ಇರಾನ್ ಮೇಲೆ ದಾಳಿ ನಡೆಸಿ, ಯುದ್ಧದ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡಿರುವ, ಇರಾನ್‌ನಿಂದ ಭಾರೀ ಪ್ರತಿದಾಳಿಗೆ ತುತ್ತಾಗಿದೆ ಇಸ್ರೇಲ್. ಇದೀಗ, ಇಸ್ರೇಲ್ ಸರ್ಕಾರವು ತಮ್ಮದೇ ದೇಶದ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದೆ. ನಾನಾ ರೀತಿಯ ವರದಿಗಳನ್ನು ಮಾಡದಂತೆ ಮಾರ್ಗಸೂಚಿಗಳನ್ನು ವಿಧಿಸಿದೆ. ಹೊಸ ನಿರ್ದೇಶನಗಳನ್ನು ಜಾರಿಗೆ ತಂದಿದೆ.
ಇಸ್ರೇಲ್ ಸೇನೆಯ ‘ಸೆನ್ಸರ್ ಬ್ರಿಗೇಡಿಯರ್ ಜನರಲ್’ ಕೋಬಿ ಮಂಡೆಲ್‌ಬ್ಲಿಟ್ ಅವರು ಹೊಸ ಸುತ್ತೋಲೆಯನ್ನು ಪ್ರಕಟಿಸಿದ್ದಾರೆ. ”ಇರಾನ್ ಮಾಡುತ್ತಿರುವ ದಾಳಿಗಳ ಪರಿಣಾಮದ ಬಗ್ಗೆ ಇಸ್ರೇಲ್‌ನ ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರು ಏನನ್ನೂ ವರದಿ ಮಾಡಬಾರದು, ಪ್ರಕಟಿಸಬಾರದು” ಎಂದು ನಿರ್ಬಂಧ ಹೇರಲಾಗಿದೆ.
ಇಸ್ರೇಲ್‌ನಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧಗಳನ್ನು ಹೇರುವುದು ಇದೇನು ಹೊಸತಲ್ಲ. ತನ್ನ ದೌರ್ಬಲ್ಯಗಳನ್ನು ಮರೆಮಾಚಲು ಇಸ್ರೇಲ್ ಆಗಾಗ ತಮ್ಮದೇ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ, ಪತ್ರಕರ್ತರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಲೇ ಇರುತ್ತದೆ.
ಅಂದಹಾಗೆ, ಇಸ್ರೇಲ್‌ನಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳು ಇಸ್ರೇಲ್ ಉಗಮಕ್ಕೂ ಹಿಂದಿನಿಂದಲೇ ಇವೆ. ಪ್ಯಾಲೆಸ್ತೀನ್‌ಅನ್ನು ಹೊಡೆದು ಇಸ್ರೇಲ್ ಸ್ಥಾಪಿಸುವ ಸಮಯದಲ್ಲಿ 1945ರಲ್ಲಿಯೇ ಬ್ರಿಟಿಷರು ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ನೀತಿಗಳನ್ನು ರೂಪಿಸಿದ್ದರು. ಇಸ್ರೇಲ್ ರಚನೆಯಾದ ಬಳಿಕ, ಅದೇ ನಿರ್ಬಂಧದ ನೀತಿಗಳನ್ನು ಇಸ್ರೇಲ್ ತನ್ನ ಕಾನೂನಿನಲ್ಲಿ ಸೇರಿಸಿಕೊಂಡಿತು.
