ಆಳಾಗಿ ಬದುಕಿದ್ದ ಈ ‘ಅರಸ’ ಜೋಸ್ ಮುಜೀಕ ಇನ್ನಿಲ್ಲ!

Date:

Advertisements

ಸೂಟು ಬೂಟು ಭೂಷಿತ ಸಹೋದ್ಯೋಗಿಗಳ ಸಂತೆಯಲಿ ನಿಂತ ಸಂತ ಈತ. ಮನುಷ್ಯ ಮನುಷ್ಯನ ನಡುವಣ ಅಸಮಾನತೆ ಮುಜೀಕನನ್ನು ಬಹುವಾಗಿ ಬಾಧಿಸಿದ್ದ ಸಂಕಟ.  ಕಂಡದ್ದೆಲ್ಲ ಬೇಕು ಎಂದು ಅತಿಯಾಗಿ ಕೂಡಿ ಇಟ್ಟುಕೊಳ್ಳುವವರೇ ನಿಜವಾದ ದರಿದ್ರರು ಎಂದಿದ್ದ ಜೋಸ್ ಮುಜೀಕ

ಬೆವರು ಸುರಿಸುವ ಶ್ರಮಜೀವಿ ವರ್ಗದ ತಾತನಂತೆ ತೋರುವ ಮುಜೀಕ ಖುದ್ದು ಮೃಷ್ಟಾನ್ನ ಮೆದ್ದು, ಸುಪ್ಪತ್ತಿಗೆಯಲ್ಲಿ ಮಲಗಿ ತನ್ನ ಪ್ರಜೆಗಳಿಗೆ ಸರಳ ಬದುಕಿನ ಪೊಳ್ಳು ಪಾಠ ಹೇಳುವ ಆಷಾಢಭೂತಿ ಆಗಿರಲಿಲ್ಲ. ನಡೆದಂತೆ ನುಡಿಯುವವನೂ ನುಡಿದಂತೆ ನಡೆಯುವವನೂ ಆಗಿದ್ದ. ತಾನು ಪಾಲಿಸುವ  ಸರಳತೆಯನ್ನೇ ಮತ್ತೊಬ್ಬರಿಗೂ ಬೋಧಿಸುತ್ತಿದ್ದ.

ನಾಲ್ಕು ದಿನಗಳ ಹಿಂದೆ ಗತಿಸಿದ ಜೋಸ್ ಮುಜೀಕನಿಗೆ ವಯಸ್ಸು ಎಂಭತ್ತೆಂಟಾಗಿತ್ತು. ಲ್ಯಾಟಿನ್ ಅಮೆರಿಕೆಯ ದೇಶಗಳಲ್ಲಿ ಒಂದೆನಿಸಿದ ಉರುಗ್ವೇಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದ. ಈ ಸೀಮೆಯ ಅತಿ ಸುರಕ್ಷಿತ ಮತ್ತು ಅತಿ ಕನಿಷ್ಠ ಭ್ರಷ್ಟ ದೇಶಗಳಲ್ಲೊಂದು ಉರುಗ್ವೇ. ಜೀವನಾವಶ್ಯಕ ವಸ್ತುಗಳ ದರವನ್ನು ಸರ್ಕಾರವೇ ನಿಗದಿ ಮಾಡುತ್ತದೆ. ಪ್ರತಿ ಮಗುವಿಗೂ ಉಚಿತ ಶಿಕ್ಷಣ, ಮುಫತ್ತು ಕಂಪ್ಯೂಟರುಗಳು.

