ನುಡಿ ನಮನ | ನೊಬೆಲ್ ಪುರಸ್ಕೃತ ಲ್ಯಾಟಿನ್ ಅಮೆರಿಕದ ಅಪ್ರತಿಮ ಬರಹಗಾರ ಯೋಸಾ

Date:

Advertisements
ಏ. 13ರಂದು ಇಲ್ಲವಾದ ಪೆರು ದೇಶದ ಹೆಮ್ಮೆಯ, ಸ್ಪ್ಯಾನಿಷ್ ಭಾಷೆಯ ಮಹತ್ವದ ಲೇಖಕ ಯೋಸಾ, ಮಾರ್ಕ್ವೆಜ್‌ ವಾರಿಗೆಯವನು. ನೊಬೆಲ್ ಪ್ರಶಸ್ತಿ ಪುರಸ್ಕೃತ ಯೋಸಾನ ಗ್ರಹಿಕೆ, ಬದುಕು, ಬರಹಗಳನ್ನು ಬಿಚ್ಚಿಡುವ ಅಪರೂಪದ ಸಂದರ್ಶನ... ಈದಿನ ಓದುಗರಿಗಾಗಿ  

2010ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಲ್ಯಾಟಿನ್ ಅಮೆರಿಕಾದ ಸ್ಪ್ಯಾನಿಷ್ ಭಾಷೆಯ ಮಹತ್ವದ ಲೇಖಕ ಮಾರಿಯೋ ಪಾರ್ಗಾಸ್ ಯೋಸಾ, 1982ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮತ್ತೊಬ್ಬ ಸ್ಪ್ಯಾನಿಷ್ ಲೇಖಕ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌ನ ವಾರಿಗೆಯವನು. ಇವರಿಬ್ಬರ ನಡುವಿನ ಸಂಬಂಧ, ಗೆಳೆತನ, ಗುದ್ದಾಟಗಳು ಸಾಹಿತ್ಯೇತರ ಕಾರಣಕ್ಕಾಗಿ ಹೆಸರುವಾಸಿಯಾದಂಥವುಗಳು. ಹಾಗೆಯೇ ತತ್ವ, ಸಿದ್ಧಾಂತಗಳಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಆಲೋಚಿಸುವಂಥವರು. ಮಾರ್ಕ್ವೆಜ್ ಎಡಪಂಥೀಯ ಆಲೋಚನೆಗಳಿಂದ ಬದುಕು ಮತ್ತು ಬರೆಹವನ್ನು ಧ್ಯಾನಿಸಿದರೆ, ಯೋಸಾ ಒಂದು ರೀತಿಯ ಉದಾರವಾದಿ ಬಲಪಂಥೀಯ ನಂಬಿಕೆಗಳೊಂದಿಗೆ ರಾಜಕೀಯ ಒಳಗೊಂಡಂತೆ ಬರೆಯುವ ಬದುಕಿಗೆ ಮುಖಾಮುಖಿಯಾದವನು.  

ಮಾರಿಯೋ ಪಾರ್ಗಾಸ್ ಯೋಸಾ(Mario Vargas Llosa) ಹುಟ್ಟಿದ್ದು 1936ರ ಮಾರ್ಚ್ 28ರಂದು ಪೆರುವಿನಲ್ಲಿ. ಅವನು ಹುಟ್ಟುವ ಸಮಯಕ್ಕೆ ಸರಿಯಾಗಿ ಅವನ ತಂದೆ ತಾಯಿಗಳ ನಡುವೆ ಹೊಂದಾಣಿಕೆಯ ಕೊರತೆಯಿಂದಾಗಿ ಅವರಿಬ್ಬರೂ ಬೇರ್ಪಟ್ಟಿದ್ದರು. ನಂತರ ಅವನು ತನ್ನ ಬಾಲ್ಯವನ್ನು ತಾಯಿಯ ಅಪ್ಪನ ಮನೆಯಲ್ಲಿ ಅಂದರೆ ಅಜ್ಜನ ಮನೆಯಲ್ಲಿ ಕಳೆಯುತ್ತಾನೆ. ಬೊಲಿವಿಯಾ ಮತ್ತು ಪೆರುವಿನ ಸ್ಕೂಲುಗಳಲ್ಲಿ ಪ್ರಾರಂಭವಾದ ಅವನ ವಿದ್ಯಾಭ್ಯಾಸ ಅಷ್ಟೇನೂ ಹೆಸರು ಮಾಡಿರದಿದ್ದ ಲಿಯೋನಿಸಿಯೋ ಪ್ರೆಡೋ ಮಿಲಿಟರಿ ಅಕಾಡೆಮಿಯಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿನ ಅನಿಷ್ಟ ನಡವಳಿಕೆಗಳನ್ನು ಯೋಸಾ ಮುಂದೆ ತನ್ನ ಕಾದಂಬರಿಗಳಲ್ಲಿ ಅನಾವರಣಗೊಳಿಸುತ್ತಾನೆ. 1953ರಲ್ಲಿ ಲಿಮಾದಲ್ಲಿನ ಸ್ಯಾನ್ ಮಾರ್ಕೋಸ್ ಯೂನಿವರ್ಸಿಟಿಗೆ ಸೇರಿದ ಅವನು ಯೂನಿವರ್ಸಿಟಿಯ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತಾನೆ. ಅದೇ ಹೊತ್ತಿನಲ್ಲಿ ಅವನು ಸುದ್ದಿ ಪ್ರಸಾರಕ, ಪತ್ರಿಕೋದ್ಯಮಿ ಮತ್ತು ಗ್ರಂಥಪಾಲಕ- ಹೀಗೆ ಹಲವಾರು ಅರೆಕಾಲಿಕ ಕೆಲಸಗಳನ್ನೂ ಮಾಡುತ್ತಾನೆ. ನಂತರ ಅಲ್ಲಿಂದ ಪ್ಯಾರಿಸ್‌ಗೆ ಹೋದ ಯೋಸಾ ಅಲ್ಲಿ ಅದೇ ತಾನೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಾಹಿತ್ಯ ಸಮುದಾಯವನ್ನು ಸೇರಿಕೊಳ್ಳುತ್ತಾನೆ.

1963ರಲ್ಲಿ ಪ್ರಕಟಗೊಂಡ ಯೋಸಾನ ಮೊದಲ ಕಾದಂಬರಿ, ‘ದ ಟೈಮ್ ಆಫ್ ದ ಹೀರೋ’, ಪ್ರೆಡೋ ಮಿಲಿಟರಿ ಅಕಾಡೆಮಿಯಲ್ಲಿ ಲೇಖಕನೇ ಖುದ್ದಾಗಿ ಕಂಡ, ಅನುಭವಿಸಿದ ಭ್ರಷ್ಟತೆಯ ಸೂಕ್ಷ್ಮ ವಿವರಗಳನ್ನು ತೆರೆದಿಡುತ್ತದೆ. ಇದರಿಂದ ಕೋಪಗೊಂಡ ಸ್ಕೂಲಿನ ಆಡಳಿತ ಮಂಡಳಿ ಕಾದಂಬರಿಯ ನೂರಾರು ಪ್ರತಿಗಳನ್ನು ಸುಟ್ಟು ಹಾಕಿಸುತ್ತದೆ. ಈ ಘಟನೆಯ ನಂತರ ಕಾದಂಬರಿ ಇದ್ದಕ್ಕಿದ್ದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿಬಿಡುತ್ತದೆ. ಯೋಸಾ ಈ ಖ್ಯಾತಿಗೆ ಅರ್ಹ ಎಂಬುದನ್ನು ಅವನ ಎರಡನೆಯ ಕಾದಂಬರಿ, ‘ದ ಗ್ರಿನ್ ಹೌಸ್’ ಸಾಬೀತುಪಡಿಸುತ್ತದೆ. ಈ ಕಾದಂಬರಿಗೆ 1967ರಲ್ಲಿ ವೆನಿಝುಲಾದ ಪ್ರತಿಷ್ಠಿತ ‘ರೊಮ್ಯುಲೋ ಗ್ಯಲೆಗೋಸ್’ ಪ್ರಶಸ್ತಿಗೆ ಪಾತ್ರವಾಗುತ್ತದೆ. ಆ ನಂತರ ಅದೇ ವರ್ಷ ಯೋಸಾ ‘ದ ಕಬ್ಸ್’ ಅನ್ನುವ ಕಾದಂಬರಿಯನ್ನು ಪ್ರಕಟಿಸುತ್ತಾನೆ. ಅದು ಬಾಲ್ಯದಿಂದ ಪ್ರೌಢಾವಸ್ಥೆವರೆಗಿನ ಸ್ಥಿತ್ಯಂತರದ ನಡುವಿನ ಕ್ರೂರ ಧಾರ್ಮಿಕ ವಿಧಿವಿಧಾನಗಳನ್ನು ಶೋಧಿಸುವ ಬಾಲಕನೊಬ್ಬನ ಕಥೆಯಾಗಿದೆ.

