ಲಷ್ಕರ್-ಎ-ತಯ್ಯಬಾದ ಭಯೋತ್ಪಾದಕ, 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಆಪ್ತ ಸಹಾಯಕ ಅಬು ಕತಾಲ್‌ನನ್ನು ಶನಿವಾರ ರಾತ್ರಿ ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ದಾಳಿಗಳನ್ನು ಅಬು ಕತಾಲ್ ಮಾಡಿಸಿದ್ದ ಎಂದು ಹೇಳಲಾಗಿದೆ.
ಅಬು ಕತಾಲ್ ನಿಜವಾದ ಹೆಸರು ಜಿಯಾ-ಉರ್-ರೆಹಮಾನ್ ಆಗಿದ್ದು, ತನ್ನ ಭದ್ರತಾ ಸಿಬ್ಬಂದಿಯೊಂದಿಗೆ ಸಂಜೆ 7 ಗಂಟೆ ಸುಮಾರಿಗೆ ಝೇಲಂ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದಾಗ ಅಪರಿಚಿತ ದಾಳಿಕೋರರು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ವರದಿಯಾಗಿದೆ. ದಾಳಿಕೋರರು ಸುಮಾರು 15ರಿಂದ 20 ಸುತ್ತು ಗುಂಡು ಹಾರಿಸಿದ್ದು, ಅಬು ಕತಾಲ್ ಮತ್ತು ಅವರ ಭದ್ರತಾ ಸಿಬ್ಬಂದಿಗಳಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮತ್ತೋರ್ವ ತೀವ್ರವಾಗಿ ಗಾಯಗೊಂಡಿದ್ದಾನೆ.
ಇದನ್ನು ಓದಿದ್ದೀರಾ? ರಿಯಾಸಿ ದಾಳಿ| ಉಗ್ರರು 20 ನಿಮಿಷಗಳ ಕಾಲ ಗುಂಡು ಹಾರಿಸಿದ್ದರು: ಮಾಜಿ ಸರಪಂಚ್
ಝೀಲಂ ಪ್ರದೇಶದ ದಿನಾ ಪಂಜಾಬ್ ವಿಶ್ವವಿದ್ಯಾಲಯದ ಬಳಿಯ ಜೀನತ್ ಹೋಟೆಲ್ ಬಳಿ ಈ ದಾಳಿ ನಡೆದಿದೆ. ಜಿಯಾ-ಉರ್-ರೆಹಮಾನ್ ಅವರ ಬೆಂಗಾವಲು ಪಡೆಯು ಹಾದುಹೋಗುತ್ತಿದ್ದಂತೆ, ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಅವರ ಆಪ್ತ ಸಹಾಯಕನಾಗಿದ್ದ ಅಬು ಕತಾಲ್, ಜೂನ್ 9ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದ ದಾಳಿಯ ಆರೋಪಿಯಾಗಿದ್ದಾನೆ. ಈ ದಾಳಿಯಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ.
