ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಉಲ್ಬಣಗೊಳ್ಳುತ್ತಿದೆ. ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿರುವ ಜನರು ನಗರವನ್ನು ತೊರೆಯುವಂತೆ ಹೇಳಿರುವ ಇಸ್ರೇಲ್ ಮತ್ತು ಅಮೆರಿಕ, ದಾಳಿಯ ಎಚ್ಚರಿಕೆ ನೀಡಿವೆ. ಈ ನಡುವೆ, ಇರಾನ್ ತನ್ನ ಪ್ರಜೆಗಳಿಗೆ ತಮ್ಮ ಮೊಬೈಲ್‌ಗಳಿಂದ ವಾಟ್ಸ್‌ಆ್ಯಪ್‌ಅನ್ನು ತೆಗೆದು ಹಾಕುವಂತೆ (ಡಿಲೀಟ್) ಕರೆಕೊಟ್ಟಿದೆ ಎಂದು ವರದಿಯಾಗಿದೆ.
ಇರಾನ್‌ನ ಸರ್ಕಾರಿ ದೂರದರ್ಶನದ ಮೂಲಕ ಜನರಿಗೆ ಕರೆ ಕೊಟ್ಟಿರುವ ಇರಾನ್ ಸರ್ಕಾರವು, “ವಾಟ್ಸ್‌ಆ್ಯಪ್ ಕಂಪನಿಯು ಇರಾನ್ ಜನರ ಹಲವು ಮಾಹಿತಿಗಳನ್ನು ಇಸ್ರೇಲ್‌ಗೆ ಕಳುಹಿಸಲು ಹಲವು ದತ್ತಾಂಶಗಳನ್ನು ಸಂಗ್ರಹಿಸಿದೆ ಎಂಬುದಕ್ಕೆ ಪುರಾವೆಗಳಿವೆ” ಎಂದು ಆರೋಪಿಸಿದೆ.
ವಾಟ್ಸ್‌ಆ್ಯಪ್ ಅಪ್ಲಿಕೇಷನ್‌ಅನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮಾತೃ ಕಂಪನಿ, ಅಮೆರಿಕ ಮೂಲದ ಮೆಟಾ ನಿಯಂತ್ರಿಸುತ್ತಿದೆ.
ಆದಾಗ್ಯೂ, ಇನ್‌ಸ್ಟಾಗ್ರಾಮ್, ಟೆಲಿಗ್ರಾಮ್ ಹಾಗೂ ವಾಟ್ಸ್‌ಆ್ಯಪ್ ಇರಾನ್‌ನಲ್ಲಿನ ಅತ್ಯಂತ ಜನಪ್ರಿಯ ‘ಚಾಟಿಂಗ್’ ಅಪ್ಲಿಕೇಶನ್‌ಗಳಾಗಿವೆ.
ಗಮನಾರ್ಹವಾಗಿ, ಇರಾನ್ ಈಗಾಗಲೇ ಹಲವಾರು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಬಂಧಿಸಿದೆ. 2022ರಲ್ಲಿ ಇರಾನ್ ಪೊಲೀಸರು ಬಂಧಿಸಿದ್ದ ಮಹಿಳೆಯು ಜೈಲಿನಲ್ಲಿ ಸಾವನ್ನಪ್ಪಿದ್ದರು. ಅವರ ಸಾವಿನ ಕುರಿತು ಸರ್ಕರದ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಿದ್ದವು. ಆಗ, ವಾಟ್ಸ್‌ಆ್ಯಪ್ ಮತ್ತು ಗೂಗಲ್ ಪ್ಲೇಅನ್ನು ಇರಾನ್ ಸರ್ಕಾರ ನಿಷೇಧಿಸಿತ್ತು. ಕಳೆದ ವರ್ಷ ನಿರ್ಬಂಧವನ್ನು ತೆಗೆದುಹಾಗಕಿತ್ತು.
ಇರಾನ್ ತನ್ನ ನಾಗರಿಕರಿಗೆ ತಮ್ಮ ಫೋನ್‌ಗಳಿಂದ ವಾಟ್ಸ್‌ಆ್ಯಪ್‌ಅನ್ನು ತೆಗೆದುಹಾಕುವಂತೆ ಕರೆ ಕೊಟ್ಟಿರುವ ಬಗ್ಗೆ ವಾಟ್ಸ್‌ಆ್ಯಪ್ ಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ. “ಜನರಿಗೆ ನಮ್ಮ ಸೇವೆಗಳು ಹೆಚ್ಚು ಅಗತ್ಯವಿರುವ ಸಮಯದಲ್ಲಿ ಅವುಗಳನ್ನು ನಿರ್ಬಂಧಿಸಲು ಈ ಸುಳ್ಳು ವರದಿಗಳು ಒಂದು ನೆಪವಾಗಿವೆ. ವಾಟ್ಸ್‌ಆ್ಯಪ್ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ಅನ್ನು ಬಳಸುತ್ತದೆ. ಅಂದರೆ, ಬಳಕೆದಾರರ ನಡುವೆ ಇರುವ ಸೇವಾ ಪೂರೈಕೆದಾರರು ಯಾವುದೇ ಸಂದೇಶವನ್ನು ಓದಲು ಸಾಧ್ಯವಿಲ್ಲ” ಎಂದು ಸಮರ್ಥಿಸಿಕೊಂಡಿದೆ.