Advertisements

ಹೀಗೆ ಬರೆಯುತ್ತಾ ಹೊರಟ ಯೋಸಾನ ಬರವಣಿಗೆಯ ಧಾತುವನ್ನು ಕ್ರಮೇಣ ರಾಜಕೀಯ ಧ್ವನಿ ಆವರಿಸಿಕೊಳ್ಳತೊಡಗುತ್ತದೆ. ಪೆರುವಿನ ಸೈನ್ಯದ ಬಗೆಗಿನ ತೀವ್ರ ವಿಡಂಬನೆಯನ್ನು 1973ರಲ್ಲಿ ಪ್ರಕಟಗೊಂಡ ‘ಕ್ಯಾಪ್ಟನ್ ಪ್ಯಂಟೋಜಾ ಅಂಡ್ ದ ಸ್ಪೆಷಲ್ ಸರ್ವಿಸ್’ ಹಾಗೂ ಜನರಲ್ ಮ್ಯಾನ್ಯುಯೆಲ್ ಓಡ್ರಿಯಾಸ್‌ನ ದಮನಕಾರಿ ನಿರಂಕುಶ ಪ್ರಭುತ್ವದ ಚಿತ್ರಣವಿರುವ 1975ರಲ್ಲಿ ಪ್ರಕಟಗೊಂಡ ಅವನ ‘ಕಾನ್ವರ್ಸೇಷನ್ ಇನ್ ಕ್ಯಾಥಡ್ರಲ್’ ಕಾದಂಬರಿಗಳಲ್ಲಿ ಇದನ್ನು ಕಾಣಬಹುದು. ಅವನ ಐದನೆಯ ಕಾದಂಬರಿ, ‘ಆಂಟ್ ಜ್ಯೂಲಿಯಾ ಅಂಡ್ ದ ಸ್ಕ್ರಿಪ್ಟ್ ರೈಟರ್’ ಒಂದು ಪ್ರೇಮಕಥೆಯಾಗಿದ್ದು, ಅದು ವಾಸ್ತವ ಮತ್ತು ಕಲ್ಪನೆಗಳ ನಡುವಿನ ದಾರಿಯಲ್ಲಿ ಹರಿದಾಡುತ್ತದೆ.

ಯೋಸಾನಾ ಶ್ರೇಷ್ಠ ಕಾದಂಬರಿ ಅಂತ ಗುರುತಿಸಲ್ಪಡುವ ‘ದ ವಾರ್ ಆಫ್ ದ ಎಂಡ್ ಆಫ್ ದ ವರ್ಲ್ಡ್’ ಲ್ಯಾಟಿನ್ ಅಮೆರಿಕಾದ ಇತಿಹಾಸವನ್ನೂ ಹಾಗೂ ಪುರಾಣ ಕಥನ ನಿರೂಪಣೆಯನ್ನು ನಿರೂಪಿಸುತ್ತದೆ. ಇವನ ಇನ್ನಿತರ ಪ್ರಮುಖ ಕೃತಿಗಳೆಂದರೆ, ‘ದ ಪರ್ಪೆಚುಯಲ್ ಆರ್ಗಿ’, ‘ಹೂ ಕಿಲ್ಡ್ ಪ್ಯಲೋಮಿನೋ ಮೊಲೆರೋ?’, ‘ಇನ್ ಪ್ರೈಸ್ ಆಫ್ ಸ್ಟೆಪ್ ಮದರ್’, ‘ಮೇಕಿಂಗ್ ವೇವ್ಸ್’, ‘ದ ನೋಟ್ ಬುಕ್ಸ್ ಆಫ್ ಡಾನ್ ರಿಗೋಬರ್ಟೋ’, ‘ದ ಫೀಸ್ಟ್ ಆಫ್ ದ ಗೋಟ್’, ‘ಲೆರೈಸ್ ಟು ಯಂಗ್ ನಾವೆಲಿಸ್ಟ್’, ‘ದ ಲಾಂಗ್ವೇಜ್ ಆಫ್ ಪ್ಯಾಷನ್’, ‘ದ ವೇ ಟು ಪ್ಯಾರಡೈಸ್’.

ಸಂದರ್ಶನ

ಸಂದರ್ಶಕ: ಪ್ರಖ್ಯಾತ ಲೇಖಕರಾದ ನೀವು ನಿಮ್ಮ ಓದಿನ ಬಗ್ಗೆ ಸ್ವಲ್ಪ ಹೇಳ್ತೀರಾ?

ಯೋಸಾ: ಕಳೆದ ಕೆಲವು ವರ್ಷಗಳಿಂದ ಕುತೂಹಲ ಅನ್ನಬಹುದಾದ್ದು ಏನೋ ಆಗಿಬಿಟ್ಟಿದೆ. ಏಕೆಂದರೆ ನಾನು ನನ್ನ ವಾರಿಗೆಯವರ ಬರೆಹಗಳನ್ನು ಓದುವುದನ್ನು ಕಡಿಮೆ ಮಾಡಿದ್ದೇನೆ. ಬದಲಿಗೆ ನಮ್ಮ ಹಳೆಯ ಮಹತ್ವದ ಲೇಖಕರನ್ನು ಓದತೊಡಗಿದ್ದೇನೆ. ಅದೂ ಇತ್ತೀಚಿನ ದಿನಗಳಲ್ಲಿ, ನನ್ನ ಆಸಕ್ತಿ ಸಾಹಿತ್ಯದ ಕೃತಿಗಳಿಗಿಂತ ಇತಿಹಾಸದತ್ತ ಹೊರಳಿದೆ. ಜೊತೆಗೆ ನಾನು ಏನನ್ನ ಓದುತ್ತೇನೆ, ಯಾಕೆ ಓದುತ್ತೇನೆ ಅನ್ನುವುದರ ಬಗ್ಗೆ ನಾನು ಅಷ್ಟು ತಲೆ ಕೆಡಿಸಿಕೊಳ್ಳುವವನಲ್ಲ. ಕೆಲವೊಮ್ಮೆ ಅದು ನನ್ನ ವೃತ್ತಿಯ ಕಾರಣದಿಂದಲೂ ಹಾಗೆ ಆಗಿ ಬಿಡುತ್ತದೆ… ಅಲ್ಲದೆ ನೋಡಿ, ನೀವು ಹದಿನೈದು ವರ್ಷದವರೋ ಇಲ್ಲಾ ಹದಿನೆಂಟು ವರ್ಷದವರೋ ಆಗಿದ್ದಾಗ, ಈ ಲೋಕದ ಅಷ್ಟೂ ಸಮಯವೂ ನಿಮ್ಮದಾಗಿರುತ್ತದೆ ಅನ್ನುವ ಭಾವ ನಿಮ್ಮೊಳಗಾಡುತ್ತಿರುತ್ತದೆ. ಆದರೆ ಯಾವಾಗ ನಿಮ್ಮ ವಯಸ್ಸು ಐವತ್ತರ ಆಸುಪಾಸಿಗೆ ಹೋಗಿಬಿಡುತ್ತದೋ ಆಗ ನಿಮ್ಮ ಬದುಕಿನ ದಿನಗಳ ಲೆಕ್ಕ ಶುರುವಾಗಿಬಿಡುತ್ತದೆ. ಆಗ ನೀವು ಅನಿವಾರ್ಯವಾಗಿ ಆಯ್ಕೆಯ ಮೊರೆ ಹೋಗಬೇಕಾಗುತ್ತದೆ. ಬಹುಶಃ ಇದೇ ಕಾರಣಕ್ಕೆ ಇರಬಹುದು ನಾನು ನನ್ನ ವಾರಿಗೆಯವರನ್ನು ಹೆಚ್ಚು ಓದದೇ ಇರುವುದು.

651d9806bf0cd.r d.1551 925 3000

ಸಂದರ್ಶಕ: ಆದರೂ ನೀವು ಓದುವ ನಿಮ್ಮ ವಾರಿಗೆಯವರಲ್ಲಿ ಯಾರು ನಿಮಗೆ ಹೆಚ್ಚು ಇಷ್ಟ?

ಯೋಸಾ: ಚಿಕ್ಕವನಿದ್ದಾಗ ನಾನು ಸಾರ್ತ್ರೆಯನ್ನು ತುಂಬಾ ಹಚ್ಚಿಕೊಂಡಿದ್ದೆ. ಅಮೆರಿಕನ್ ಕಾದಂಬರಿಕಾರರಾದ ಫಾಕ್ನರ್, ಹೆಮಿಂಗ್ವೆ, ಫಿಟ್ಜೆರಾಲ್ಡ್ ಮುಂತಾದವರನ್ನು ಓದುತ್ತಿದ್ದೆ. ಅದರಲ್ಲೂ ಹೆಚ್ಚಾಗಿ ಫಾಕ್ನರ್‌ನನ್ನು ಓದುತ್ತಿದ್ದೆ. ನಾನು ಚಿಕ್ಕವನಾಗಿದ್ದಾಗ ಓದಿದ್ದ ಲೇಖಕರಲ್ಲಿ ಇಂದಿಗೂ ನನಗೆ ತುಂಬಾ ಮಹತ್ವ ಅನಿಸುತ್ತಿರುವವನು ಈ ಫಾಕ್ನರ್. ಮತ್ತೆ ಮತ್ತೆ ಓದಿದಾಗಲೂ ಎಂದೂ ನಿರಾಸೆಗೊಳಿಸದಿರುವವನು. ಅದೇ ರೀತಿ, ಕೆಲವೊಮ್ಮೆ ಹೆಮಿಂಗ್ವೆ ಕೂಡಾ. ಆದರೀಗ ನನಗೆ ಸಾರ್ತ್ರೆಯನ್ನು ಓದಲಾಗುವುದಿಲ್ಲ. ಅವನ ಕೆಲವೇ ಕೆಲವು ಬರೆಹಗಳನ್ನು ಬಿಟ್ಟರೆ ಉಳಿದವುಗಳು ತಮ್ಮ ಮಹತ್ವವನ್ನು ಕಳೆದುಕೊಂಡಿವೆ ಅನಿಸುತ್ತಿದೆ… ನಾನು ಕೈಯ್ಯಲ್ಲಿ ಪೆನ್ನು ಮತ್ತು ಪೇಪರ್ ಹಿಡಿದು ಓದಿದ ಮೊದಲ ಕಾದಂಬರಿಕಾರ ಈ ಫಾಕ್ನರ್. ಅವನದು ಮಂತ್ರಮುಗ್ಧಗೊಳಿಸುವ ನಿರೂಪಣಾ ತಂತ್ರ. ಅದೇರೀತಿ ನಾನು ಹತ್ತೊಂಭತ್ತನೆಯ ಶತಮಾನದ ಕಾದಂಬರಿಕಾರರಾದ ಬಾಲ್ಜಾಕ್, ದಾಸ್ತೋವಸ್ಕಿ, ಟಾಲ್ ಸ್ಟಾಯ್, ಹತಾರ್ನ್, ಡಿಕನ್ಸ್, ಮೆಲ್ವಿಲ್ ಮುಂತಾದವರನ್ನ ಈಗಲೂ ಓದುತ್ತೇನೆ. ಲ್ಯಾಟಿನ್ ಅಮೆರಿಕನ್ ಲೇಖಕರಲ್ಲಿ ನನ್ನ ಇಷ್ಟದ ಲೇಖಕನನ್ನು ಆಯ್ಕೆ ಮಾಡಲೇಬೇಕಾದ ಸಂದರ್ಭ ಬಂದರೆ ಅದು ನಿಸ್ಸಂಶಯವಾಗಿ, ಬೊರೇಸ್. ಏಕೆಂದರೆ ನನ್ನ ಪ್ರಕಾರ ಅವನು ಸೃಷ್ಟಿಸುವ ಲೋಕ, ಅವನು ಬಳಸುವ ಭಾಷೆ ಅತ್ಯಂತ ವಾಸ್ತವದ್ದು. ಬೋರೆಸ್ ನಮ್ಮ ಕಾಲದ ಬಲು ದೊಡ್ಡ ಲೇಖಕ.

