ಉದ್ಘಾಟನೆಗೊಂಡ ಕೆಲವೇ ಗಂಟೆಗಳಲ್ಲಿ ಖಲಿಸ್ತಾನಿ ಪ್ರತ್ಯೇಕವಾದಿಗಳು ಮಹಾತ್ಮ ಗಾಂಧಿ ಅವರ ವಿಗ್ರಹವನ್ನು ಧ್ವಂಸಗೊಳಿಸಿರುವ ಆಘಾತಕಾರಿ ಘಟನೆ ಇಟಲಿಯಲ್ಲಿ ನಡೆದಿದೆ. ವಿಗ್ರಹವಿದ್ದ ಸ್ಥಳದಲ್ಲಿ ಖಲಿಸ್ತಾನಿ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್ ಬಗ್ಗೆ ವಿವಾದಾತ್ಮಕ ಬರಹಗಳನ್ನು ಆರೋಪಿಗಳು ಬರೆದಿದ್ದಾರೆ.
ಘಟನೆಯ ನಡೆದ ಕೆಲವೇ ಹೊತ್ತಿನಲ್ಲಿ ಸ್ಥಳವನ್ನು ಸ್ವಚ್ಛಗೊಳಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಜಿ7 ಶೃಂಗಸಭೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಒಂದು ದಿನ ಬಾಕಿಯಿರುವಾಗ ಈ ಘಟನೆ ನಡೆದಿದೆ.
50ನೇ ಜಿ7 ಶೃಂಗಸಭೆ ಇಟಲಿಯ ಬೋರ್ಜೊ ಎಗ್ನಾಜಿಯಾದ ಐಷಾರಾಮಿ ರೆಸಾರ್ಟ್‌ನಲ್ಲಿ ಜೂನ್ 13ರಿಂದ 15ರವರೆಗೆ ನಡೆಯಲಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ
ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಅವರ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಯ ಅಪುಲಿಯಾಗೆ ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ನಾಳೆ ಆಗಮಿಸಲಿದ್ದಾರೆ.
ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸಗೊಂಡ ಬಗ್ಗೆ ಭಾರತದ ಅಧಿಕಾರಿಗಳು ಇಟಲಿಯ ಅಧಿಕಾರಿಗಳ ಬಳಿ ಚರ್ಚಿಸಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕ್ವಾತ್ರಾ ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಇದೇ ರೀತಿಯ ಘಟನೆ ಕೆನಡಾದಲ್ಲಿ ಸಂಭವಿಸಿತ್ತು. ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿನ ವಿವಿ ಕ್ಯಾಂಪಸ್‌ನಲ್ಲಿ ಖಲಿಸ್ತಾನಿ ಪ್ರತ್ಯೇಕವಾದಿಗಳು ಮಹಾತ್ಮ ಗಾಂಧಿಯ ವಿಗ್ರಹವನ್ನು ಧ್ವಂಸಗೊಳಿಸಿದ್ದರು.