“ನಾವು ನಿಮ್ಮ ನಿಖರವಾದ ಸ್ಥಳವನ್ನು ಟ್ರ್ಯಾಕ್ ಮಾಡುವುದಿಲ್ಲ, ಯಾರು ಯಾರಿಗೆ ಸಂದೇಶ ಕಳುಹಿಸುತ್ತಿದ್ದಾರೆ ಎಂಬುದರ ದಾಖಲೆಗಳನ್ನು ನಾವು ಇಟ್ಟುಕೊಳ್ಳುವುದಿಲ್ಲ. ಜನರು ಪರಸ್ಪರಿಗೆ ಕಳುಹಿಸುವ ವೈಯಕ್ತಿಕ ಸಂದೇಶಗಳನ್ನು ನಾವು ಟ್ರ್ಯಾಕ್ ಮಾಡುವುದಿಲ್ಲ. ನಾವು ಯಾವುದೇ ಸರ್ಕಾರಕ್ಕೆ ಬೃಹತ್ ಮಾಹಿತಿಯನ್ನು ಒದಗಿಸುವುದಿಲ್ಲ” ಎಂದು ಹೇಳಿಕೊಂಡಿದೆ.
ಸದ್ಯ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು 6ನೇ ದಿನವನ್ನು ಪೂರೈಸಿದೆ. ಕಳೆದ ವಾರ, ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿತ್ತು. ದಾಳಿಗೆ ಪ್ರತಿದಾಳಿಯಾಗಿ ಇಸ್ರೇಲ್ ಮೇಲೆ ಇರಾನ್ ಕೂಡ ಬೃಹತ್ ಪ್ರಮಾಣದಲ್ಲಿ ದಾಳಿ ಮಾಡಿತು. ಮಾತ್ರವಲ್ಲದೆ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರು ‘ಯುದ್ಧ ಪ್ರಾರಂಭವಾಗುತ್ತದೆ’ ಎಂದು ಘೋಷಿಸಿದರು.
ಈ ಲೇಖನ ಓದಿದ್ದೀರಾ?: ಇರಾನ್-ಇಸ್ರೇಲ್ ಸಂಘರ್ಷ ಶುರುವಾಗಿದ್ದು ಎಲ್ಲಿಂದ? ಇತಿಹಾಸದ ಹಿನ್ನೋಟ!
“ಇಸ್ರೇಲ್ ಭಯೋತ್ಪಾದಕ ಜಿಯೋನಿಸ್ಟ್ ಆಡಳಿತವಾಗಿದೆ. ಅದರ ದೌರ್ಜನ್ಯ, ಆಕ್ರಮಣದ ವಿರುದ್ಧ ಯುದ್ಧ ಆರಂಭವಾಗಿದೆ. ನಾವು ಭಯೋತ್ಪಾದಕ ಜಿಯೋನಿಸ್ಟ್ ಆಡಳಿತಕ್ಕೆ ಬಲವಾದ ಪ್ರತಿಕ್ರಿಯೆ ನೀಡಬೇಕು. ನಾವು ಜಿಯೋನಿಸ್ಟ್‌ಗಳಿಗೆ ಯಾವುದೇ ಕರುಣೆ ತೋರಿಸುವುದಿಲ್ಲ” ಎಂದು ಖಮೇನಿ ಹೇಳಿದ್ದರು.
ಕಳೆದ ಆರು ದಿನಗಳಿಂದ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ನಡೆಯುತ್ತಿದೆ. ದಾಳಿಗಳು ನಡೆಯುತ್ತಿವೆ. ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ‘ಇರಾನ್ ಬೇಷರತ್ತಾದ ಶರಣಾಗತಿ’ಗೆ ಮುಂದಾಗಬೇಕು ಎಂದು ಎಚ್ಚರಿಕೆ ನೀಡಿದರು. ಮಾತ್ರವಲ್ಲದೆ, “ಇರಾನ್‌ನ ‘ಸುಪ್ರೀಂ ಲೀಡರ್’ ಎಂದು ಕರೆಯಲ್ಪಡುವವರು ಎಲ್ಲಿ ಅಡಗಿದ್ದಾರೆಂದು ನಮಗೆ ನಿಖರವಾಗಿ ತಿಳಿದಿದೆ. ಅವರು ನಮಗೆ ಸುಲಭವಾದ ಗುರಿ. ಆದರೆ, ನಾವು ಅವರನ್ನು ಕೊಲ್ಲುವುದಿಲ್ಲ. ಈಗಲಾದವರು ಅವರು ಬೇಷರತ್ತಾದ ಶರಣಾಗತಿಗೆ ಮುಂದಾಗಬೇಕು” ಎಂದು ಟ್ರಂಪ್ ಹೇಳಿದರು.
ಟ್ರಂಪ್ ಅವರ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಖಮೇನಿ, “ನಮಗೆ ಯಾರ ಸಲಹೆಯ ಅಗತ್ಯವಿಲ್ಲ. ನಾವು ಹೋರಾಡುತ್ತೇವೆ” ಎಂದಿದ್ದಾರೆ.