ಸಂದರ್ಶಕ: ನಿಮ್ಮ ಮತ್ತು ಬೋರೆಸ್ ನಡುವಿನ ಸಂಬಂಧದ ಬಗ್ಗೆ ಹೇಳಿ.

ಯೋಸಾ: ನಾನು ಅವನನ್ನು ಮೊದಲು ನೋಡಿದ್ದು, ಅರವತ್ತರ ದಶಕದಲ್ಲಿ ನಾನು ಪ್ಯಾರಿಸ್‌ನಲ್ಲಿ ನೆಲೆಸಿದ್ದಾಗ. ಆಗ ಅವನು ಅಲ್ಲಿ ಸಾಹಿತ್ಯದ ಮೇಲಿನ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಲು ಬಂದಿದ್ದ. ನಂತರ ನಾನು ಆಗ ಕೆಲಸ ಮಾಡುತ್ತಿದ್ದ ‘ಆಫೀಸ್ ಡಿ ರೇಡಿಯೋ’ಗಾಗಿ ಅವನನ್ನು ಸಂದರ್ಶಿಸಿದ್ದೆ. ಅದಾದ ಮೇಲೆ ನಾನೂ ಅವನು ಬೇರೆ ಬೇರೆ ದೇಶಗಳಲ್ಲಿ ಸುಮಾರು ಸಲ ಭೇಟಿಯಾಗಿದ್ದೇವೆ. ಲಿಮಾದಲ್ಲಿ ಅವನಿಗಾಗಿ ನಾನೊಂದು ಔತಣಕೂಟವನ್ನು ಕೂಡಾ ಏರ್ಪಡಿಸಿದ್ದೆ… ಅವನು ನನ್ನ ಪುಸ್ತಕಗಳನ್ನು ಓದಿದ್ದ ಅಂತ ನನಗೆ ಅನ್ನಿಸುವುದಿಲ್ಲ. ಏಕೆಂದರೆ, ಅವನಿಗೆ ನಲವತ್ತು ತುಂಬಿದ ಮೇಲೆ, ಅವನು ಬದುಕಿರುವ ಯಾವೊಬ್ಬ ಲೇಖಕನನ್ನೂ ಓದುತ್ತಿರಲಿಲ್ಲ. ಆದರೂ ಲೇಖಕನಾಗಿ ಅವನ ಬಗ್ಗೆ ನನಗೆ ಇನ್ನಿಲ್ಲದ ಗೌರವವಿದೆ. ಅದೇ ರೀತಿ, ಪ್ಯಾಬ್ಲೋ ನೆರುಡಾ ಕೂಡಾ ಅತ್ಯದ್ಭುತ ಕವಿ. ಆಕ್ಟೇವಿಯಾ ಫಾಜ್ ಕೇವಲ ಬಲು ದೊಡ್ಡ ಕವಿ ಮಾತ್ರವಲ್ಲ, ಕಲೆ, ಸಾಹಿತ್ಯ ಮತ್ತು ರಾಜಕೀಯದ ಬಗ್ಗೆ ಸ್ಪಷ್ಟತೆ ಇದ್ದ ಲೇಖಕ. ಈಗಲೂ ನಾನವನನ್ನು ಖುಷಿಯಿಂದ ಓದುತ್ತೇನೆ.

ಸಂದರ್ಶಕ: ನೆರೂಡಾ ಕೂಡಾ ನಿಮ್ಮ ನೆಚ್ಚಿನ ಲೇಖಕ ಅಂತ ಹೇಳಿದಿರಿ. ನೀವು ಅವರ ಗೆಳೆಯ ಕೂಡಾ ಆಗಿದ್ದವರು. ಅವರ ಬಗ್ಗೆ…

ಯೋಸಾ: ನೆರೂಡಾ ಬದುಕನ್ನು ಬಹುವಾಗಿ ಪ್ರೀತಿಸಿದವನು. ಅವನಿಗೆ ಕಲೆ, ಚಿತ್ರ ಕಲೆ, ಊಟ, ಮದ್ಯ ಹೀಗೆ ಬದುಕಿನ ಎಲ್ಲದರಲ್ಲೂ ಇನ್ನಿಲ್ಲದ ಹುಚ್ಚು ಸೆಳೆತವಿತ್ತು. ತಿನ್ನುವುದು ಮತ್ತು ಕುಡಿಯುವುದು ಅವನಿಗೆ ಒಂಥರಾ ಅನುಭಾವೀ ಅನುಭವವಾಗಿತ್ತು. ನೆರೂಡಾ ಬೋರೆಸ್‌ಗೆ ತದ್ವಿರುದ್ಧ. ಕುಡಿತ, ಧೂಮಪಾನ ಮತ್ತು ಪ್ರೀತಿ ಇವುಗಳಲ್ಲಿ ಬೋರೆಸ್‌ಗೆ ಆಸಕ್ತಿ ಇರಲಿಲ್ಲ. ಅವನು ಅವುಗಳನ್ನೆಲ್ಲಾ ಪೂರಾ ಅನಗತ್ಯ ಸಂಗತಿಗಳು ಅಂತ ಭಾವಿಸಿದ್ದ.

ಸಂದರ್ಶಕ: ಮತ್ತೆ ಮಾರ್ಕ್ವೆಜ್ ಬಗ್ಗೆ?

ಯೋಸಾ: ನಾವಿಬ್ಬರೂ ಗೆಳೆಯರಾಗಿದ್ದವರು. ಬಾರ್ಸಿಲೋನಾದಲ್ಲಿ ನೆರೆಹೊರೆಯರಾಗಿದ್ದವರು. ನಂತರದ ದಿನಗಳಲ್ಲಿ ವೈಯಕ್ತಿಕ ಹಾಗೂ ರಾಜಕೀಯ ಕಾರಣಗಳಿಂದ ದೂರಾದವರು. ಆದರೆ ಈ ಬೇರ್ಪಡುವಿಕೆಗೆ ವೈಯಕ್ತಿಕ ಸಮಸ್ಯೆ ಕಾರಣವೇ ಹೊರತು, ತತ್ವ ಸಿದ್ಧಾಂತಗಳಲ್ಲ. ನನ್ನ ದೃಷ್ಟಿಯಲ್ಲಿ ಅವನ ಬರವಣಿಗೆ ಮತ್ತು ಅವನ ರಾಜಕೀಯ ನಂಬಿಕೆ, ಒಂದೇ ಮಟ್ಟದವುಗಳಲ್ಲ. ನನಗೆ ಅವನೊಬ್ಬ ಲೇಖಕನಾಗಿ ಬಹಳ ಗೌರವವಿದೆ. ಹಾಗಾಗಿಯೇ ಅವನ ಬರೆಹಗಳನ್ನು ಕುರಿತು ಸುಮಾರು ಆರು ನೂರು ಪುಟಗಳಷ್ಟಿರುವ ಪುಸ್ತಕವೊಂದನ್ನು ಬರೆದಿದ್ದೇನೆ. ಆದರೆ, ವೈಯಕ್ತಿಕವಾಗಿಯಾಗಲಿ, ಇಲ್ಲಾ ಅವನ ರಾಜಕೀಯ ನಂಬಿಕೆಗಳ ಬಗ್ಗೆಯಾಗಲಿ, ನನಗೆ ಅಂಥಾ ಗೌರವ ಇಲ್ಲ, ಅದೇರೀತಿ ತುಂಬಾ ಗಂಭೀರ ಅಂತ ಅನಿಸಿಯೂ ಇಲ್ಲ. ಅವುಗಳೆಲ್ಲಾ ಒಂದು ರೀತಿಯ ಅವಕಾಶವಾದಿ ಮತ್ತು ಪ್ರಚಾರಪ್ರಿಯ ಗುಣಗಳಿಂದ ಕೂಡಿವೆ ಅನ್ನುವುದು ನನ್ನ ಭಾವನೆ.

ಸಂದರ್ಶಕ: ಮೆಕ್ಸಿಕೋದಾ ಸಿನೆಮಾ ಥಿಯೇಟರ್ ಒಂದರಲ್ಲಿ ನೀವಿಬ್ಬರೂ ಅಕ್ಷರಶಃ ಹೊಡೆದಾಡಿದ್ದು ವೈಯಕ್ತಿಕ ಕಾರಣದಿಂದಾಗಿಯೇ?