Advertisements

ಉರುಗ್ವೆ ದೇಶದ ಅಧ್ಯಕ್ಷರಿಗೆಂದೇ ಕಟ್ಟಲಾಗಿರುವ ವಿಲಾಸೀ ವಸತಿಯನ್ನು ಒಲ್ಲೆ ಎಂದಿದ್ದ ಮಜೀಕ ಒಂದು ಕೋಣೆಯ ಪುಟ್ಟ ಸಾದಾ ತೋಟದ ಮನೆಯಲ್ಲಿ ವಾಸಿಸುತ್ತಿದ್ದ. ಅದೂ ನಿವೃತ್ತಿಯ ನಂತರ ಅಲ್ಲ, ರಾಷ್ಟ್ರಾಧ್ಯಕ್ಷನಾಗಿದ್ದಾಗಲೇ. ಅಧಿಕಾರದ ಪದವಿಯ ಜೊತೆಗೇ ದಕ್ಕುವ ವಿಲಾಸೀ ಲಿಮೋಸಿನ್ ಕಾರನ್ನು ತೊರೆದು ತನ್ನ ಹಳೆಯ ಪುಟಾಣಿ Volkswagen Beetle ಕಾರನ್ನು ತಾನೇ ಡ್ರೈವ್ ಮಾಡಿಕೊಂಡು ಓಡಾಡುತ್ತಿದ್ದ. ವಿಮಾನ ಏರಿದರೆ ಎಕನಾಮಿ ದರ್ಜೆಯಲ್ಲೇ ಪ್ರಯಾಣಿಸುತ್ತಿದ್ದ. ಅಧಿಕಾರ ಅಂತಸ್ತುಗಳ ಕುರಿತು ಅರೆ ನಿಮಿಷವೂ ತಲೆ ಕೆಡಿಸಿಕೊಂಡವನಲ್ಲ. ಸಾಧಾರಣ ಉಡುಪು, ಸವೆದ ಚಪ್ಪಲಿ, ಪೊದೆ ಹುಬ್ಬುಗಳ ಉರುಟು ಮೈಯ ಧಡೂತಿ ರೈತ ತಾತನ ರೂಪ

ಸೂಟು ಬೂಟು ಭೂಷಿತ ಸಹೋದ್ಯೋಗಿಗಳ ಸಂತೆಯಲಿ ನಿಂತ ಸಂತ ಈತ. ಮನುಷ್ಯ ಮನುಷ್ಯನ ನಡುವಣ ಅಸಮಾನತೆ ಮುಜೀಕನನ್ನು ಬಹುವಾಗಿ ಬಾಧಿಸಿದ್ದ ಸಂಕಟ.

ಪತ್ನಿ ಲೂಸಿಯಾ ಟೊಪೋಲಾನ್ಸ್ಕಿ ಕಾಂಗ್ರೆಸ್ಸಿನ ಹಿರಿಯ ಸದಸ್ಯೆ. ಆಕೆ ಕೂಡ ಉರುಗ್ವೇಯ ಹಂಗಾಮಿ ಅಧ್ಯಕ್ಷೆಯಾಗಿದ್ದಾಕೆ. ಇಬ್ಬರೂ ಹಂಚಿಕೊಂಡಿದ್ದು ಆಕೆಯದಾದ ಅದೇ ಒಂದು ಕೋಣೆಯ ಪುಟ್ಟ ಮನೆ. ಈ ಮನೆ ಇರೋದು ಉರುಗ್ವೇಯ ರಾಜಧಾನಿ ಮಾಂಟೆವೀಡೋದ ಹೊರವಲಯದಲ್ಲಿ. ಆತನ ಮನೆಗೆ ಹೋಗಬೇಕಿದ್ದರೆ ಕೆಸರು ರಸ್ತೆಯನ್ನೇ ಹಾಯಬೇಕು. ಸುತ್ತಮುತ್ತ ಕಳೆ ಬೆಳೆದ ಚೆಂಡು ಹೂಗಳ ತೋಟ. ಪತಿ ಪತ್ನಿ ಇಬ್ಬರೂ ತೋಟದಲ್ಲಿ ಮೈದಣಿಸಿ ಹೂವು ತರಕಾರಿ ಬೆಳೆಯುತ್ತಿದ್ದರು. ರಾಷ್ಟ್ರಾಧ್ಯಕ್ಷನ ವಿಲಾಸೀ ಬಂಗಲೆಗೆ ಇರಬೇಕಾದ ಯಾವುದೇ ಭದ್ರತೆ ಈತನ ಪುಟ್ಟಮನೆಯ ಸುತ್ತ ಕಾಣಲಿಲ್ಲ. ಮುಖ್ಯರಸ್ತೆಯಿಂದ ಈತನ ಮನೆಯತ್ತ ಕವಲೊಡೆಯುವ ರಸ್ತೆಯ ತುದಿಯಲ್ಲಿ ಇಬ್ಬರು ರಕ್ಷಕ ಭಟರನ್ನು ಬಿಟ್ಟರೆ ಮೂರನೆಯ ಸೆಕ್ಯೂರಿಟಿ ಗಾರ್ಡು ಎಂದರೆ ಮುಜೀಕನ ದೀರ್ಘ ಕಾಲದ ಸಂಗಾತಿ ಮೂರು ಕಾಲಿನ ಕುಂಟು ನಾಯಿ ಮನುವೇಲ.

