2026ರ ಐಪಿಎಲ್ ಆವೃತ್ತಿಯ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗೆಲುವು ಸಾಧಿಸಿದ ಬಳಿಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ; ಟ್ರೋಫಿ ಹಿಡಿದುಕೊಂಡು ಕೊಹ್ಲಿ ಅಳುತ್ತಿದ್ದು, ಅವರಿಗೆ ಸಾಂತ್ವನ ಹೇಳುತ್ತಾ, ಅವರ ಕಣ್ಣೀರನ್ನು ಅನುಷ್ಕಾ ಶರ್ಮಾ ಒರೆಸುತ್ತಿರುವುದು ಕಾಣುತ್ತದೆ. ಆದರೆ, ಈ ವಿಡಿಯೋ ಅಸಲಿಯಲ್ಲ, ಅದೊಂದು ಎಐ ತಂತ್ರಜ್ಞಾನದಿಂದ ಸೃಷ್ಟಿಸಲಾದ ವಿಡಿಯೋ ಎಂದು ‘ಬೂಮ್’ ಫ್ಯಾಕ್ಟ್ಚೆಕ್ ಸುದ್ದಿಸಂಸ್ಥೆ ಪತ್ತೆಹಚ್ಚಿದೆ.
ಐಪಿಎಲ್ ಫೈನಲ್ ಪಂದ್ಯದಲ್ಲಿ ಕೊಹ್ಲಿ 42 ಎಸೆತಗಳಲ್ಲಿ ಅಜೇಯ 75 ರನ್ ಗಳಿಸುವ ಮೂಲಕ, ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಸಿಬಿ 5 ವಿಕೆಟ್ಗಳ ಜಯ ಸಾಧಿಸಲು ನೆರವಾಗಿದ್ದರು. ಪಂದ್ಯ ಮುಗಿದ ಕೆಲವೇ ಕ್ಷಣಗಳಲ್ಲಿ ಅನುಷ್ಕಾ ಶರ್ಮಾ ಅವರು ಮೈದಾನದಲ್ಲಿ ಕೊಹ್ಲಿ ಅವರೊಂದಿಗೆ ಸೇರಿಕೊಂಡರಲ್ಲದೆ, ತಂಡದ ಇತರ ಸದಸ್ಯರು ಮತ್ತು ಅವರ ಕುಟುಂಬದವರ ಜೊತೆಗೆ ಐಪಿಎಲ್ ಟ್ರೋಫಿ ಹಿಡಿದು ಫೋಟೋಗಳಿಗೆ ಪೋಸ್ ನೀಡಿದ್ದರು.
ಇದೆಲ್ಲವೂ ಘಟಿಸಿದ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವ್ಯಾಪಕವಾಗಿ ಶೇರ್ ಆಗುತ್ತಿರುವುದು ಕಂಡುಬಂದಿದೆ. ಆ ವಿಡಿಯೋ ಪಂದ್ಯದ ನಂತರದ ವಿಜಯೋತ್ಸವದ್ದಾಗಿದೆ ಎಂಬ ಶೀರ್ಷಿಕೆಯೊಂದಿಗೆ ಹಲವರು ಹಂಚಿಕೊಂಡಿದ್ದಾರೆ. ಆ ವಿಡಿಯೋದ ಆರ್ಕೈವ್ಅನ್ನು ಇಲ್ಲಿ ನೋಡಬಹುದು.
Virat Kohli started crying after winning the trophy 😭 pic.twitter.com/7rtCl40mpS
— Arpita (@Arpitayadavv) June 1, 2026
ಇದೇ ವೀಡಿಯೊವನ್ನು ಹಂಚಿಕೊಂಡಿರುವ ‘iDiva’ ಮಾಧ್ಯಮವು, “ಆರ್ಸಿಬಿ ಐಪಿಎಲ್ 2026 ಗೆದ್ದಿದೆ. ಆದರೆ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಕ್ಷಣಗಳು ಇಂಟರ್ನೆಟ್ನ ನಿಜವಾದ ಹೈಲೈಟ್ ಆಗಿವೆ” ಎಂಬ ಶೀರ್ಷಿಕೆಯೊಂದಿಗೆ ವರದಿ ಪ್ರಕಟಿಸಿತ್ತು.