ಯೋಸಾ: ಅಂಥದ್ದೊಂದು ಘಟನೆ ಮೆಕ್ಸಿಕೊದಲ್ಲಿ ನಡೆದದ್ದು ನಿಜ. ಅದರ ಬಗ್ಗೆ ಮಾತನಾಡಲು ನನಗೆ ಯಾವ ಮುಜುಗರವೂ ಇಲ್ಲ. ನಾನು ನನ್ನ ನೆನಪುಗಳನ್ನೋ ಇಲ್ಲಾ ಆತ್ಮಚರಿತ್ರೆಯನ್ನೋ ಬರೆದರೆ, ಬಹುಷಃ ಅಲ್ಲಿ ನಾನು ನಿಜವಾದ ಕಥೆ ಏನು ಅಂತ ಹೇಳಬಹುದು.

llosa2
ಮಾರ್ಕ್ವೆಜ್ ಮತ್ತು ಯೋಸಾ

ಸಂದರ್ಶಕ: ಕಾದಂಬರಿಗಳ ವಸ್ತುಗಳನ್ನು ನೀವೇ ಆರಿಸಿಕೊಳ್ಳುತ್ತೀರೋ ಅಥವಾ ಅವುಗಳೇ ನಿಮ್ಮನ್ನು ಆರಿಸಿಕೊಳ್ಳುತ್ತವೋ?

ಯೋಸಾ: ನನ್ನ ದೃಷ್ಟಿಯಲ್ಲಿ ಹೇಳೋದಾದರೆ, ವಸ್ತುಗಳೇ ಲೇಖಕನನ್ನು ಆರಿಸಿಕೊಳ್ಳುತ್ತವೆ ಅನ್ನುವ ನಂಬಿಕೆ ನನ್ನದು. ಕೆಲವು ಕಥೆಗಳು ಅವಾಗಿಯೇ ನನ್ನನ್ನು ಆವರಿಸಿಕೊಳ್ಳುತ್ತವೆ, ಅನ್ನುವ ಭಾವನೆಯವನು ನಾನು. ಆಗ ನಾನವುಗಳನ್ನು ಕಡೆಗಣಿಸಲಾಗುವುದಿಲ್ಲ. ನನಗೆ ಯಾವತ್ತೂ ತುಂಬಾ ವಿಚಾರಪರನಾಗಿಯೋ, ಇಲ್ಲಾ ಪೂರ್ವಾಲೋಚಿಸಿಯೋ, ಕಥೆಯೊಂದನ್ನು ಬರೆಯಲು ಕೂರಬೇಕು ಅಂತ ನನಗನಿಸಿಲ್ಲ. ಅದಕ್ಕೆ ಬದಲಾಗಿ, ಕೆಲವು ಸಂಗತಿಗಳು ಅಥವಾ ಜನರು, ಕೆಲವೊಮ್ಮೆ ಕೆಲವು ಕನಸುಗಳು ಅಥವಾ ಅಧ್ಯಯನಗಳು, ಅವಾಗಿಯೇ ಇದ್ದಕ್ಕಿದ್ದಂತೆ ನನ್ನ ಮೇಲೆ ಒತ್ತಡ ಹೇರುತ್ತವೆ.

ಸಂದರ್ಶಕ: ನಿಮ್ಮ ಬರೆಯುವ ಕ್ರಮದ ಬಗ್ಗೆ, ಕಾದಂಬರಿಯೊಂದು ನಿಮ್ಮೊಳಗೆ ಸೃಜಿಸುವ ಬಗ್ಗೆ ಕೊಂಚ ಹೇಳಿ.

ಯೋಸಾ: ಮೊಟ್ಟ ಮೊದಲಿಗೆ, ಅದು ಒಬ್ಬ ಮನುಷ್ಯನ ಬಗ್ಗೆ, ಒಂದು ಪರಿಸ್ಥಿತಿಯ ಬಗ್ಗೆ ಮನಸ್ಸಿನೊಳಗೇ ನಡೆಯುವಂಥ ಒಂದು ರೀತಿಯ ಧ್ಯಾನ, ಗಾಳಿಗೋಪುರ. ಆ ನಂತರ ನಾನು ಅವುಗಳ ಕಥನ ಕ್ರಿಯೆಯ ಕ್ರಮಾನುಗತಿಯ ಬಗ್ಗೆ ಟಿಪ್ಪಣಿಗಳನ್ನು ಮಾಡಿಕೊಳ್ಳತೊಡಗುತ್ತೇನೆ, ಆಗ ಯಾವುದೋ ಒಂದು ಪಾತ್ರ ಇಲ್ಲಿಗೆ ಪ್ರವೇಶಿಸುತ್ತದೆ, ಇದನ್ನು ಮಾಡುತ್ತದೆ, ಅದನ್ನು ಮಾಡುತ್ತದೆ, ಮತ್ತೆಲ್ಲಿಗೋ ನಿರ್ಗಮಿಸುತ್ತದೆ. ನಾನು ಕಾದಂಬರಿಯೊಂದನ್ನು ಬರೆಯಲು ಪ್ರಾರಂಭಿಸಿದಾಗ, ಅದರ ಹಂದರದ ಒಂದು ರೂಪುರೇಖೆಯನ್ನು ಮಾಡಿಕೊಳ್ಳುತ್ತೇನೆ. ಆದರೆ ಅದರ ಮೇಲೆಯೇ ಪೂರಾ ಅವಲಂಭಿಸುವುದಿಲ್ಲ. ಬರೆಯುತ್ತಾ ಹೋದಂತೆ ಅದು ಪೂರಾ ಬದಲಾಗುತ್ತಾ ಹೋಗುತ್ತದೆ. ಜೊತೆಗೆ ನಿರಾಳವಾಗಿ ಬರೆಯಲು ಅದು ನನಗೆ ಅನುವು ಮಾಡಿಕೊಡುತ್ತದೆ. ನಂತರ ಹಾಗೆ ಬರೆದದ್ದನ್ನೆಲ್ಲಾ ಒಟ್ಟಿಗೆ ಕೂಡಿಸಲು ಶುರುಮಾಡುತ್ತೇನೆ. ಕೊಂಚವೂ ಪೂರ್ವಗ್ರಹವಿಲ್ಲದ ಧೋರಣೆಯಲ್ಲಿ ಅದೇ ದೃಶ್ಯಗಳನ್ನ ಮತ್ತೆ ಮತ್ತೆ ಬರೆಯುತ್ತೇನೆ, ತಿದ್ದುತ್ತೇನೆ… ಆಗ ಮೊದಲಿದ್ದ ಸನ್ನಿವೇಶಗಳಿಗೆ ಸಂಪೂರ್ಣ ವ್ಯತಿರಿಕ್ತ ಸನ್ನಿವೇಶಗಳು ಸೃಷ್ಟಿಯಾಗಿಬಿಡುತ್ತವೆ… ನನಗನಿಸುತ್ತೆ, ನಾನು ಇಷ್ಟಪಡುವುದು ಕೇವಲ ಬರೆಯುವುದನ್ನಷ್ಟೇ ಅಲ್ಲ, ಬದಲಿಗೆ ಪರಿಷ್ಕರಿಸುವುದು. ಅದನ್ನ ಮತ್ತೆ ಮತ್ತೆ ತಿದ್ದೋದು, ಬೇಡದ್ದನ್ನ ಕೈಬಿಡೋದು, ಮತ್ತೆ ಸರಿ ಪಡಿಸೋದು… ನನ್ನ ಪ್ರಕಾರ ಅದು ಬರವಣಿಗೆಯ ಅತ್ಯಂತ ಸೃಜನಶೀಲ ಭಾಗ… ನನ್ನ ಕಾದಂಬರಿಗಳನ್ನು ಎಲ್ಲಿ ನಿಲ್ಲಿಸಬೇಕು, ಎಂದು ಮುಗಿಸಬೇಕು, ಅನ್ನೋದು ನನಗೆ ಯಾವತ್ತೂ ತಿಳಿಯುವುದಿಲ್ಲ. ಕೆಲವೇ ತಿಂಗಳುಗಳಲ್ಲಿ ಮುಗಿಸಬಹುದು ಅಂದುಕೊಂಡಿದ್ದು ಕೆಲವು ವರ್ಷಗಳನ್ನೇ ತೆಗೆದುಕೊಂಡು ಬಿಡುತ್ತೆ…

ಇದನ್ನು ಓದಿದ್ದೀರಾ?: ದಾದಾಜಿ ಖೋಬ್ರಗಡೆ: ಭತ್ತದ ಜೊತೆಗೆ ಬದುಕಿದ ಸಾಮಾಜಿಕ ಸಂತ

ಸಂದರ್ಶಕ: ನೀವು ನಿಮ್ಮ ಈ ನಿರ್ಧಾರಿತ ಕಠಿಣ ದಿನಚರಿಯನ್ನು ಯಾವತ್ತೂ ಮುರಿಯುವುದೇ ಇಲ್ಲವೆ?

ಯೋಸಾ: ಹೌದು ಮುರಿಯೊಲ್ಲ ಅನಿಸುತ್ತೆ. ಏಕೆಂದರೆ, ನನಗೆ ಬೇರೊಂದು ರೀತಿಯಲ್ಲಿ ಕೆಲಸ ಮಾಡೋದು ಗೊತ್ತಿಲ್ಲ. ಒಂದು ವೇಳೆ ನಾನು ಸ್ಪೂರ್ತಿಯ ಕ್ಷಣಗಳಿಗಾಗಿ ಕಾಯುತ್ತಾ ಕುಳಿತರೆ, ನನ್ನ ಪುಸ್ತಕ ಎಂದಿಗೂ ಮುಗಿಯುವುದೇ ಇಲ್ಲ. ಈ ಸ್ಪೂರ್ತಿ ಅನ್ನೋದು ನನಗೆ ಬರೋದೇ ನನ್ನ ನಿರಂತರ ಪ್ರಯತ್ನದಿಂದ.