ಜೋಸ್‌
ತನ್ನ ಪ್ರೀತಿಯ ಮೂರು ಕಾಲಿನ ನಾಯಿಯ ಜೊತೆಗೆ…

ಸರಳ ಜೀವನವಿಧಾನ ನಡೆಸುತ್ತ ತನ್ನ ಸಂಬಳದ ತೊಂಬತ್ತು ಭಾಗವನ್ನು ಸಾಮಾಜಿಕ ಯೋಜನೆಗಳಿಗೆ ದೇಣಿಗೆಯಾಗಿ ನೀಡುತ್ತಿದ್ದ ಈತನನ್ನು ಜಗತ್ತಿನ ಅತಿ ನಿರ್ಗತಿಕ ರಾಷ್ಟ್ರಾಧ್ಯಕ್ಷ ಎಂದು ಕರೆಯಲಾಗುತ್ತಿತ್ತು. ದೇಣಿಗೆ ನೀಡಿದ ನಂತರ ಕೈಯಲ್ಲಿ ಉಳಿಯುತ್ತಿದ್ದ ಸಂಬಳ 1,200 ಡಾಲರುಗಳು (ಒಂದು ಲಕ್ಷ ರುಪಾಯಿಗೆ 52 ರುಪಾಯಿ ಕಮ್ಮಿ-99,948). ಉರುಗ್ವೇಯ ನಾಗರಿಕನ ಸರಾಸರಿ ಮಾಸಿಕ ಆದಾಯಕ್ಕೆ ಸಮನಾಗಿದ್ದ ಮೊತ್ತವಿದು. ಬದುಕಿಡೀ ಹೀಗೆಯೇ ಜೀವಿಸಿಕೊಂಡು ಬಂದಿದ್ದೇನೆ. ಇರೋದ್ರಲ್ಲೇ ಬಾಳಬಲ್ಲೆ ಎನ್ನುತ್ತಿದ್ದ ಮುಜೀಕನ ಮಾತಿನಲ್ಲಿ ಯಾವ ಅಗ್ಗಳಿಕೆಯೂ ಇಣುಕುತ್ತಿರಲಿಲ್ಲ. 2010ರಲ್ಲಿ ಈತ ಘೋಷಿಸಿದ್ದ ಆಸ್ತಿಪಾಸ್ತಿಯ ಮೊತ್ತ 1,800 ಡಾಲರುಗಳು. ಅದು ಕೂಡ 1987ರ ಮಾಡೆಲಿನ ತನ್ನ ಕಾರು Volkswagen Beetleನ ಬೆಲೆ.

ತನ್ನನ್ನು ನಿರ್ಗತಿಕ ಎಂದು ಕರೆಯುವವರ ಮಾತನ್ನು ಆತ ಒಪ್ಪುತ್ತಿರಲಿಲ್ಲ. ಹಾಗೆ ಕರೆಯುವವರೇ ಖುದ್ದು ನಿರ್ಗತಿಕರು. ಕಂಡದ್ದೆಲ್ಲ ಬೇಕು ಎಂದು ಅತಿಯಾಗಿ ಕೂಡಿ ಇಟ್ಟುಕೊಳ್ಳುವವರೇ ನಿಜವಾದ ದರಿದ್ರರು. ಕಂಡದ್ದೆಲ್ಲ ಬೇಕೆಂದು ಖರೀದಿ ಮಾಡುವವರು ಸದಾ ಅತೃಪ್ತರು ಎನ್ನುತ್ತಿದ್ದ.

