ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಗೆಲುವು ಸಾಧಿಸುವು ಬಹುತೇಕ ಕಷ್ಟವಾಗಿದೆ. ಮತ ಎಣಿಕೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೆ ಅವರ ಪೂರ್ವಜರ ಗ್ರಾಮವಾದ ತಮಿಳುನಾಡಿನ ತಿರುವಾವೂರು ಜಿಲ್ಲೆಯ ತುಳಸೇಂದ್ರಪುರಂನ ಜನರ ಮುಖದಲ್ಲಿ ನಿರಾಸೆ ಆವರಿಸಿದೆ.
ಬೆಳಿಗ್ಗೆಯಿಂದಲೂ ಚುನಾವಣಾ ಫಲಿತಾಂಶ ತಿಳಿದುಕೊಳ್ಳಲು ಜನರು ಟಿ.ವಿ ಮುಂದೆ ಕುಳಿತಿದ್ದರು. ಹಲವು ವೆಬ್‌ಸೈಟ್‌ಗಳಲ್ಲಿ ಫಲಿತಾಂಶದ ಬಗ್ಗೆ ಕುತೂಹಲದ ಕಣ್ಣಿಟ್ಟಿದ್ದರು. ಕಮಲಾ ಹ್ಯಾರಿಸ್ ಅವರ ಗೆಲುವಿಗೆ ಹಲವು ಗ್ರಾಮಸ್ಥರು, ಶ್ರೀಧರ್ಮಸಾಸ್ಥ ಪೆರುಮಾಳ್ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.
‘ನಾವು ಅವರ ಗೆಲುವನ್ನು ನಿರೀಕ್ಷಿಸುತ್ತಿದ್ದೆವು. ದೀಪಾವಳಿಗಿಂತ ಅದ್ಧೂರಿ ಸಂಭ್ರಮಾಚರಣೆ ಉದ್ದೇಶಿಸಿದ್ದೆವು. ಪಟಾಕಿ ಸಿಡಿಸಲು, ಸಿಹಿ ಹಂಚಲು, ದೇ ವಾಲಯಗಳಲ್ಲಿ ಪೂಜೆ ನಡೆಸಲು, ಜನರಿಗೆ ಊಟ ನೀಡಲು ಸಿದ್ಧತೆ ಮಾಡಿಕೊಂಡಿದ್ದೆವು’ ಎಂದು ಡಿಎಂಕೆ ಪಕ್ಷದ ತಿರುವಾವೂರು ಜಿಲ್ಲೆಯ ಪ್ರತಿನಿಧಿ ಹಾಗೂ ತುಳಸೇಂದ್ರಪುರಂನ ನಾಯಕ ಜೆ. ಸುಧಾಕರ್ ಹೇಳಿದ್ದಾರೆ.
‘ಸೋಲು–ಗೆಲುವು ಜೀವನದ ಭಾಗ. ಇದೊಂದು ಕಠಿಣ ಹೋರಾಟ. ಅವರ ಹೋರಾಟದ ಮನೋಭಾವವನ್ನು ಮೆಚ್ಚಲೇಬೇಕು. ಅವರು ಹೋರಾಟಗಾರ್ತಿ , ಪುನರಾಗಮನಮಾಡುತ್ತಾರೆ. ಕಮಲಾ ಅಧ್ಯಕ್ಷರಾಗುತ್ತಾರೆ ಎಂದು ಗ್ರಾಮದ ಪ್ರತಿಯೊಬ್ಬರು ನಿರೀಕ್ಷಿಸುತ್ತಿದ್ದರು’ ಎಂದು ಅವರು ನುಡಿದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಮೆರಿಕ ಚುನಾವಣೆ | ಕಮಲಾ ಹ್ಯಾರಿಸ್ – ಡೊನಾಲ್ಡ್ ಟ್ರಂಪ್; ಮತದಾರರ ಚಿತ್ತ ಯಾರತ್ತ?
ಟ್ರಂಪ್ ಗೆಲುವು ಸಾಧಿಸಿದ ಹಿನ್ನೆಲೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕೆಲವು ಧಾರ್ಮಿಕ ಸಂಘಟನೆಯ ಕಾರ್ಯಕರ್ತರು ಡೋನಾಲ್ಡ್ ಟ್ರಂಪ್ ಭಾವಚಿತ್ರಗಳಿಗೆ ಕುಂಕುಮವಿಟ್ಟು, ಸಿಹಿ ಹಂಚಿ ಸಂಭ್ರಮಾಚರಣೆ ವ್ಯಕ್ತಪಡಿಸಿದರು.
ಅಮೆರಿಕದ 538 ಕ್ಷೇತ್ರಗಳ ಪೈಕಿ ಡೊನಾಲ್ಡ್ ಟ್ರಂಪ್ 270 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಮಲಾ ಹ್ಯಾರಿಸ್ 214 ಸ್ಥಾನಗಳಲ್ಲಿ ಮುಂದಿದ್ದಾರೆ. ಗೆಲುವಿಗೆ 270 ಸ್ಥಾನಗಳ ಅವಶ್ಯಕತೆಯಿದ್ದು, ಈ ಸ್ಥಾನಗಳಲ್ಲಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ. ಇದರೊಂದಿಗೆ ಡೊನಾಲ್ಡ್ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಮುಂದಿನ ವರ್ಷದ ಜನವರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ಅದಲ್ಲದೆ ನಿರ್ಣಾಯಕ ಎಲೆಕ್ಟೋರಲ್ ರಾಜ್ಯಗಳಲ್ಲಿ ಗೆಲುವು ಸಾಧಿಸಿದ ನಂತರ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಾಗಿ ಘೋಷಿಸಿಕೊಂಡಿದ್ದಾರೆ.