ಸಂದರ್ಶಕ: ವಿಕ್ಟರ್ ಹ್ಯೂಗೋ ಥರದ ಲೇಖಕ ಸ್ಪೂರ್ತಿಯ ಮಾಂತ್ರಿಕ ಶಕ್ತಿಯನ್ನು ನಂಬಿದ್ದವನು. ಮಾರ್ಕ್ವೆಜ್ ಸುಮಾರು ವರ್ಷಗಳ ತಿಣುಕಾಟದ ನಂತರ ಅವನ ‘ಒನ್ ಹಂಡ್ರೆಡ್ ಇಯಸ್ ಆಫ್ ಸಾಲಿಟ್ಯುಡ್’ ಕಾದಂಬರಿ ಅಕಾಪುಲ್ಕೊಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹೊತ್ತಲ್ಲಿ ಅವನ ತಲೆಯೊಳಗೆ ಅದರಷ್ಟಕ್ಕದೇ ಬರೆದುಕೊಂಡು ಬಿಟ್ಟಿತ್ತು, ಅಂತ ಒಂದು ಕಡೆ ಹೇಳ್ತಾನೆ. ನೀವು ಈಗಷ್ಟೇ ಹೇಳಿದಿರಿ, ಸ್ಪೂರ್ತಿ ಅನ್ನುವುದು ಶಿಸ್ತಿನ ಉತ್ಪತ್ತಿ ಅಂತ. ಆದರೂ ಇಂಥ ಸ್ಪೂರ್ತಿಯ ಮಹಾನ್ ‘ಅರಿವು’ ನಿಮಗೆ ಎಂದಾದರೂ ಆಗಿದ್ದುಂಟಾ?

ಯೋಸಾ: ಹಾಗೆ ನನಗೆ ಯಾವತ್ತೂ ಆಗಿಲ್ಲ. ಅದೊಂದು ತುಂಬಾ ಮಂದಗತಿಯ ಪ್ರಕ್ರಿಯೆ. ಪ್ರಾರಂಭದಲ್ಲಿ ಒಂದು ರೀತಿಯ ಮಂಜಿನಂಥ ಮಸುಕು ಮಸುಕಾದ ಜಾಗರೂಕ, ಕುತೂಹಲದ ಸ್ಥಿತಿ. ಅಂತಹ ಮಂಜಿನ ಮಬ್ಬು ಮತ್ತು ಅಸ್ಪಷ್ಟತೆಯೊಳಗಿಂದ ನನ್ನ ಆಸಕ್ತಿ, ಕುತೂಹಲ ಮತ್ತು ಉದ್ವೇಗಗಳನ್ನು ಕೆರಳಿಸುವಂಥ ಏನೋ ಒಂದನ್ನು ನಾನು ಗ್ರಹಿಸುತ್ತೇನೆ. ನಂತರ ಅದಾಗಿಯೇ ಟಿಪ್ಪಣಿಗಳಾಗಿ, ಕಥಾಹಂದರವಾಗಿ, ಕೃತಿಗಿಳಿಯತೊಡಗುತ್ತದೆ. ನನಗದರ ರೂಪುರೇಖೆ ಸಿಕ್ಕಿ, ಸಂಗತಿಗಳನ್ನು ನಾನು ಒಪ್ಪಮಾಡತೊಡಗಿದಾಗ, ತುಂಬಾ ಕಲಸುಮೇಲೋಗರವಾಗಿರುವುದರ ಜೊತೆಗೆ, ಅಸ್ಪಷ್ಟತೆಯೊಂದು ಆಗಲೂ ಜೀವಂತವಾಗಿರುತ್ತದೆ. ಅಂಥ ‘ಅರಿವು’ ಕಾಣಿಸಿಕೊಳ್ಳುವುದು ಬರೆಯುವಂಥ ಘಟ್ಟದಲ್ಲಿ ಮಾತ್ರ. ಅದೊಂದು ತುಂಬಾ ಕಷ್ಟದ ಕೆಲಸ. ಹಾಗೆ ಬರೆಯುವ ಹಂತದಲ್ಲಿ ಕಥೆಯ ಕೇಂದ್ರ ನನಗೆ ದಕ್ಕಿದಾಗ, ಆಗ ಮತ್ತಿನ್ನೇನೋ ಆಗಿಬಿಡುತ್ತೆ. ಅದಕ್ಕೆ ಒಂದು ರೀತಿಯ ಜೀವ ಬಂದುಬಿಡುತ್ತೆ. ನಾನು ಅನುಭವಿಸುವ ಎಲ್ಲದೂ ನಾನು ಏನನ್ನ ಬರೆಯುತ್ತಿದ್ದೇನೆ ಅದಕ್ಕೆ ಸಂಬಂಧಿಸಿದ ಅನುಭವದಂತೆ ಮುಖ್ಯ ಅನಿಸತೊಡಗುತ್ತದೆ. ಆಗ ನಾನು ನೋಡುವ, ಕೇಳುವ, ಓದುವ ಎಲ್ಲದೂ ಒಂದಲ್ಲಾ ಒಂದು ರೀತಿಯಲ್ಲಿ ನನ್ನ ಬರವಣಿಗೆಗೆ ಸಹಕಾರಿಯಾಗಿಬಿಡುತ್ತದೆ.

Mario Vargas Llosa A Noble Award Winner Passed Away

ಸಂದರ್ಶಕ: ಸಾಹಿತ್ಯ, ಬರವಣಿಗೆ ನಿಮ್ಮನ್ನು ಶ್ರೀಮಂತನನ್ನಾಗಿಸದೆಯಾ?

ಯೋಸಾ: ಇಲ್ಲ, ನಾನು ಶ್ರೀಮಂತನಲ್ಲ. ಪೆರುವಿನಲ್ಲಿ ನೀವು ಕೆಲವು ವೃತ್ತಿಗಳಿಗೆ ಹೋಲಿಸಿ ನೋಡಿದರೆ ಸಾಹಿತ್ಯ ಕೃಷಿ ಇವತ್ತಿಗೂ ಕಡಿಮೆ ಆದಾಯದ ವೃತ್ತಿ.

ಸಂದರ್ಶಕ: ಒಮ್ಮೆ ನೀವು ಹೇಳಿದ್ರಿ, ಹೆಮಿಂಗ್ವೆ ಪುಸ್ತಕವೊಂದನ್ನು ಬರೆದು ಮುಗಿಸುತ್ತಿದ್ದಂತೆ ಒಂದು ರೀತಿಯ ಖಾಲಿತನವನ್ನು, ಒಂದು ರೀತಿಯ ಖಿನ್ನತೆಯನ್ನು ಮತ್ತು ಅದೇ ಹೊತ್ತಿನಲ್ಲಿ ಖುಷಿಯನ್ನು ಅನುಭವಿಸುತ್ತಿದ್ದ, ಅಂತ. ಅಂತಹ ಸಂದರ್ಭಗಳಲ್ಲಿ ನಿಮಗೆ ಏನನ್ನಿಸುತ್ತದೆ?

ಯೋಸಾ: ನನಗೂ ಹಾಗೇ ಅನ್ನಿಸುತ್ತದೆ. ನಾನೊಂದು ಕಾದಂಬರಿಯನ್ನು ಬರೆದು ಮುಗಿಸಿದಾಗ, ಒಂಥರಾ ಖಾಲಿತನ, ಹೇಳಿಕೊಳ್ಳಲಾಗದ ಒಂಥರಾ ಒಳಗುದಿಯನ್ನು ಅನುಭವಿಸುತ್ತೇನೆ. ಏಕೆಂದರೆ, ಆ ಕಾದಂಬರಿ ಆವರೆಗೂ ನನ್ನದೊಂದು ಭಾಗವಾಗಿ ಬಿಟ್ಟಿರುತ್ತದೆ. ಕುಡಿತದ ದಾಸನಾಗಿದ್ದವನು ಇದ್ದಕ್ಕಿದ್ದಂತೆ ಕುಡಿತವನ್ನು ಬಿಟ್ಟುಬಿಟ್ಟರೆ ಆಗುವಂತೆ, ಏನನ್ನೋ ಕಳೆದುಕೊಂಡಂತೆ ಭಾಸವಾಗತೊಡಗುತ್ತದೆ. ಅದಕ್ಕಿರುವ ಏಕೈಕ ಮದ್ದು ಅಂದರೆ ಚಕ್ಕನೆ ಮತ್ತೊಂದನ್ನು ಕೈಗೆತ್ತಿಕೊಳ್ಳುವುದು. ಹಾಗಾಗಿಯೇ ನಾನು ನನ್ನ ಹಿಂದಿನ ಪುಸ್ತಕ ಮತ್ತು ಮುಂದಿನ ಪುಸ್ತಕದ ನಡುವೆ ಅಂತಹ ಶೂನ್ಯ ಆವರಿಸಿಕೊಂಡು ಆಳಕ್ಕಿಳಿಯಲು ಬಿಡುವುದಿಲ್ಲ.

ಸಂದರ್ಶಕ: ನೀವು ಸುಮಾರು ಸಲ ಹೇಳಿದ್ದೀರಿ, ‘ದ ವಾರ್ ಆಫ್ ದ ಎಂಡ್ ಆಫ್ ದ ವರ್ಲ್ಡ್’, ನಿಮ್ಮ ಶ್ರೇಷ್ಠ ಕೃತಿ ಅಂತ. ನಿಮಗೆ ಈಗಲೂ ಹಾಗೇ ಅನ್ನಿಸುತ್ತಾ?

