ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಭೀಕರ ಯುದ್ಧದ ಭೀತಿ ಮೂಡಿಸಿದ್ದ ಇಸ್ರೇಲ್ ಮತ್ತು ಲೆಬನಾನ್ನ ಹಿಜ್ಬುಲ್ಲಾ ಸಂಘರ್ಷಕ್ಕೆ ಸದ್ಯಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಗೆ ಇಸ್ರೇಲ್ ಮಣಿದಿದೆ. ಲೆಬನಾನ್ ಮೇಲೆ ಮತ್ತಷ್ಟು ಭೀಕರ ದಾಳಿ ನಡೆಸಲು ತಂತ್ರ ರೂಪಿಸಿದ್ದ ಇಸ್ರೇಲ್, ಸದ್ಯಕ್ಕೆ ತನ್ನ ಸೈನಿಕ ಕಾರ್ಯಾಚರಣೆಯನ್ನು ನಿಲ್ಲಿಸಲು ಒಪ್ಪಿಕೊಂಡಿದೆ ಎಂದು ಟ್ರಂಪ್ ಪ್ರಕಟಿಸಿದ್ದಾರೆ.
ಈ ಶಾಂತಿ ಒಪ್ಪಂದದ ಕುರಿತು ಮಾಹಿತಿ ಹಂಚಿಕೊಂಡಿರುವ ಟ್ರಂಪ್, ತಾವು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಸುದೀರ್ಘ ದೂರವಾಣಿ ಮಾತುಕತೆ ನಡೆಸಿರುವುದಾಗಿ ಹಾಗೂ ಸಂಧಾನಕಾರರ ಮೂಲಕ ಹಿಜ್ಬುಲ್ಲಾ ಸಂಘಟನೆಗೂ ಸಂದೇಶ ರವಾನಿಸಿರುವುದಾಗಿ ತಿಳಿಸಿದ್ದಾರೆ.
ಈ ಮಾತುಕತೆಗಳ ನಂತರವೇ ಉಭಯ ದೇಶಗಳು ದಾಳಿಗಳನ್ನು ನಿಲ್ಲಿಸಲು ಸಮ್ಮತಿಸಿವೆ. ಇಸ್ರೇಲ್ ಪಡೆಗಳು ಬೈರೂತ್ ಕಡೆಗೆ ಮುನ್ನುಗ್ಗುವುದಿಲ್ಲ ಮತ್ತು ಈಗಾಗಲೇ ಕಾರ್ಯಾಚರಣೆಗೆ ಇಳಿದಿದ್ದ ಸೈನಿಕರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ. ಇದಕ್ಕೆ ಪ್ರತಿಯಾಗಿ ಹಿಜ್ಬುಲ್ಲಾ ಕೂಡ ಇಸ್ರೇಲ್ ಮೇಲಿನ ಎಲ್ಲ ರೀತಿಯ ಗುಂಡಿನ ಹಾಗೂ ರಾಕೆಟ್ ದಾಳಿಗಳನ್ನು ನಿಲ್ಲಿಸಲು ಒಪ್ಪಿಕೊಂಡಿದೆ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಆದರೆ, ಶಾಂತಿ ಘೋಷಣೆಯಾದ ಕೆಲವೇ ಕ್ಷಣಗಳಲ್ಲಿ ಗಡಿ ಭಾಗದಲ್ಲಿ ಮತ್ತೆ ಉದ್ವಿಗ್ನತೆ ಸೃಷ್ಟಿಯಾಗಿದೆ. ಟ್ರಂಪ್ ಅವರ ಹೇಳಿಕೆ ಹೊರಬಿದ್ದ ಬೆನ್ನಲ್ಲೇ, ಲೆಬನಾನ್ ಕಡೆಯಿಂದ ಉತ್ತರ ಇಸ್ರೇಲ್ ಭಾಗದತ್ತ ಕ್ಷಿಪಣಿಗಳು ನುಗ್ಗಿ ಬಂದಿರುವುದು ವರದಿಯಾಗಿದೆ. ಈ ಹಠಾತ್ ದಾಳಿಯು ಯುದ್ಧ ವಿರಾಮದ ಒಪ್ಪಂದವು ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ ಎಂಬುದನ್ನು ಸಾಬೀತುಪಡಿಸಿದೆ.



