ಕೆಲವೊಮ್ಮೆ ಸಣ್ಣ ಸಹಾಯವೂ ದೊಡ್ಡ ವಿಸ್ಮಯವಾಗಿಬಿಡುತ್ತವೆ. ಅಂಥದ್ದೇ ವಿಸ್ಮಯಕಾರಿ ಘಟನೆಯಲ್ಲಿ ಮಹಿಳೆಯೊಬ್ಬರನ್ನು ಪುಟ್ಟ ಪಕ್ಷಿ ರಕ್ಷಿಸಿತ್ತು. ಆಕೆಯ ಜೀವ ಉಳಿಸಿತ್ತು ಎಂದರೆ ನಂಬಲು ಸಾಧ್ಯವಾಗದೇ ಇರಬಹುದು. ಆದರೂ, ಇದು ಸತ್ಯ.
ಪುಟ್ಟ ಪಕ್ಷಿ 68 ವರ್ಷದ ಮಹಿಳೆಯ ಜೀವ ಉಳಿಸಿದ ಘಟನೆ ನಡೆದದ್ದು ಆಸ್ಟ್ರೇಲಿಯಾದಲ್ಲಿ, 2020ರಲ್ಲಿ. ಆಸ್ಟ್ರೇಲಿಯಾದ ಎಸ್ಪರೆನ್ಸ್‌ನ ನಿವಾಸಿ ಸ್ಯಾಂಡಿ ಗಿಲ್ಲಾರ್ಡ್ ಅವರು ತಮ್ಮ ಮನೆಯ 2ನೇ ಮಹಡಿಯಲ್ಲಿ ತನ್ನ ಮೊಮ್ಮಗನೊಂದಿಗೆ ಆಟವಾಡುತ್ತಿದ್ದಾಗ, ತೆರೆದ ಕಿಟಕಿಯಿಂದ ಬಿದ್ದಿದ್ದರು. ಅವರು ಪ್ರಜ್ಞೆಯನ್ನೂ ಕಳೆದುಕೊಂಡಿದ್ದರು. ಅವರ ತೆಲೆಗೆ ಪೆಟ್ಟುಬಿದ್ದಿತ್ತು. ಕೈ-ಕಾಲು ಕೂಡ ಮುರಿದಿತ್ತು. ಆಗ, ಆಕೆಯ ನೆರವಿಗೆ ಯಾರೂ ಬಾರದಿದ್ದರೆ, ಆಕೆ ಇಂದು ಬದುಕಿರುತ್ತಿರಲಿಲ್ಲ.
ಅದೃಷ್ಟವಶಾತ್ ಆಕೆಯ ನೆರವಿಗೆ ಮೊದಲು ಧಾವಿಸಿದ್ದು ಪುಟ್ಟ ಹಕ್ಕಿ ಜೆಲ್ಲಿಬೀನ್. ತಲೆಗೆ ಪೆಟ್ಟು ಬಿದ್ದು ಪ್ರಜ್ಞಾಹೀನರಾಗಿದ್ದ ಸ್ಯಾಂಡಿ ಗಿಲ್ಲಾರ್ಡ್ ಅವರು ಮರಳಿ ಪ್ರಜ್ಞಾಸ್ಥಿತಿಗೆ ಬರುವಂತೆ ಮಾಡಿದ್ದು ಜೆಲ್ಲಿಬೀನ್ ಹಕ್ಕಿ. ಸ್ಯಾಂಡಿ ಅವರು ಕಣ್ಣು ತೆರೆದು ನೋಡಿದಾಗ, ಆಕೆಯ ಹಣೆಯನ್ನು ಜೆಲ್ಲಿಬೀನ್ ಹಕ್ಕಿ ತಟ್ಟುನಿತ್ತು. ತನ್ನ ಕೊಕ್ಕಿನಿಂದ ಆಕೆಯನ್ನು ಎಬ್ಬಿಸಲು ಯತ್ನಿಸುತ್ತಿತ್ತು. ಹಕ್ಕಿಯ ನಿರಂತರ ತಟ್ಟುವಿಕೆ ಮತ್ತು ಮೃದು ಕರೆಯಿಂದ ಪ್ರಜ್ಞೆಗೆ ಮರಳಿದ ಸ್ಯಾಂಡಿ ಹೇಗೋ ತನ್ನ ಪತಿಗೆ ಕರೆ ಮಾಡಿದರು. ಬಳಿಕ, ಆ್ಯಂಬುಲೆನ್ಸ್‌ನಲ್ಲಿ ಆಕೆಯನ್ನು ಆಸ್ಪತ್ರೆಗೆ ರವಾನಿಸಲಾಯಿತು. ಸ್ವಲ್ಪ ತಡವಾಗಿದ್ದರೂ ಆಕೆ ಬದುಕುತ್ತಿರಲಿಲ್ಲವೆಂದು ಆಸ್ಪತ್ರೆಯಲ್ಲಿ ವೈದ್ಯರು ಹೇಳಿದರು. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆತಿದ್ದರ ಪರಿಣಾಮ ಸ್ಯಾಂಡಿ ಅವರು ಬದುಕುಳಿದಿದ್ದಾರೆ.
ಆಕೆಗೆ ಪ್ರಜ್ಞೆ ಮರಳಿ ಬರುವಲ್ಲಿ ಮತ್ತು ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯುವಲ್ಲಿ ಆ ಪುಟ್ಟ ಹಕ್ಕಿ ಜೆಲ್ಲಿಬೀನ್ ಮಾಡಿದ ಚಿಕ್ಕ ಪ್ರಯತ್ನವೇ ದೊಡ್ಡದು.
ಅಂದಹಾಗೆ, ಇದೇ ಜೆಲ್ಲಿಬೀನ್ ಹಕ್ಕಿಯನ್ನು ಘಟನೆಗೂ ಮುನ್ನ ಸ್ಯಾಂಡಿ ಅವರು ರಕ್ಷಿಸಿದ್ದರು. ಸ್ಯಾಂಡಿ ಅವರು ಪ್ರಾಣಿ-ಪಕ್ಷಿಗಳನ್ನು ಪೋಷಿಸುವ ಹವ್ಯಾಸ ಹೊಂದಿದ್ದರು. ಯಾವುದೋ ಸಂದರ್ಭದಲ್ಲಿ ಹಾರಲು ಸಾಧ್ಯವಾಗದೆ, ಒದ್ದಾಡುತ್ತಿದ್ದ ಜೆಲ್ಲಿಬೀನ್ಅನ್ನು ರಕ್ಷಿಸಿ, ತನ್ನ ಮನೆಗೆ ಕರೆ ತಂದು ಪೋಷಿಸಿದ್ದರು. ಜೆಲ್ಲಿಬೀನ್ ದೊಡ್ಡದಾದ ಬಳಿಕ ಅದನ್ನು ವಿಶಾಲ ಆಗಸದಲ್ಲಿ ಹಾರಲು ಬಿಟ್ಟಿದ್ದಾರೆ. ಆ ಪಕ್ಷಿ ತಮ್ಮೊಂದಿಗಿಲ್ಲ ಎಂಬ ಬೇಸರ ಸ್ಯಾಂಡಿ ಅವರಲ್ಲಿದ್ದರೂ, ಅದು ಸ್ವತಂತ್ರವಾಗಿ ಬದುಕುತ್ತಿದೆ ಎಂಬ ತೃಪ್ತಿ ಅವರಲ್ಲಿದೆ.