ಯೋಸಾ: ತುಂಬಾ ಪರಿಶ್ರಮದಿಂದ, ನಾಲ್ಕು ವರ್ಷಗಳ ಅವಧಿಯಲ್ಲಿ ಬರೆದ ಪುಸ್ತಕ ಇದು. ಅದಕ್ಕೋಸ್ಕರ ನಾನು ತುಂಬಾ ಓದಬೇಕಾಯ್ತು, ತುಂಬಾ ಸಂಶೋಧನೆ ಮಾಡಬೇಕಾಯ್ತು, ಅದೇ ರೀತಿ ವಿಚಿತ್ರ ಕಷ್ಟಗಳನ್ನೂ ಅನುಭವಿಸಬೇಕಾಯ್ತು. ಏಕೆಂದರೆ ಮೊದಲ ಬಾರಿಗೆ ನಾನು ನನ್ನದಲ್ಲದ ದೇಶದ ಬಗ್ಗೆ, ನನ್ನದಲ್ಲದ ಭಾಷೆ ಮಾತನಾಡುವ ಪಾತ್ರಗಳ ಬಗ್ಗೆ ಬರೆಯತೊಡಗಿದ್ದೆ. ಆದರೂ ಆ ಕಥೆಯಂತೆ ಬೇರಾವ ಕಥೆಯೂ ನನ್ನನ್ನು ಆ ಪರಿ ಕುತೂಹಲಗೊಳಿಸಿರಲಿಲ್ಲ. ಅದರ ವಸ್ತು ಕೂಡಾ ನಾನು ತುಂಬಾ ದಿನಗಳಿಂದಲೂ ಬರೆಯಬೇಕು ಅಂದುಕೊಂಡಿದ್ದ ಸಾಹಸಕಾರಿ ಕಾದಂಬರಿಯ ವಸ್ತುವಾಗಿದ್ದುದಲ್ಲದೆ, ಅದು ನನ್ನಿಂದ ಸಲೀಸಾಗಿ ಬರೆಸಿಕೊಂಡಿತು. ಅದರೊಳಗಿನ ಸಾಹಸ ಕೇವಲ ಕಾಲ್ಪನಿಕವಾದುದಾಗಿರದೆ, ಆಳವಾದ ಚಾರಿತ್ರಿಕ ಮತ್ತು ಸಾಮಾಜಿಕ ಸಂದಿಗ್ಧಗಳ ಜೊತೆ ತಳುಕು ಹಾಕಿಕೊಂಡಿತ್ತು. ನಾನದಕ್ಕೆ ಮಾಡಿಕೊಂಡಿದ್ದ ಟಿಪ್ಪಣಿ ಈಗಿರುವ ಅದರ ಗಾತ್ರದ ಎರಡರಷ್ಟಿತ್ತು. ನಿಜ ಹೇಳಬೇಕು ಅಂದರೆ, ಈ ಕಾದಂಬರಿಯ ವಸ್ತುವನ್ನು ಒಂದು ಸಿನೆಮಾ ಮಾಡುವ ಸಲುವಾಗಿ ಆರಿಸಿಕೊಂಡಿದ್ದು. ಅದಕ್ಕಾಗಿ ನಾನು ಸಿನೆಮಾ ಸಂಭಾಷಣೆಯನ್ನೂ ತಯಾರು ಮಾಡಿಕೊಂಡಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದಾಗಿ ಆ ಸಿನೆಮಾ ಶುರುವಾಗಲೇ ಇಲ್ಲ. ಅದರ ನಿರ್ದೇಶಕರಿಗೆ ಅದರಿಂದ ತುಂಬಾ ನಿರಾಶೆಯಾದರೂ, ಅದರ ಕುತೂಹಲಕಾರಿಯಾದ ವಸ್ತು ನನ್ನನ್ನು ಸೇಳೆಯುತ್ತಲೇ ಇತ್ತು. ಹಾಗಾಗಿ, ನಾನು ಮಾಡಿಕೊಂಡಿದ್ದ ಟಿಪ್ಪಣಿಗಳನ್ನು ಮತ್ತೆ ಓದತೊಡಗಿದೆ, ಸಂಶೋಧನೆಗಳನ್ನು ಮುಂದುವರೆಸಿದೆ. ದಿನಕ್ಕೆ ಏನಿಲ್ಲಾ ಅಂದರೂ ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ಕೂತು ಬರೆಯತೊಡಗಿದೆ. ಪುಸ್ತಕ ಹೊರಬಂದ ಮೇಲೆ ಇದರ ಬಗ್ಗೆ ಕೆಲವು ಪ್ರತಿಕೂಲ ವಿಮರ್ಶೆಗಳು ಬಂದವು. ಆದರೂ ಜನ ಇದನ್ನು ತುಂಬಾ ಪ್ರೀತಿಯಿಂದ ಸ್ವೀಕರಿಸಿದರು.

ಸಂದರ್ಶಕ: ‘ಮ್ಯಯ್ತಾ’ ಮತ್ತು ‘ದ ವಾರ್ ಆಫ್ ದ ಎಂಡ್ ಆಫ್ ದ ವರ್ಲ್ಡ್’ಗಳನ್ನು ಸತ್ಯ ಮತ್ತು ವಾಸ್ತವವನ್ನು ಆಧರಿಸಿಯೇ ಬರೆದದ್ದು, ಅಂತ ಹೇಳಿದ್ದೀರಿ. ಇದನ್ನ ಕೊಂಚ ವಿವರಿಸುತ್ತೀರಾ?

ಯೋಸಾ: ಸಂಯೋಜನೆಯ ಸಲುವಾಗಿ ನಾನು ಸದಾ ಪಕ್ಕಾ ವಾಸ್ತವದೊಂದಿಗೆ ಪ್ರಾರಂಭಿಸುತ್ತೇನೆ. ಇದು ಎಲ್ಲಾ ಕಾದಂಬರಿಕಾರರಿಗೂ ಅನ್ವಯಿಸುತ್ತೆ ಅಂತ ಹೇಳಲಾರೆ. ಆದರೆ ನನಗೆ ಸದಾ ವಾಸ್ತವದ ರಕ್ಷಾ ಚೌಕಟ್ಟಿನ ಅಗತ್ಯವಿದೆ. ಆ ಕಾರಣಕ್ಕಾಗಿಯೇ ಕಾದಂಬರಿಯ ಕ್ರಿಯೆ ನಡೆಯುವ ಸ್ಥಳಕ್ಕೆ ಹೋಗುತ್ತೇನೆ ಮತ್ತು ಸಂಶೋಧಿಸುತ್ತೇನೆ. ಅದರ ಅರ್ಥ ಕೇವಲ ವಾಸ್ತವವನ್ನು ಮರು ಹಾಜರುಪಡಿಸುತ್ತೀನಿ ಅಂತ ಅಲ್ಲ. ಅದು ಸಾಧ್ಯವಿಲ್ಲ ಅಂತ ನನಗೆ ಗೊತ್ತು. ಒಂದು ಪಕ್ಷ ನಾನು ಹಾಗೆ ಮಾಡಲು ಯತ್ನಿಸಿದರೂ ಅದರ ಪರಿಣಾಮ ಕೆಟ್ಟದಾಗಿರುತ್ತದೆ.

ಸಂದರ್ಶಕ: ‘ಆಂಟ್ ಜುಲಿಯಾ ಅಂಡ್ ದ ಸ್ಕ್ರಿಪ್ಟ್ ರೈಟರ್’ದಲ್ಲಿ ಬರುವ ಪೆಡ್ರೊನ ಪಾತ್ರ ನಿಮಗೆ ಎಲ್ಲಿ ಸಿಕ್ಕಿದ್ದು?

ಯೋಸಾ: ನಾನು ಲಿಮಾದಲ್ಲಿ ರೇಡಿಯೊ ಸೆಂಟ್ರಲ್‌ಗಾಗಿ ಕೆಲಸ ಮಾಡುತ್ತಿದ್ದ ಹೊತ್ತಲ್ಲಿ, ಅದಕ್ಕೆ ರೇಡಿಯೊ ಸೀರಿಯಲ್‌ಗಳನ್ನು ಬರೆಯುವವನೊಬ್ಬನ ಪರಿಚಯವಾಗಿತ್ತು. ಅವನು ತಾನು ಏನು ಬರೆದಿದ್ದೇನೆ ಅನ್ನುವುದರ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲದವನಂತೆ, ಒಂದು ರೀತಿಯಲ್ಲಿ ಸ್ಕ್ರಿಪ್ಟ್ ರೈಟಿಂಗ್ ಯಂತ್ರದಂತೆ ಅಸಂಖ್ಯ ಎಪಿಸೋಡ್‌ಗಳನ್ನು ಬರೆಯುತ್ತಿದ್ದ. ನಾನು ಸಂಪೂರ್ಣ ಅವನ ಮೋಡಿಗೊಳಗಾದೆ. ಏಕೆಂದರೆ ಆವರೆಗೂ ಅಂತಹ ಪಕ್ಕಾ ಪ್ರೊಫೆಷನಲ್ ವ್ಯಕ್ತಿಯನ್ನು ನಾನು ಕಂಡಿರಲೇ ಇಲ್ಲ. ಹಾಗಾಗಿ ಅವನು ನನ್ನ ಈ ಕಾದಂಬರಿಯ ಪೆಡ್ರೊ ಪಾತ್ರವಾಗಿ ಹೋದ.

fotonoticia 20110604234242 690

ಸಂದರ್ಶಕ: ಇತ್ತೀಚಿನ ವರ್ಷಗಳಲ್ಲಿ ಪ್ರಕಟಗೊಂಡ ಕೆಲವು ಲೇಖನಗಳಲ್ಲಿ ನೀವು ತುಂಬಾ ನಿರಾಶಾದಾಯಕವಾಗಿ ತೋರುವಂಥ ಹಲವು ಪ್ರತಿಪಾದನೆಗಳನ್ನು ಮಾಡಿದ್ದೀರಿ. ಉದಾಹರಣೆಗೆ ಒಂದು ಲೇಖನದಲ್ಲಿ ನೀವು ಬರೆದಿದ್ದೀರಿ, ‘ರಾಜಕಾರಣಕ್ಕಿಂತ ಸಾಹಿತ್ಯ ತುಂಬಾ ಮುಖ್ಯವಾದದ್ದು. ರಾಜಕೀಯದಲ್ಲಿನ ಅಪಾಯಕಾರಿ ಯೋಜನೆಗಳನ್ನು ವಿರೋಧಿಸುವ ಮತ್ತು ಅವುಗಳನ್ನು ಹದ್ದುಬಸ್ತಿನಲ್ಲಿಡುವ ಸಲುವಾಗಿ ಮಾತ್ರ, ಲೇಖಕರು ರಾಜಕೀಯಕ್ಕೆ ಹೋಗಬೇಕು’. ಈ ನಿಲುವು ರಾಜಕಾರಣ ಪ್ರಗತಿಯ ಹರಿಕಾರನಾಗಬಲ್ಲದು ಎಂಬುದಕ್ಕೆ ನಿರಾಶಾದಾಯಕ ದೃಷ್ಟಿಕೋನವಾಗುವುದಿಲ್ಲವೆ?

