ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಮಿಲಿಟರಿ ದಾಳಿಯನ್ನು ಮುಂದುವರೆಸಿದೆ. ಕ್ರೌರ್ಯ ಮೆರೆಯುತ್ತಿದೆ. ಕಳೆದ 48 ಗಂಟೆಗಳಲ್ಲಿ ಕನಿಷ್ಠ 120 ಪ್ಯಾಲೆಸ್ತೀನಿಯರನ್ನು ಇಸ್ರೇಲಿ ಪಡೆ ಕೊಂದುಹಾಕಿದೆ.
ಗಾಜಾದ ಎನ್‌ಕ್ಲೇವ್‌ನ ಉತ್ತರ ಭಾಗದಲ್ಲಿರುವ ಆಸ್ಪತ್ರೆ ಮತ್ತು ಸುತ್ತಮುತ್ತಲ ಪ್ರದೇಶದ ಮೇಲೆ ಇಸ್ರೇಲ್ ಪಡೆ ಮಿಲಿಟರಿ ದಾಳಿ ನಡೆಸಿದೆ. ಆಸ್ಪತ್ರೆಯಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಮತ್ತು ಉಪಕರಣಗಳಿಗೆ ಹಾನಿಯಾಗಿದೆ. ಗಾಜಾದ ಮಧ್ಯ ಮತ್ತು ದಕ್ಷಿಣ ಭಾಗಗಳ ಮೇಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಹಮಾಸ್‌ನ ವಶದಲ್ಲಿದ್ದ ಇಸ್ರೇಲಿ ಒತ್ತೆಯಾಳುಗಳೂ ಕೂಡ ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್‌ನ ವಕ್ತಾರ ಅಬು ಉಬೈದಾ ತಿಳಿಸಿದ್ದಾರೆ. ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.