ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸೇನಾಪಡೆಗಳ ಮುಖ್ಯಸ್ಥ ಮೊಹಮ್ಮದ್ ಬಘೇರಿ ಹತ್ಯೆಗೀಡಾಗಿದ್ದಾನೆ ಎಂದು ವರದಿಯಾಗಿದೆ.
ಈ ಕುರಿತು ಇಸ್ರೇಲ್ ಸೇನೆ ತಿಳಿಸಿದ್ದು, ವೈಮಾನಿಕ ದಾಳಿಯಲ್ಲಿ ಇರಾನ್‌ನ ಸೇನಾಪಡೆಗಳ ಮುಖ್ಯಸ್ಥ ಮೊಹಮ್ಮದ್ ಬಘೇರಿ ಹತ್ಯೆಗೀಡಾಗಿದ್ದಾನೆ ಎಂದು ಹೇಳಿದೆ. ಜೊತೆಗೆ ಇರಾನ್ ಪರಮಾಣು ಯೋಜನೆಯ ಇಬ್ಬರು ವಿಜ್ಞಾನಿಗಳು ಹತರಾಗಿರುವ ಸಾಧ್ಯತೆಯಿದೆ ಎಂದೂ ಇಸ್ರೇಲ್ ಸೇನೆ ತಿಳಿಸಿದೆ.
ಹಾಗೆಯೇ ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳ ಕಮಾಂಡರ್ ಹೊಸೇನ್ ಸಲಾಮಿ ಸಹ ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ಶುಕ್ರವಾರ ದೃಢಪಡಿಸಿದೆ.
ಇರಾನ್ ಅಣ್ವಸ್ತ್ರ ಹಾಗೂ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಟೆಹ್ರಾನ್ ಮೇಲಿನ ದಾಳಿಯನ್ನು ಇರಾನ್ ಖಚಿತಪಡಿಸಿದೆ. ಟೆಹ್ರಾನ್‌ನಲ್ಲಿ ಭಾರಿ ಸ್ಫೋಟದ ಸದ್ದುಗಳು ಕೇಳಿಸಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಹೆಚ್ಚಿನ ಸಾವು-ನೋವಿನ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ. ಟೆಹ್ರಾನ್ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ಬೆನ್ನಲ್ಲೇ ಇರಾನ್‌ನಿಂದ ಪ್ರತಿ ದಾಳಿ ನಿರೀಕ್ಷೆ ಮಾಡುತ್ತಿರುವ ಇಸ್ರೇಲ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಇಸ್ರೇಲ್‌ನ ಈ ಕಾರ್ಯಾಚರಣೆಯನ್ನು ‘ರೈಸಿಂಗ್ ಲಯನ್’ ಎಂದು ಕರೆದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ‘ನಾವು ಇರಾನ್ ಅಣ್ವಸ್ತ್ರ ಯೋಜನೆಯ ಮೇಲೆ ದಾಳಿ ನಡೆಸಿದ್ದೇವೆ. ಇರಾನ್‌ನ ಗುರಿ ನಿರ್ದೇಶಿತ ಕ್ಷಿಪಣಿ ಯೋಜನೆಯ ಮೇಲೆಯೂ ದಾಳಿ ನಡೆಸಲಾಗಿದೆ’ ಎಂದು ಹೇಳಿದ್ದಾರೆ.
ಇಸ್ರೇಲ್ ಮೇಲೆ ಪ್ರತಿ ದಾಳಿ
ಇಸ್ರೇಲ್ ಮೇಲೆ 100 ಡ್ರೋನ್‌ಗಳನ್ನು ಹಾರಿಸಲಾಗಿದೆ ಎಂದು ಇರಾನ್ ಸೇನೆ ತಿಳಿಸಿದೆ.
“ಕಳೆದ ಕೆಲವು ಗಂಟೆಗಳಲ್ಲಿ, ಇರಾನ್ ಇಸ್ರೇಲ್ ಕಡೆಗೆ 100 ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹಾರಿಸಿದೆ. ಇಸ್ರೇಲ್‌ನಿಂದ ನಮ್ಮ ರಕ್ಷಣಾ ವ್ಯವಸ್ಥೆ ಮೇಲಿನ ಬೆದರಿಕೆಗಳನ್ನು ತಡೆಯಲು ನಾವು ಸನ್ನದ್ಧರಾಗಿದ್ದೇವೆ” ಎಂದು ಸೇನಾ ಮುಖ್ಯ ವಕ್ತಾರ ಬ್ರಿಗೇಡಿಯರ್ ಜನರಲ್ ಎಫೀ ಡೆಫ್ರಿನ್ ಹೇಳಿದ್ದಾರೆ.