ನಿರ್ಬಂಧಗಳು ಕೇವಲ ವರದಿಗಳನ್ನು ಪ್ರಕಟಿಸುವಿಕೆಗಷ್ಟೇ ಅಲ್ಲ. ಅದನ್ನೂ ಮೀರಿ, ನಾನಾ ರೀತಿಯ ಕ್ರೌರ್ಯ, ನಿಯಂತ್ರಣಗಳು ಹಾಗೂ ಹತ್ಯೆಗಳವರೆಗೂ ವ್ಯಾಪಿಸಿವೆ ಎಂಬ ಆರೋಪಗಳಿವೆ. ಇಂಟರ್‌ನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ಸ್(IFJ)ನ ಪ್ರಕಾರ, 2023ರ ಅಕ್ಟೋಬರ್ 7ರಂದು ಗಾಜಾ ಮೇಲೆ ಇಸ್ರೇಲ್ ದಾಳಿ ಆರಂಭಿಸಿದ ಬಳಿಕ, ಈವರೆಗೆ ಕನಿಷ್ಠ 164 ಪತ್ರಕರ್ತರನ್ನು ಕೊಂದಿದೆ. ಗಾಜಾ, ಲೆಬನಾನ್, ಆಕ್ರಮಿತ ವೆಸ್ಟ್ ಬ್ಯಾಂಕ್ ಹಾಗೂ ಪ್ರಸ್ತುತ ನಡೆಯುತ್ತಿರುವ ಇರಾನ್ ಜೊತೆಗಿನ ಸಂಘರ್ಷದ ಸಮಯದಲ್ಲಿ ವಸ್ತುನಿಷ್ಠವಾಗಿ ವರದಿ ಮಾಡಿದ ಕಾರಣಕ್ಕಾಗಿ ಪತ್ರಕರ್ತರು ಜೀವ ಕಳೆದುಕೊಂಡಿದ್ದಾರೆ.
ಪತ್ರಕರ್ತರು/ಮಾಧ್ಯಮಗಳ ಮೇಲಿನ ಹೊಸ ನಿರ್ಬಂಧಗಳೇನು?
ಹೊಸ ನಿಯಮಗಳು ಇರಾನ್ ಜೊತೆಗಿನ ಸಂಘರ್ಷಕ್ಕೆ ಸಂಬಂಧಿಸಿವೆ. ಇಸ್ರೇಲ್ ಮೇಲೆ ಇರಾನ್ ನಡೆಸುತ್ತಿರುವ ಪ್ರತಿದಾಳಿಯಿಂದ ಇಸ್ರೇಲ್‌ನಲ್ಲಿ ಸಂಭವಿಸುತ್ತಿರುವ ಪರಿಣಾಮಗಳನ್ನು ಪತ್ರಕರ್ತರು ಮತ್ತು ಸಂಪಾದಕರು ವರದಿ ಮಾಡದಂತೆ ವಿಶೇಷ ನಿರ್ಬಂಧಗಳನ್ನು ವಿಧಿಸಲಾಗಿದೆ.
ಬುಧವಾರ ಇಸ್ರೇಲ್ ಸೇನಾ ಸೆನ್ಸರ್ ಕಚೇರಿಯು, ‘ರೈಸಿಂಗ್ ಲಯನ್ – ಐಡಿಎಫ್ ಸೆನ್ಸರ್ ಗೈಡ್‌ಲೈನ್ಸ್ ಫಾರ್ ಮೀಡಿಯಾ ಕವರೇಜ್ ಆಫ್ ಅಟ್ಯಾಕ್ ಆನ್ ದಿ ಇಸ್ರೇಲಿ ಹಮ್ ಫ್ರಂಟ್’ (ಇಸ್ರೇಲಿ ಭೂಮಿಯ ಮೇಲಿನ ದಾಳಿಗಳ ಕುರಿತು ಮಾಧ್ಯಮ ವರದಿಗಾಗಿ ಐಡಿಎಫ್ ಸೆನ್ಸರ್ ಮಾರ್ಗಸೂಚಿಗಳು) ಎಂಬ ಶೀರ್ಷಿಕೆಯಡಿ ಪ್ರಕಟಣೆಯನ್ನು ಹೊರಡಿಸಿದೆ. ಇಸ್ರೇಲ್ ಮೇಲಿನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಬಗ್ಗೆ ವರದಿ ಮಾಡುವಾಗ ‘ಕಟ್ಟುನಿಟ್ಟಿನ ಕ್ರಮಗಳನ್ನು’ ಅನುಸರಿಸುವಂತೆ ಮಾಧ್ಯಮಗಳ ಸಂಪಾದಕರಿಗೆ ಸೂಚನೆ ನೀಡಿದೆ.
