ಭಾನುವಾರ ಗಾಝಾ ನಗರದಲ್ಲಿ ಅಲ್‌ಜಝೀರಾ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ವರದಿಗಾರರು ಮತ್ತು ಮೂವರು ಕ್ಯಾಮೆರಾಮೆನ್ ಸಾವನ್ನಪ್ಪಿದ್ದಾರೆ ಎಂದು ಅಲ್‌ಜಝೀರಾ ಹೇಳಿದೆ. ವರದಿಗಾರ ಅನಾಸ್ ಅಲ್-ಶರೀಫ್ ಅವರನ್ನು ಹಮಾಸ್ ಜೊತೆ ಸಂಬಂಧ ಹೊಂದಿರುವ ‘ಉಗ್ರ’ ಎಂದು ಹೇಳಿಕೊಂಡು ಇಸ್ರೇಲ್ ಈ ದಾಳಿ ನಡೆಸಿದೆ ಎಂದು ಒಪ್ಪಿಕೊಂಡಿದೆ.
ಗಾಝಾದಲ್ಲಿ 22 ತಿಂಗಳುಗಳಿಂದ ಯುದ್ಧ ನಡೆಯುತ್ತಿದೆ. ಈ ಸಂಘರ್ಷದ ಅವಧಿಯಲ್ಲಿ ಸುಮಾರು 200 ಮಾಧ್ಯಮ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವೀಕ್ಷಣಾ ಸಂಸ್ಥೆಗಳು ತಿಳಿಸಿವೆ.
ಇದನ್ನು ಓದಿದ್ದೀರಾ? ಪ್ಯಾಲೆಸ್ತೀನ್ ಪ್ರದೇಶದಲ್ಲಿ ಅಲ್ ಜಝೀರಾ ಸುದ್ದಿವಾಹಿನಿ ಪ್ರಸಾರಕ್ಕೆ ತಡೆ
“ಗಾಝಾ ನಗರದಲ್ಲಿ ಪತ್ರಕರ್ತರಿಗೆ ವಸತಿ ಕಲ್ಪಿಸಲಾಗಿದ್ದ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಲ್‌ಜಝೀರಾ ಪತ್ರಕರ್ತ ಅನಾಸ್ ಅಲ್-ಶರೀಫ್ ಜೊತೆಗೆ ನಾಲ್ವರು ಸಹೋದ್ಯೋಗಿಗಳು ಸಾವನ್ನಪ್ಪಿದ್ದಾರೆ” ಎಂದು ಕತಾರ್ ಮೂಲದ ಮಾಧ್ಯಮ ತಿಳಿಸಿದೆ.
ಮೃತರನ್ನು ವರದಿಗಾರರಾದ ಅನಾಸ್ ಅಲ್-ಶರೀಫ್, ಮೊಹಮ್ಮದ್ ಕ್ರೀಕೆಹ್ ಮತ್ತು ಕ್ಯಾಮೆರಾ ನಿರ್ವಾಹಕರಾದ ಇಬ್ರಾಹಿಂ ಜಹೀರ್, ಮೊಹಮ್ಮದ್ ನೌಫಲ್ ಮತ್ತು ಮೊವಾಮೆನ್ ಅಲಿವಾ ಎಂದು ಗುರುತಿಸಲಾಗಿದೆ. ಅನಾಸ್ ಅಲ್-ಶರೀಫ್ ಪತ್ರಕರ್ತರಂತೆ ನಡೆಸುತ್ತಿದ್ದ ಆತ ನಿಜವಾಗಿ ಭಯೋತ್ಪಾದಕ ಎಂದು ಇಸ್ರೇಲ್ ಹೇಳಿಕೊಂಡಿದೆ.
