ಕರ್ನಾಟಕ ಮೂಲದ ವ್ಯಕ್ತಿಯೊಬ್ಬರನ್ನು ಅವರ ಪತ್ನಿ ಮತ್ತು ಪುತ್ರನ ಎದುರೇ ಹಲ್ಲೆಗೈದು, ತಲೆ ಕತ್ತರಿಸಿ ಬರ್ಬರವಾಗಿ ಹತ್ಯೆಗೈದಿರುವ ಆಘಾತಕಾರಿ, ಭಯಾನಕ ಘಟನೆ ಅಮೆರಿಕದ ಡಲ್ಲಾಸ್‌ನಲ್ಲಿ ನಡೆದಿದೆ.
ಕೊಲೆಯಾದವರನ್ನು ಚಂದ್ರಮೌಳಿ ನಾಗಮಲ್ಲಯ್ಯ ಎಂದು ಗುರುತಿಸಲಾಗಿದೆ. ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನವರು ಎಂದು ತಿಳಿದುಬಂದಿದೆ. ನಾಗಮಲ್ಲಯ್ಯ ಡಲ್ಲಾಸ್‌ನ ಹೋಟೆಲ್‌ವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರನ್ನು ಅವರ ಸಹೋದ್ಯೋಗಿ, ಕ್ಯೂಬಾ ಮೂಲದ ಯೊರ್ಡಾನಿಸ್ ಕೊಬೊಸ್ ಮಾರ್ಟಿನೆಝ್ ಎಂಬ ಹತ್ಯೆಗೈದಿದ್ದಾನೆ ಎಂದು ವರದಿಯಾಗಿದೆ.
ವಾಶಿಂಗ್ ಮಶಿನ್‌ಗೆ ಹಾನಿಯಾಗಿದ್ದ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ, ಮಾರ್ಟಿನೆಝ್ ಕತ್ತಿ ತೆಗೆದುಕೊಂಡು ನಾಗಮಲ್ಲಯ್ಯ ಅವರನ್ನು ಅಟ್ಟಾಡಿಸಿಕೊಂಡು ಹೋಗಿ, ತಲೆ ಕತ್ತರಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಾಗಮಲ್ಲಯ್ಯ ಅವರ ಹತ್ಯೆಯನ್ನು ಹೌಸ್ಟನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಖಂಡಿಸಿದೆ. “ಸಂತ್ರಸ್ತ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಅಗತ್ಯವಿರುವ ಎಲ್ಲ ರೀತಿಯ ನೆರವನ್ನು ನೀಡಲಿದ್ದೇವೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ” ಎಂದು ಕಚೇರಿ ತಿಳಿಸಿದೆ.