ಈ ಲೇಖನ ಓದಿದ್ದೀರಾ?: ಅಮೆರಿಕದ ಟ್ರಂಪ್ ಎಂಬ ಹುಚ್ಚನೂ, ಇರಾನಿನ ಇಸ್ಲಾಮಿಕ್ ಖಮೇನಿಯೂ: ಏನಾಗಲಿದೆ ಮಧ್ಯ ಪ್ರಾಚ್ಯ?
ದಾಳಿ ನಡೆಸುವ ಸ್ಥಳಗಳು, ವಾಯು ರಕ್ಷಣಾ ಕಾರ್ಯಾಚರಣೆಗಳು ಹಾಗೂ ಶತ್ರು ರಾಷ್ಟ್ರಕ್ಕೆ ಸಹಾಯ ಮಾಡಬಹುದಾದ ಅಥವಾ ರಾಷ್ಟ್ರದ ಭದ್ರತೆಗೆ ಗಂಭೀರ ಭೀತಿ ಉಂಟುಮಾಡಬಹುದಾದ ಯಾವುದೇ ವರದಿಗಳನ್ನು ಪ್ರಕಟಿಸುವಂತಿಲ್ಲ. ಒಂದು ವೇಳೆ, ಪ್ರಕಟಿಸಿದರೆ, ಗಂಭೀರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸೆನ್ಸರ್ ಕಚೇರಿ ಎಚ್ಚರಿಕೆ ನೀಡಿದೆ.
- ದಾಳಿ ನಡೆದ ಸ್ಥಳಗಳು, ಅದರಲ್ಲೂ ವಿಶೇಷವಾಗಿ ಸೈನಿಕ ನೆಲೆಗಳ ಸಮೀಪದಲ್ಲಿ ಯಾವುದೇ ಚಿತ್ರೀಕರಣ, ಫೋಟೋ ತೆಗೆಯುವುದು ಅಥವಾ ಪ್ರಸಾರ ಮಾಡುವಂತಿಲ್ಲ.
- ದಾಳಿಯ ಪ್ರದೇಶಗಳನ್ನು ತೋರಿಸಲು ಡ್ರೋನ್‌ಗಳು ಅಥವಾ ವೈಡ್-ಆಂಗಲ್ ಕ್ಯಾಮೆರಾಗಳನ್ನು ಬಳಸುವಂತಿಲ್ಲ.
- ಭದ್ರತಾ ಸ್ಥಾಪನೆಗಳ ಸಮೀಪದ ದಾಳಿಗೊಳಗಾದ ಪ್ರದೇಶಗಳ ನಿಖರ ಮಾಹಿತಿಯನ್ನು ವಿವರಿಸುವಂತಿಲ್ಲ.
- ಇಸ್ರೇಲಿ ಕ್ಷಿಪಣಿಗಳ ಉಡಾವಣೆ ಅಥವಾ ಇರಾನ್‌ನ ಕ್ಷಿಪಣಿಗಳನ್ನು ತಡೆಯುವ ಚಿತ್ರಗಳನ್ನು ಪ್ರಸಾರ ಮಾಡುವಂತಿಲ್ಲ.
- ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ವೀಡಿಯೊಗಳನ್ನು ಪರಿಶೀಲನೆ ಇಲ್ಲದೆ ಹಂಚಿಕೊಳ್ಳುವಂತಿಲ್ಲ.
- ಕೆಲವು ವರದಿಗಳು ಶತ್ರು-ಸೃಷ್ಟಿತ ಸುಳ್ಳು ಸುದ್ದಿಗಳಾಗಿರುತ್ತವೆ. ಅವುಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು.