ಉನ್ನತ ಪದವಿಯಲ್ಲಿ ಕುಳಿತ ನಂತರ ಪದವಿಗೆ ತಕ್ಕಂತೆ ಜರ್ಬು ಜೋರಿನ ಜೀವನ ನಡೆಸಬೇಕು ಎಂದೆಲ್ಲ ಮಜೀಕನನ್ನು ಅವನ ಪ್ರಜೆಗಳೇ ಹಲವರು ಟೀಕಿಸುತ್ತಿದ್ದುದು ಉಂಟು. ಆದರೆ ಮಜೀಕನ ನಡೆನುಡಿಗಳು ದೇಶ ವಿದೇಶಗಳ ಜನರ ಪ್ರೀತಿ ಗೌರವಗಳನ್ನು ಗೆದ್ದಿದ್ದವು.

ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ಟುಪಾಮೋರೋಸ್ ಕ್ರಾಂತಿಕಾರಿ ಪಡೆಯಲ್ಲಿ ಸಕ್ರಿಯನಾಗಿದ್ದ ಮುಜೀಕ. ಈ ಪಡೆಯನ್ನು ರಾಬಿನ್ ಹುಡ್ ಗೆರಿಲ್ಲಾಸ್ (Robin Hood guerrillas) ಎಂದು ಕರೆಯಲಾಗುತ್ತಿತ್ತು. ಬ್ಯಾಂಕುಗಳು ಮತ್ತು ಸರಕುಗಳನ್ನು ಸಾಗಿಸುವ ಲಾರಿಗಳನ್ನು ಲೂಟಿ ಮಾಡಿ ಆಹಾರವಸ್ತುಗಳು ಮತ್ತು ಹಣವನ್ನು ಬಡವರಿಗೆ ಹಂಚುತ್ತಿದ್ದ ಗೆರಿಲ್ಲಾ ಪಡೆ.

ದಸ್ತಗಿರಿಯಾಗುವ ಮುಜೀಕ ಜೈಲು ಮುರಿದು ತಪ್ಪಿಸಿಕೊಳ್ಳುತ್ತಾನೆ. ಗುಂಡೇಟುಗಳನ್ನು ತಿನ್ನುತ್ತಾನೆ. ಒಮ್ಮೆಯಂತೂ ಭಾವಿಯ ತಳದಲ್ಲಿ ಎರಡು ವರ್ಷಗಳ ಏಕಾಂತ ಸೆರೆವಾಸದ ಉಗ್ರ ಶಿಕ್ಷೆ ಅನುಭವಿಸುತ್ತಾನೆ. ಹುಚ್ಚು ಹಿಡಿಯದೆ ಇರಲು ಕಪ್ಪೆಗಳು ಮತ್ತಿತರೆ ಜಂತುಗಳ ಜೊತೆ ಮಾತಾಡುತ್ತ ಕಾಲ ಕಳೆಯುತ್ತಾನೆ. ಉರುಗ್ವೇಗೆ ಸಾಂವಿಧಾನಿಕ ಜನತಂತ್ರ ಮರಳಿದ್ದು 1985ರಲ್ಲಿ. ಆಗ ಕ್ಷಮಾದಾನ ಪಡೆದು ಜೈಲಿನಿಂದ ಬಿಡುಗಡೆ ಆಗುವ ಮಜೀಕ ಅದೇ ದೇಶದ ರಾಷ್ಟ್ರಾಧ್ಯಕ್ಷ.

ದುಂದುಗಾರಿಕೆ ಮತ್ತು ಉಡಾಫೆಯ ಜೀವನಶೈಲಿಯನ್ನು ಹಂಗಿಸಿ ಆತ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಮಾಡಿದ್ದ ಭಾಷಣ ಜಾಗತಿಕ ಗಮನ ಸೆಳೆದಿತ್ತು.

npr.brightspotcdn
2014ರಲ್ಲಿ ಮತದಾನಕ್ಕೆ ಬಂದಾಗ…

ಹಳೆಯಪಳೆಯ ದೇವರುಗಳನ್ನು ಬಿಟ್ಟುಕೊಟ್ಟಿರುವ ನಾವು ಇದೀಗ ಮಾರುಕಟ್ಟೆ ದೇವತೆಯ ಮಂದಿರದಲ್ಲಿ ಶರಣು ಹೇಳಿ ಕುಳಿತಿದ್ದೇವೆ. ಮಾರುಕಟ್ಟೆ ಎಂಬ ಭಗವಂತನೇ ನಮ್ಮ ಅರ್ಥವ್ಯವಸ್ಥೆ, ನಮ್ಮ ರಾಜಕಾರಣ, ನಮ್ಮ ಹವ್ಯಾಸಗಳು, ನಮ್ಮ ಬದುಕುಗಳ ಸಂಘಟಿಸುತ್ತಿದ್ದಾನೆ. ಕ್ರೆಡಿಟ್ ಕಾರ್ಡುಗಳ ದಾತ ಅವನು. ನಮಗೆಲ್ಲ ನಲಿವು ನೆಮ್ಮದಿಗಳ ತೋರಿಕೆಯ ಚಹರೆಯನ್ನು ಏರ್ಪಾಟು ಮಾಡವವನೂ ಅವನೇ.

