ಅಮೆರಿಕಕ್ಕೆ ಇರಾನ್ ತಪರಾಕಿ ಬಾರಿಸಿದೆ. ಅಮೆರಿಕವು ಮಧ್ಯಪ್ರವೇಶಿಸದಿದ್ದರೆ, ಯಹೂದಿಗಳ ಆಡಳಿತವಿರುವ ಇಸ್ರೇಲ್ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಭಾವಿಸಿದ್ದರಿಂದ ಮಾತ್ರ ಅಮೆರಿಕವು ಯುದ್ಧದಲ್ಲಿ ಮಧ್ಯಪ್ರವೇಶಿಸಿದೆ ಎಂದು ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಆಲಿ ಖಮೇನಿ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಇರಾನ್‌ನ ಶರಣಾಗತಿಯಿಂದ ಮಾತ್ರ ಅಮೆರಿಕ ತೃಪ್ತವಾಗುತ್ತದೆ ಎಂಬ ಸತ್ಯವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಬಹಿರಂಗಪಡಿಸಿದ್ದಾರೆ. ಆದರೆ ಇರಾನ್ ಎಂದಿಗೂ ಶರಣಾಗುವುದಿಲ್ಲ. ನಮ್ಮ ರಾಷ್ಟ್ರವು ಶಕ್ತಿಶಾಲಿಯಾಗಿದೆ ಎಂದು ಖಮೇನಿ ಹೇಳಿದ್ದಾರೆ.
ಇರಾನ್‌ನ ಟೆಲಿವಿಷನ್ ಗೆ ನೀಡಿದ ರೆಕಾರ್ಡೆಡ್ ಸಂದೇಶದಲ್ಲಿ ಖಮೇನಿ ಅವರು ಈ ಹೇಳಿಕೆ ನೀಡಿದ್ದಾರೆ. ಟ್ರಂಪ್, ತಮ್ಮ ಭಾಷಣವೊಂದರಲ್ಲಿ ಇರಾನ್ ಶರಣಾಗಬೇಕು ಎಂದು ಹೇಳಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಧಿಕಾರಸ್ಥರು ಅನ್ನ ತಿನ್ನುವವರೇ ಆದರೆ, ಭೂ ಸ್ವಾಧೀನ ಕೈಬಿಡಲಿ
ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡುವುದು ಒಂದು ದೊಡ್ಡ ಸಾಧನೆ. ಭವಿಷ್ಯದಲ್ಲಿ ನಮ್ಮ ಮೇಲೆ ಬರುವ ಬೆದರಿಕೆಗಳಿಗೆ ಅದೇ ರೀತಿಯ ಪ್ರತ್ಯುತ್ತರ ನೀಡಲಾಗುವುದು. ಭವಿಷ್ಯದಲ್ಲಿ ಇರಾನ್‌ನ ವಿರುದ್ಧದ ಯಾವುದೇ ಆಕ್ರಮಣವು ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಖಮೇನಿ ಎಚ್ಚರಿಕೆ ನೀಡಿದ್ದಾರೆ.
ಇರಾನ್‌ನ ಶತ್ರುಗಳು ದಾಳಿ ಮಾಡಲು ಕ್ಷಿಪಣಿಗಳು ಅಥವಾ ನಮ್ಮ ಪರಮಾಣು ಕಾರ್ಯಕ್ರಮದಂತಹ ನೆಪಗಳನ್ನು ಬಳಸುತ್ತಾರೆ. ಆದರೆ ಅವರು ವಾಸ್ತವವಾಗಿ ನಮ್ಮ ಶರಣಾಗತಿ ಬಯಸುತ್ತಿದ್ದಾರೆ. ಯಹೂದಿಗಳ ಆಡಳಿತ ಬಹುತೇಕ ಕುಸಿದು ಬಿದ್ದಿದೆ, ಇಸ್ರೇಲ್ ಪುಡಿ ಪುಡಿಯಾಗಿದೆ ಎಂದು ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಹೇಳಿದ್ದಾರೆ.
ಇಸ್ಲಾಮಿಕ್ ಗಣರಾಜ್ಯ ಇರಾನ್‌ನ ದಾಳಿಯಿಂದ ಯಹೂದಿಗಳ ಆಡಳಿತವಿರುವ ಇಸ್ರೇಲ್ ಬಹುತೇಕ ಪುಡಿಪುಡಿಯಾಯಿತು ಎಂದು ಅವರು ತಿಳಿಸಿದ್ದಾರೆ.