ಆದರೆ, ಆ ವಿಡಿಯೋ ಅಸಲಿಯಲ್ಲ, ನಕಲಿ ಎಂಬುದು ಸ್ಪಷ್ಟವಾಗಿದೆ. ವಿಡಿಯೋದ ಅಸಲಿಯತ್ತನ್ನು ಪತ್ತೆ ಹಚ್ಚಿರುವ ‘ಬೂಮ್’ ಸುದ್ದಿಸಂಸ್ಥೆಯು, “ನಾವು ಐಪಿಎಲ್ ಫೈನಲ್ ಪಂದ್ಯದ ನಂತರದ ಸಂಪೂರ್ಣ ಟ್ರೋಫಿ ಪ್ರದಾನ ಮತ್ತು ವಿಜಯೋತ್ಸವದ ದೃಶ್ಯಾವಳಿಗಳನ್ನು ವೀಕ್ಷಿಸಿದೆವು. ಆದರೆ, ವೈರಲ್ ವೀಡಿಯೊದಲ್ಲಿ ತೋರಿಸಲಾದ ಅಂತಹ ಯಾವುದೇ ಕ್ಷಣ ನಮಗೆ ಕಂಡುಬರಲಿಲ್ಲ. ಗೆಲುವಿನ ನಂತರ ಶರ್ಮಾ ಅವರು ಕೊಹ್ಲಿ ಮತ್ತು ಇತರ ಆರ್ಸಿಬಿ ಆಟಗಾರರೊಂದಿಗೆ ಮೈದಾನದಲ್ಲಿ ಸೇರಿಕೊಂಡಿದ್ದು ನಿಜವಾದರೂ, ವೈರಲ್ ವೀಡಿಯೊದಲ್ಲಿರುವಂತೆ ಅವರು ಕೊಹ್ಲಿ ಟ್ರೋಫಿ ಹಿಡಿದಿರುವಾಗ ಕಣ್ಣೀರು ಒರೆಸುತ್ತಿರುವ ಯಾವುದೇ ದೃಶ್ಯ ಅಧಿಕೃತ ಪ್ರಸಾರದ ದೃಶ್ಯಾವಳಿಗಳಲ್ಲಿ ಇಲ್ಲ” ಎಂದು ಸ್ಪಷ್ಟವಾಗಿ ಹೇಳಿದೆ.
ಈ ಲೇಖನ ಓದಿದ್ದೀರಾ?: ಪ್ರಜಾಪ್ರಭುತ್ವ ದಮನಕ್ಕೆ ಮೋದಿ ‘SIR’ ಅಸ್ತ್ರ ಬಳಸುತ್ತಿರುವುದು ಯಾಕೆ?
ಜೊತೆಗೆ, “ನಾವು ಈ ವೀಡಿಯೊವನ್ನು ಯುಬಿ ಮೀಡಿಯಾ ಫೋರೆನ್ಸಿಕ್ಸ್ ಲ್ಯಾಬ್ ಅಭಿವೃದ್ಧಿಪಡಿಸಿದ ‘Deepfake-o-Meter’ ಮತ್ತು ‘Hiya AI’ ವಾಯ್ಸ್ ಡಿಟೆಕ್ಟರ್ ಸೇರಿದಂತೆ ವಿವಿಧ ಎಐ-ಡಿಟೆಕ್ಷನ್ ಸಾಧನಗಳ ಮೂಲಕ ಪರಿಶೀಲಿಸಿದೆವು. ಈ ವೇಳೆ, ನವಜೋತ್ ಸಿಂಗ್ ಸಿಧು ಅವರ ಕಾಮೆಂಟರಿಯನ್ನು ನಕಲು ಮಾಡಿ ‘ಈ ಕ್ಷಣ ರೋಮಾಂಚನಕಾರಿಯಾಗಿದೆ’ ಎಂದು ಹೇಳುವ ಆಡಿಯೊವನ್ನು ಎಐ-ಸೃಷ್ಟಿತ ಎಂದು ‘Hiya AI’ ಸಂಸ್ಥೆಯು ಗುರುತಿಸಿದೆ. ಹಾಗೆಯೇ, ‘Deepfake-O-Meter’ನ ಫಲಿತಾಂಶವು ಈ ವೀಡಿಯೊ 99%ರಷ್ಟು ಎಐ ಮೂಲಕವೇ ಸೃಷ್ಟಿಯಾಗಿದೆ ಎಂಬುದನ್ನು ತೋರಿಸಿದೆ” ಎಂದು ವಿವರಿಸಿದೆ.
“ಅಧಿಕೃತ ನೇರ ಪ್ರಸಾರದ ದೃಶ್ಯಗಳೊಂದಿಗೆ ಈ ವೈರಲ್ ವೀಡಿಯೊವನ್ನು ಹೋಲಿಸಿದಾಗ ಹಲವು ವ್ಯತ್ಯಾಸಗಳು ಬೆಳಕಿಗೆ ಬಂದಿವೆ. ಅಧಿಕೃತ ಪ್ರಸಾರದಲ್ಲಿ ಪರದೆಯ ಮೇಲಿನ ಗ್ರಾಫಿಕ್ಸ್ನಲ್ಲಿ ‘Tata IPL Final’ ಲೋಗೋ ಇತ್ತು, ಆದರೆ ವೈರಲ್ ವೀಡಿಯೊದಲ್ಲಿ ಅದು ಇರಲಿಲ್ಲ. ಅಲ್ಲದೆ, ವೈರಲ್ ಕ್ಲಿಪ್ನಲ್ಲಿರುವ ಕೊಹ್ಲಿ ಅವರ ಜರ್ಸಿಯ ಮೇಲೆ ‘outdoors learn’ ಎಂಬ ಪದಗಳಿವೆ. ಆದರೆ ಫೈನಲ್ ಪಂದ್ಯದ ಸಮಯದಲ್ಲಿ ಕೊಹ್ಲಿ ಧರಿಸಿದ್ದ ಮೂಲ ಆರ್ಸಿಬಿ ಜರ್ಸಿಯಲ್ಲಿ ಅಂತಹ ಯಾವುದೇ ಪದಗಳು ಇರಲಿಲ್ಲ. ಇದು ಈ ವೀಡಿಯೊವನ್ನು ಎಡಿಟ್ ಮಾಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ” ಎಂದು ಬೂಮ್ ಹೇಳಿದೆ.