ಸಾಧನ ಸರಕುಗಳನ್ನು, ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಬಳಸಲು, ಬಳಸಲು ಮತ್ತು ಕೇವಲ ಬಳಸಲೆಂದೇ ನಾವು ಜನಿಸಿದ್ದೇವೆಂದು ತೋರುತ್ತದೆ. ಇನ್ನು ಬಳಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಒದಗಿದರೆ ಹತಾಶೆ ನಮ್ಮನ್ನು ಆವರಿಸಿಕೊಳ್ಳುತ್ತದೆ, ಬಡತನದಿಂದ ಬಳಲತೊಡಗುತ್ತೇವೆ. ನಮ್ಮನ್ನು ನಾವೇ ಅಂಚಿಗೆ ತಳ್ಳಿಕೊಳ್ಳುತ್ತೇವೆ ಎಂಬ ಮುಜೀಕನ ಮಾತುಗಳು ಇಂದಿನ ಸಂದರ್ಭಕ್ಕೆ ಅತ್ಯಂತ ಪ್ರಸ್ತುತ.

14 ವರ್ಷಗಳ ಹಿಂದೆ 2010ರಲ್ಲಿ ಅಧಿಕಾರ ವಹಿಸಿಕೊಂಡ ಮಜೀಕನ ಆಡಳಿತ ಬಂಡವಾಳವನ್ನು ಆರಾಧಿಸುವ  ಪಶ್ಚಿಮ ಜಗತ್ತಿನ ಮನ ಗೆದ್ದಿತ್ತು. ಪಾದ ಕಾಣಿಸುವ ಚಪ್ಪಲಿಗಳನ್ನು ಮೆಟ್ಟಿದ ಈ ಮಾಜಿ ಮಾರ್ಕ್ಸವಾದಿಯನ್ನು The Economist ನಂತಹ ಪ್ರಸಿದ್ಧ ಅರ್ಥಶಾಸ್ತ್ರೀ ನಿಯತಕಾಲಿಕ ಕೊಂಡಾಡಿದ್ದುಂಟು. ಅದು ಅತಿ ವಿರಳ ವಿದ್ಯಮಾನ. ಉರುಗ್ವೇಯನ್ನು ‘ವರ್ಷದ ದೇಶ’ ಎಂದು ಕರೆದಿತ್ತು ದಿ ಎಕಾನಮಿಸ್ಟ್.

ಗಾಂಜಾ ಬೆಳೆಯನ್ನು ಕಾನೂನುಬದ್ಧ ಮಾಡಿದ್ದ ಮಜೀಕ. ಅದರಲ್ಲಿ ಅಂತಹ ಉದಾರವಾದವೇನೂ ಇಲ್ಲ. ಔಷಧಕ್ಕಾಗಿ ಬಳಸುವ ಈ ಸಸ್ಯದ ವ್ಯಾಪಾರವನ್ನು ಗುಪ್ತವ್ಯಾಪಾರಿಗಳ ಕಪಿಮುಷ್ಠಿಯಿಂದ ಸರ್ಕಾರ ಬಿಡಿಸಿಕೊಂಡಿರುವ ಕ್ರಮ ಅಷ್ಟೇ. ಸೇದುವ ಬಳಕೆಯ ಮೇಲೆ ನಿರ್ಬಂಧ ಇದ್ದೇ ಇರುತ್ತದೆ ಎಂದಿದ್ದ ಮುಜೀಕ.