ಹೊಸ ನಿರ್ಬಂಧಗಳು ತಕ್ಷಣದಿಂದ ಜಾರಿಗೆ ಬಂದಿವೆ. ಗಮನಾರ್ಹ ಸಂಗತಿ ಎಂದರೆ, ಈ ನಿರ್ಬಂಧಗಳು ಜಾರಿಗೆ ಬರುವುದಕ್ಕೂ ಮುನ್ನವೇ, ಮಂಗಳವಾರ ಬೆಳಗಿನ ಜಾವದಲ್ಲಿ ಹೈಫಾ ಬಂದರಿನಲ್ಲಿ ಸಂಭಾವ್ಯ ದಾಳಿಗಳ ಚಿತ್ರಗಳನ್ನು ಸೆರೆಹಿಡಿಯಲು ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದ ಛಾಯಾಗ್ರಾಹಕರನ್ನು ಇಸ್ರೇಲಿ ಸೇನೆಯು ಬಂಧಿಸಿದೆ.
ಈ ಹಿಂದೆ ಯಾವೆಲ್ಲ ನಿರ್ಬಂಧಗಳು ಜಾರಿಯಲ್ಲಿದ್ದವು?
ಹೊಸ ನಿರ್ಬಂಧಗಳು ಜಾರಿಗೆ ಬರುವುದಕ್ಕೂ ಮೊದಲು ಕೂಡ ಮಾಧ್ಯಮಗಳ ಮೇಲೆ ಹಲವಾರು ನಿರ್ಬಂಧಗಳು ಚಾಲ್ತಿಯಲ್ಲಿದ್ದವು. ಇಸ್ರೇಲ್‌ನ ಭದ್ರತೆಗೆ ಸಂಬಂಧಿಸಿದ ಯಾವುದೇ ವರದಿಯನ್ನು ಪ್ರಕಟಿಸಬೇಕೆಂದರೆ, ಬರೆಯಲಾದ ವರದಿ ಮತ್ತು ಬಳಸಲಾಗುವ ಫೋಟೋ-ವಿಡಿಯೋಗಳನ್ನು ಮೊದಲು ಸೇನಾ ಸೆನ್ಸರ್‌ಗೆ ಕಳಿಸಬೇಕಿತ್ತು. ಅದು ಅನುಮೋದನೆ ನೀಡಿದ ಬಳಿಕವೇ ಪ್ರಟಿಸಬೇಕಿತ್ತು.
ಈ ಲೇಖನ ಓದಿದ್ದೀರಾ?: ‘ಮಾಬ್ ರೂಲ್’ ವಿರುದ್ಧದ ಸುಪ್ರೀಂ ಆದೇಶ ಹಿಂದುತ್ವಕ್ಕೂ ವಿಸ್ತರಿಸುವ ಅಗತ್ಯವಿದೆಯಲ್ಲವೇ?
ಆಗ, ವರದಿಗಳ ಪ್ರಕಟಣೆಗಳಿಂದ ರಾಷ್ಟ್ರದ ಭದ್ರತೆಗೆ ನಿಜಕ್ಕೂ ಹಾನಿಯಾಗುವ ಸಾಧ್ಯತೆಗಳಿದ್ದರೆ, ಅಂತಹ ವರದಿಗಳನ್ನು ಸೇನಾ ಸೆನ್ಸರ್ ತಡೆಯುತ್ತಿತ್ತು. ಆದರೆ, ದೇಶದ ಸೇನೆ ಅಥವಾ ರಾಜಕಾರಣಿಗಳ ಖ್ಯಾತಿಗೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಯಾವುದೇ ವರದಿಗಳನ್ನು ನಿರ್ಬಂಧಿಸುತ್ತಿರಲಿಲ್ಲ.
2023ರಲ್ಲಿಯೂ ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ಮತ್ತಷ್ಟು ಹೆಚ್ಚಿಸಲಾಗಿತ್ತು. ‘ಇಸ್ರೇಲ್ ಭಯೋತ್ಪಾದನಾ ವಿರೋಧಿ ಕಾನೂನು’ಗೆ ತಿದ್ದುಪಡಿ ತಂದು, ”ವ್ಯವಸ್ಥಿತವಾಗಿ ಮತ್ತು ನಿರಂತರವಾಗಿ ಭಯೋತ್ಪಾದಕ ಪ್ರಕಟಣೆಗಳನ್ನು ನೀಡುವುದರ ಅಥವಾ ಭಯೋತ್ಪಾದಕ ಕೃತ್ಯಗಳಿಗೆ ನೇರವಾಗಿ ಕರೆಕೊಡುವವರ ಸುದ್ದಿಗಳನ್ನು ಪ್ರಸಾರ ಮಾಡುವಂತಿಲ್ಲ. ಅಂತಹ ವರದಿಗಳನ್ನು ಪ್ರಕಟಿಸಿದರೆ, ಕಠಿಣವಾಗಿ ಶಿಕ್ಷಿಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿತ್ತು.