ಯೋಸಾ: ಇಲ್ಲ. ನನ್ನ ಮಾತಿನ ಅರ್ಥ, ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗುವುದಿಲ್ಲವೋ, ಅದನ್ನ ಸಾಹಿತ್ಯ ಮಾಡಬೇಕು ಅನ್ನುವುದಾಗಿದೆ. ಆದರೆ ಲೇಖಕನೊಬ್ಬ, ಲೇಖಕನಾಗಿ ಸೋಲದೆ ಇಲ್ಲವೆ ರಾಜಕಾರಣಿಯಾಗಿ ಸೋಲದ ಹೊರತು, ಸಾಹಿತ್ಯ ಮತ್ತು ರಾಜಕಾರಣದ ಜೊತೆ ಒಟ್ಟಿಗೇ ದೇಗಲಾರ. ರಾಜಕೀಯ ಕ್ರಿಯೆ ಅಲ್ಪಾಯುಷ್ಯದ್ದು, ಆದರೆ ಸಾಹಿತ್ಯಕ್ಕೆ ಈ ಮಾತು ಅನ್ವಯಿಸುವುದಿಲ್ಲ, ಅನ್ನುವುದು ನಮ್ಮ ಗಮನದಲ್ಲಿರಬೇಕು. ನೀನು ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕವನ್ನು ಬರೆಯುವುದಿಲ್ಲ… ಕಾಲ ತನ್ನ ಪಾತ್ರವನ್ನು ನಿರ್ವಹಿಸಲೇಬೇಕು… ಸಂಕೀರ್ಣ ಸಮಸ್ಯೆಗಳಿರುವಂಥ, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳಿಗೆ ಆಗಾಗ ನಾಟಕೀಯ ದೃಷ್ಟಿಕೋನ ಬಂದುಬಿಡುವ, ಅದರಲ್ಲೂ ನಮ್ಮಂಥ ದೇಶದಲ್ಲಿ, ಲೇಖಕನೊಬ್ಬ ರಾಜಕೀಯದಲ್ಲಿ ತೊಡಗಿಸಿಕೊಳ್ಳದೆ ವಿಧಿಯಿಲ್ಲ, ಅನ್ನುವುದು ನನ್ನ ನಂಬಿಕೆ. ಟೀಕಿಸುವ ಮೂಲಕವೋ, ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ, ಒಂದಲ್ಲಾ ಒಂದು ವಿಧದಲ್ಲಿ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ನಾವೆಲ್ಲಾ ಯಾವುದು ನಮ್ಮನ್ನು ಆಳಬೇಕು ಅಂತ ಬಯಸುತ್ತೇವೆಯೋ ಅಂತಹ ಆ ನ್ಯಾಯ, ಸ್ವಾತಂತ್ರ್ಯದಿಂದ ಎಂದಿಗೂ ಪ್ರತ್ಯೇಕಿಸಲ್ಪಡಕೂಡದು. ಸಾಮಾಜಿಕ ನ್ಯಾಯ ಅಥವಾ ರಾಷ್ಟ್ರೀಯ ಭದ್ರತೆ ಹೆಸರಿನಲ್ಲಿ, ತೀವ್ರ ಎಡಪಂಥೀಯ ಸರ್ವಾಧಿಕಾರಿಗಳು ಮತ್ತು ತೀವ್ರ ಬಲಪಂಥೀಯ ಪ್ರತಿಗಾಮಿಗಳು ಮಾಡುವಂಥದ್ದಕ್ಕೆ, ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯವನ್ನು ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಜಗ್ಗಕೂಡದು. ಕೆಲಸದ ಹಕ್ಕಿನಂತೆ ಅಥವಾ ಒಳ್ಳೆಯ ಸಂಬಳದಂತೆ, ಲೇಖಕರು ಸ್ವಾತಂತ್ರ್ಯವನ್ನು ಒಂದು ಅಗತ್ಯದಂತೆ ಕಾಪಾಡಿಕೊಳ್ಳಬೇಕು.

ಸಂದರ್ಶಕ: ನಾನು ಕೇಳಿದ್ದು ನಿಮ್ಮ ಲೇಖನದಲ್ಲಿನ ನಿರಾಶಾದಾಯಕ ದೃಷ್ಟಿಕೋನದ ಬಗ್ಗೆ. ಅನ್ಯಾಯದ ವಿರುದ್ಧದ ತಮ್ಮ ಪ್ರತಿರೋಧವನ್ನು ಲೇಖಕರು ಒಂದು ಮಿತಿಯಲ್ಲಿಟ್ಟುಕೊಳ್ಳಬೇಕೆ ಅಥವಾ ಅವರುಗಳು ಇಟ್ಟುಕೊಳ್ಳಬಲ್ಲರೆ?

ಯೋಸಾ: ರಾಜಕಾರಣದಲ್ಲಿ ಲೇಖಕರ ಒಳಗೊಳ್ಳುವಿಕೆ, ಮಧ್ಯಪ್ರವೇಶಿಕೆ ಹಾಗೂ ತೀರ್ಪುಕೊಡುವಿಕೆ, ಮುಖ್ಯ ಅಂತ ನಾನು ಭಾವಿಸಿದ್ದೇನೆ. ಆದರೆ ರಾಜಕಾರಣಕ್ಕೆ ಅವರುಗಳ ಸಾಹಿತ್ಯಿಕ ವಾತಾವರಣವನ್ನು, ಅವರುಗಳ ಸೃಜನಶೀಲ ಪರಮಾಧಿಕಾರಕ್ಕೆ ಧಕ್ಕೆ ಮಾಡಲು ಆಸ್ಪದ ಕೊಡದಂತೆ ಎಚ್ಚರ ಕೂಡಾ ವಹಿಸಬೇಕಾಗುತ್ತದೆ. ಹಾಗೇನಾದರೂ ಆಗಿದ್ದೇ ಆದಲ್ಲಿ, ಅದು ಲೇಖಕನನ್ನು ಇಲ್ಲದಂತೆ ಮಾಡಿಬಿಡುತ್ತದೆ. ಆದುದರಿಂದ, ಲೇಖಕನೊಬ್ಬ ತನ್ನ ಅಭಿಪ್ರಾಯವನ್ನು ಮಂಡಿಸುವ ಕರ್ತವ್ಯದಿಂದ ವಿಮುಖನಾಗದೆ ಅಥವಾ ಬತ್ತಲಾಗದೆ, ತನ್ನ ರಾಜಕೀಯ ಚಟುವಟಿಕೆಗಳನ್ನು ಒಂದು ಮಿತಿಯಲ್ಲಿಟ್ಟುಕೊಳ್ಳುವುದು, ನಿರ್ಣಾಯಕವಾದದ್ದಾಗಿರುತ್ತದೆ.

ಇದನ್ನು ಓದಿದ್ದೀರಾ?: ದಾದಾಜಿ ಖೋಬ್ರಗಡೆ: ಭತ್ತದ ಜೊತೆಗೆ ಬದುಕಿದ ಸಾಮಾಜಿಕ ಸಂತ

ಸಂದರ್ಶಕ: ರಾಜಕಾರಣದ ಬಗ್ಗೆ ಬಲು ದೊಡ್ಡ ಅಪನಂಬಿಕೆಯನ್ನು ಇಟ್ಟುಕೊಂಡಿದ್ದ ಲೇಖಕನೊಬ್ಬ, ಅಂದರೆ ನೀವು, ಇದ್ದಕ್ಕಿದ್ದಂತೆ 1990ರ ಚುನಾವಣೆಯಲ್ಲಿ ಪೆರುವಿನ ರಾಷ್ಟ್ರಾಧ್ಯಕ್ಷರ ಸ್ಥಾನಕ್ಕೆ ಅಭ್ಯಥಿಯಾಗುವುದು, ಎಷ್ಟು ಸರಿ?

ಯೋಸಾ: ಪೆರುವಿನ ಇಂದಿನ ಸ್ಥಿತಿ ಮಹಾ ದುರಂತದಲ್ಲಿದೆ. ಆರ್ಥಿಕತೆ ಇನ್ನಿಲ್ಲದಂತೆ ಕುಸಿಯುತ್ತಿದೆ. ಹಣದುಬ್ಬರ ದಾಖಲೆಯ ಮಟ್ಟ ಮುಟ್ಟಿದೆ. ಜನರ ಕೊಳ್ಳುವ ಶಕ್ತಿ ಅರ್ಧದಷ್ಟು ಕುಗ್ಗಿದೆ. ರಾಜಕೀಯ ಹಿಂಸೆ ಮಿತಿ ಮೀರಿದೆ. ಹಾಗಾಗಿ, ತುಂಬಾ ಹಿಂದಿನಿಂದ ನಾವು ಯಾವುದಕ್ಕಾಗಿ ಹೋರಾಡುತ್ತಾ ಬಂದಿದ್ದೇವೆಯೋ, ಅಂಥದ್ದರ ಪುನರ್ ಸ್ವಾಧೀನದ ಅವಕಾಶದೆದುರು ಕೈಚೆಲ್ಲಿ ಕೂರಬಾರದು. ಇಂಥ ಅನೇಕ ಕಾರಣಗಳು ರಾಜಕಾರಣದ ಬಗ್ಗೆ ನಾನು ಕಾಪಿಟ್ಟುಕೊಂಡಿದ್ದ ಎಲ್ಲಾ ನಂಬಿಕೆಗಳನ್ನೂ ಹಿಂದಿಕ್ಕಿ, ರಾಜಕೀಯ ಹೋರಾಟಕ್ಕೆ ನನ್ನನ್ನು ಅಣಿಗೊಳಿಸಿದ್ದವು. ಅಷ್ಟಕ್ಕೂ, ಅದೊಂದು ತುಂಬಾ ನಿಷ್ಕಪಟ ಭ್ರಮೆ.