ದುಡಿಯುವ ಕೈಗಳಿಗೆ ಹೆಚ್ಚಿನ ಕೆಲಸ ಮತ್ತು ಹೆಚ್ಚು ಹೆಚ್ಚು ಬಂಡವಾಳ ಹೂಡಿಕೆಗೆ ಬಡಿದಾಡಿದ್ದ. ಆದರೆ ಬಳಕೆಯನ್ನು ವಿಸ್ತರಿಸುತ್ತಲೇ ಅನಗತ್ಯ ಬಳಕೆಯ ಮೇಲೆ ಕಡಿವಾಣ ಹಾಕಿದ್ದ ಮಜೀಕ, ಊರ್ಜೆ ಮತ್ತಿತರೆ ಸಂಪನ್ಮೂಲಗಳನ್ನು ಪೋಲು ಮಾಡುವ ಧೋರಣೆಯ ಕಡು ವಿರೋಧಿಯಾಗಿದ್ದ.

ಈ ವೈರುಧ್ಯಕ್ಕೆ ರಾಜಕಾರಣದಲ್ಲೇ ಉತ್ತರ ಹುಡುಕಬೇಕಿದೆ ಎನ್ನುತ್ತಿದ್ದ. ಬಳಕೆಬಾಕತನವನ್ನು ಬದಿಗಿಟ್ಟು ಅಗತ್ಯವಿದ್ದಷ್ಟನ್ನು ಬಳಕೆ ಮಾಡುವುದೇ ಆದಲ್ಲಿ ಜಗತ್ತಿನ ಎಪ್ಪತ್ತು ಕೋಟಿ ಜನ ತಿಂದು ಉಂಡು ಸುಖವಾಗಿ ಬದುಕಬಹುದಾದಷ್ಟು ಸಂಪನ್ಮೂಲ ಇದ್ದೇ ಇದೆ. ಜಾಗತಿಕ ರಾಜಕಾರಣ ಚಲಿಸಬೇಕಾದದ್ದು ಈ ದಿಸೆಯಲ್ಲೇ ವಿನಾ ದಿನ ಬೆಳಗಾಗುವುದರಲ್ಲಿ ಇದ್ದದ್ದನ್ನೆಲ್ಲ ತಿಂದು ತೇಗಿ ಖಾಲಿ ಮಾಡುವುದರ ಅತಿಭೋಗದತ್ತ ಅಲ್ಲ. ಮುಂದುವರೆದ ದೇಶಗಳ ಸಿರಿವಂತ ಸಮಾಜಗಳು ಬದುಕುವ ಅಂಧಾದುಂಧಿಯ ಶೈಲಿಯನ್ನು ಎಲ್ಲ ದೇಶಗಳೂ ಅನುಕರಿಸಿದರೆ ಭೂಮಿ ಉಳಿದೀತೇ? ನಾವು ಬೇರೆ ಬೇರೆ ದೇಶಗಳಾಗಿ, ಭಿನ್ನ ಜನಾಂಗಗಳಾಗಿ ಆಲೋಚಿಸುತ್ತೇವೆಯೇ ವಿನಾ ಮನುಕುಲವೆಲ್ಲ ಒಂದು ಎಂದು ಅಲ್ಲ. ಈ ಆಲೋಚನಾ ವಿಧಾನದಲ್ಲೇ ದೋಷವಿದೆ ಎಂಬುದು ಮಜೀಕನ ನಿಲುವಾಗಿತ್ತು.

ಆತನ ಪ್ರಕಾರ ಜಗತ್ತಿಗೆ ಕ್ರಾಂತಿಯ ಅಗತ್ಯ ಇದ್ದೇ ಇದೆ. ಹಾಗೆಂದಾಕ್ಷಣ ಕ್ರಾಂತಿಯೆಂಬುದರ ಅರ್ಥ ಗುಂಡು ಹಾರಿಸುವುದು, ರಕ್ತ ಚಿಮ್ಮಿಸುವುದೆಂದು ಅಲ್ಲ. ನಿಮ್ಮ ಆಲೋಚನಾ ವಿಧಾನವನ್ನು ಬದಲಾಯಿಸಿಕೊಂಡರೆ ಅದು ಕೂಡ ಕ್ರಾಂತಿಯೇ. Confucianism ಮತ್ತು Christianity ಎರಡೂ ಕ್ರಾಂತಿಗಳೇ ಎಂದಿದ್ದ .

ಉಮಾಪತಿ ಡಿ
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

Download Eedina App Android / iOS

X