ಸೇನಾ ಸೆನ್ಸರ್ ಎಷ್ಟು ಬಾರಿ ಕ್ರಮ ಕೈಗೊಳ್ಳುತ್ತದೆ?
ಮೇ ತಿಂಗಳಲ್ಲಿ, ಇಸ್ರೇಲಿ-ಪ್ಯಾಲೆಸ್ತೀನಿಯನ್ ಮ್ಯಾಗಜೀನ್ ‘+972’ ವರದಿ ಹೇಳುವಂತೆ: ಗಾಜಾ ಮೇಲೆ ಇಸ್ರೇಲ್ ದಾಳಿ ಆರಂಭಿಸಿದಾಗಿನಿಂದ ಮಾಧ್ಯಮಗಳ ಮೇಲಿನ ನಿರ್ಬಂಧ ಮತ್ತು ಪರಿಶೀಲನೆಯು ಗಣನೀಯವಾಗಿ ಹೆಚ್ಚಾಗಿದೆ. 2024ರಲ್ಲಿ ಇಸ್ರೇಲ್ ಸೇನಾ ಸೆನ್ಸರ್ ಬರೋಬ್ಬರಿ 1,635 ಲೇಖನಗಳನ್ನು ಸಂಪೂರ್ಣವಾಗಿ ಪ್ರಕಟಿಸದಂತೆ ತಡೆದಿದೆ. ಇನ್ನೂ 6,265 ಲೇಖನಗಳಲ್ಲಿ ಹಲವಾರು ಅಂಶಗಳನ್ನು ತೆಗೆದುಹಾಕಿ ಪ್ರಕಟಿಸುವಂತೆ ಸೂಚಿಸಿದೆ.
ಅಂದರೆ, ಕಳೆದ ವರ್ಷ (2024) ಪ್ರತಿದಿನ ಸರಾಸರಿ 21 ಸುದ್ದಿ/ಲೇಖನಗಳ ಮೇಲೆ ಸೇನಾ ಸೆನ್ಸರ್ ಹಸ್ತಕ್ಷೇಪ ಮಾಡಿದೆ.
ರಿಪೋರ್ಟರ್ಸ್ ಸಾನ್ಸ್ ಫ್ರಾಂಟಿಯರ್ಸ್(RSF)ನ ‘ವರ್ಲ್ಡ್ ಪ್ರೆಸ್ ಫ್ರೀಡಮ್ ಇಂಡೆಕ್ಸ್’ ಪ್ರಕಾರ, ಮಾಧ್ಯಮಗಳ ಸ್ವಾತಂತ್ರ್ಯದ ವಿಚಾರದಲ್ಲಿ ಒಟ್ಟು 180 ರಾಷ್ಟ್ರಗಳ ಪೈಕಿ ಇಸ್ರೇಲ್ 112ನೇ ಸ್ಥಾನದಲ್ಲಿದೆ. ಹೈಟಿ, ಗಿನಿಯಾ ಬಿಸ್ಸಾವು, ದಕ್ಷಿಣ ಸುಡಾನ್ ಮತ್ತು ಚಾಡ್‌ಗಿಂತ ಕೆಳಗಿದೆ. ಗಮನಾರ್ಹವೆಂದರೆ, ಭಾರತದಲ್ಲಿನ ಪತ್ರಿಕಾ ಸ್ವಾತಂತ್ರ್ಯವು ಇಸ್ರೇಲ್‌ಗಿಂತ ಭೀಕರವಾಗಿದೆ. ಭಾರತವು ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 151ನೇ ಸ್ಥಾನದಲ್ಲಿದೆ.