್ದಲ್ಲದೇ, ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಇನ್ನೊಬ್ಬ ಪ್ರಯಾಣಿಕನೋರ್ವ ಕೂಡಲೇ ಮಗುವನ್ನೆತ್ತಿಕೊಂಡು ಓಡುತ್ತಿರುವ ಆಘಾತಕಾರಿ ಸಿಸಿಟಿವಿ ದೃಶ್ಯವು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
ದುಷ್ಕರ್ಮಿ ವ್ಲಾಡಿಮಿರ್ ವಿಟ್ಕೋವ್ ವಿರುದ್ಧ ಕೊಲೆ ಪ್ರಯತ್ನ ಕೇಸು ದಾಖಲಿಸಿಕೊಳ್ಳಲಾಗಿದೆ. ಮಗುವಿನ ವಿರುದ್ಧದ ಈ ಕೃತ್ಯಕ್ಕೆ ಜನಾಂಗೀಯ ದ್ವೇಷ ಅಥವಾ ಇತರ ಯಾವುದಾದರೂ ಕಾರಣ ಪ್ರೇರಣೆ ಇದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