ಸಂದರ್ಶಕ: ಲೇಖಕರಾಗಿ ನಿಮ್ಮ ಬಲು ದೊಡ್ಡ ಶಕ್ತಿ ಮತ್ತು ದೌರ್ಬಲ್ಯಗಳೇನು?

ಯೋಸಾ: ಪಟ್ಟಾಗಿ ಹಿಡಿದು ಕೆಲಸ ಮಾಡೋದು, ನನ್ನ ಬಲು ದೊಡ್ಡ ಶಕ್ತಿ ಅಂತ ನಂಬಿದ್ದೇನೆ. ನನ್ನಿಂದ ಏನು ಸಾಧ್ಯ ಅಂತ ನಾನು ಅಂದುಕೊಂಡಿರುತ್ತೇನೆ, ಅದಕ್ಕಿಂತಲೂ ಹೆಚ್ಚು ಕೆಲಸ ಮಾಡುವ ಸಾಮರ್ಥ್ಯ ನನಗಿದೆ. ನನ್ನನ್ನು ಇನ್ನಿಲ್ಲದಂತೆ ಹಿಂಸಿಸುವ ಆತ್ಮವಿಶ್ವಾಸದ ಕೊರತೆ, ನನ್ನ ಬಲು ದೊಡ್ಡ ದೌರ್ಬಲ್ಯ. ಹಾಗಾಗಿ, ಒಂದು ಕಾದಂಬರಿಯನ್ನು ಮುಗಿಸಲು ಮೂರು ಅಥವಾ ನಾಲ್ಕು ವರ್ಷ ಹಿಡಿದು ಬಿಡುವುದಲ್ಲದೆ, ನನ್ನ ಬಹಳಷ್ಟು ಒಳ್ಳೆಯ ಸಮಯವನ್ನು ಅನುಮಾನದಲ್ಲೇ ಕಳೆಯುವಂತೆ ಮಾಡಿಬಿಡುತ್ತೆ. ಅದು ಕಾಲದ ಜೊತೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಆಗ ನನ್ನೊಳಗೆ ಹೆಚ್ಚು ಸ್ವವಿಮರ್ಶೆ ಮತ್ತು ಭರವಸೆಯ ಕೊರತೆ ಬೆಳೆಯತೊಡಗುತ್ತದೆ. ಅದಕ್ಕೇ ಇರಬೇಕು ನಾನು ನಿರರ್ಥಕನಾಗದೇ ಇರೋದು, ಒಂದು ಮುಗಿಯುತ್ತಿದ್ದಂತೆಯೇ ಮತ್ತೊಂದಕ್ಕೆ ಮುಗಿಬೀಳುವುದು. ನನ್ನ ಅಂತಸ್ಸಾಕ್ಷಿ ತುಂಬಾ ಗಡಸಾದ್ದು. ಸಾಯುವ ಕೊನೆಯ ದಿನದವರೆಗೂ ನಾನು ಬರೆಯಬಲ್ಲೆ ಅನ್ನೋದು ನನಗೆ ಗೊತ್ತು. ಬರವಣಿಗೆಯೇ ನನ್ನ ಧರ್ಮ. ಬರವಣಿಗೆಯಂತೆಯೇ ನನ್ನ ಬದುಕು. ಬರೆಯಲಾಗದೇ ಹೋದಲ್ಲಿ, ನನ್ನ ತಲೆ ಸಿಡಿದು ಹೋಳಾಗುವುದರಲ್ಲಿ ಅನುಮಾನವಿಲ್ಲ. ಇನ್ನೂ ಒಂದಷ್ಟು ಒಳ್ಳೆಯ ಪುಸ್ತಕಗಳನ್ನು ಬರೆಯಬೇಕೆಂಬ ಹಂಬಲ ನನ್ನದು. ಈಗಾಗಲೇ ನಾನು ಅನುಭವಿಸಿರುವ ಅತ್ಯಂತ ಕುತೂಹಲ ಮತ್ತು ಅತ್ಯದ್ಭುತ ಸಾಹಸಗಳನ್ನು ಮತ್ತೆ ಇದಿರುಗಾಣುವ ಆಸೆ. ನನ್ನ ಒಳ್ಳೆಯ ದಿನಗಳು ನನ್ನ ಹಿಂದಿವೆ ಅನ್ನುವ ಸಾಧ್ಯತೆಯನ್ನು ನಾನು ಒಪ್ಪಿಕೊಳ್ಳುವುದಿಲ್ಲ.

llosa1

ಸಂದರ್ಶಕ: ನೀವು ಯಾಕಾಗಿ ಬರೆಯುತ್ತೀರಾ?

ಯೋಸಾ: ಸಂತೋಷವಿರದ ಕಾರಣಕ್ಕಾಗಿ ಬರೆಯುತ್ತೇನೆ. ಅದು ಅಂತಹ ಅಸಂತೋಷದ ವಿರುದ್ಧ ಸೆಣೆಸಾಡುವ ಮಾರ್ಗ ಅನ್ನುವ ಕಾರಣಕ್ಕಾಗಿ ಬರೆಯುತ್ತೇನೆ.                              

(ರಿಕ್ಯಾರ್ಡೋ ಅಗಸ್ಟೋ ಸೇಟ್ಟಿ, ‘ದ ಪ್ಯಾರಿಸ್ ರಿವ್ಯೂ’ಗಾಗಿ ಮಾಡಿದ ಸಂದರ್ಶನದ ಆಯ್ದ ಭಾಗ)

ಎಸ್. ಗಂಗಾಧರಯ್ಯ
ಎಸ್. ಗಂಗಾಧರಯ್ಯ
+ posts

ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ. ಉಪನ್ಯಾಸಕರಾಗಿ ಸೇವೆ. ಪ್ರಕಟಿತ ಕೃತಿಗಳು- ನವಿಲ ನೆಲ, ಒಂದು ಉದ್ದನೆಯ ನೆರಳು, ಬಯಲ ಪರಿಮಳ. ವೈಕಂ ಅವರ ಕಥೆಗಳು, ಲೋರ್ಕಾ ನಾಟಕ- ಎರ್‍ಮಾ, ವಿವಿಧ ಲೇಖಕರ ಕತೆಗಳು, ದಾರಿಯೋ ಫೋ ನಾಟಕ, ಚಿಂಗೀಝ್ ಐತ್ಮತೋವ್ ಕಾದಂಬರಿ ಜಮೀಲಾ, ಇವುಗಳನ್ನು ಕನ್ನಡೀಕರಿಸಿದ್ದಾರೆ. ವೈಕಂ ಕಥೆಗಳು ಕೃತಿಗೆ 1996ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. ಕುವೆಂಪು ಭಾಷಾಭಾರತಿಗಾಗಿ ಆಫ್ರಿಕನ್ ಸಾಹಿತ್ಯವಾಚಿಕೆ ಮತ್ತು ಲೋಹಿಯಾ-ಜಗಜೀವನರಾಂ ಸಮಗ್ರ ಕೃತಿಗಳಿಗಾಗಿ ಲೇಖನಗಳ ಅನುವಾದ ಮಾಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಎಸ್. ಗಂಗಾಧರಯ್ಯ
ಎಸ್. ಗಂಗಾಧರಯ್ಯ
ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ. ಉಪನ್ಯಾಸಕರಾಗಿ ಸೇವೆ. ಪ್ರಕಟಿತ ಕೃತಿಗಳು- ನವಿಲ ನೆಲ, ಒಂದು ಉದ್ದನೆಯ ನೆರಳು, ಬಯಲ ಪರಿಮಳ. ವೈಕಂ ಅವರ ಕಥೆಗಳು, ಲೋರ್ಕಾ ನಾಟಕ- ಎರ್‍ಮಾ, ವಿವಿಧ ಲೇಖಕರ ಕತೆಗಳು, ದಾರಿಯೋ ಫೋ ನಾಟಕ, ಚಿಂಗೀಝ್ ಐತ್ಮತೋವ್ ಕಾದಂಬರಿ ಜಮೀಲಾ, ಇವುಗಳನ್ನು ಕನ್ನಡೀಕರಿಸಿದ್ದಾರೆ. ವೈಕಂ ಕಥೆಗಳು ಕೃತಿಗೆ 1996ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ. ಕುವೆಂಪು ಭಾಷಾಭಾರತಿಗಾಗಿ ಆಫ್ರಿಕನ್ ಸಾಹಿತ್ಯವಾಚಿಕೆ ಮತ್ತು ಲೋಹಿಯಾ-ಜಗಜೀವನರಾಂ ಸಮಗ್ರ ಕೃತಿಗಳಿಗಾಗಿ ಲೇಖನಗಳ ಅನುವಾದ ಮಾಡಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಅಫ್ಘಾನಿಸ್ತಾನ | ಭೀಕರ ಅಪಘಾತ: ಹೊತ್ತಿ ಉರಿದ ಬಸ್, 17 ಮಕ್ಕಳು ಸೇರಿ 71 ಮಂದಿ ದಾರುಣ ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬಸ್...

Download Eedina App Android / iOS

X