ಭಾರತದಿಂದ ಪಾಕಿಸ್ತಾನ ಕ್ಕೆ ಫೇಸ್‌ಬುಕ್ ಗೆಳೆಯನನ್ನು ಹುಡುಕಿಕೊಂಡು ಹೋಗಿದ್ದ 34 ವರ್ಷದ ಭಾರತೀಯ ಮಹಿಳೆ ಅಂಜು ಮಂಗಳವಾರ(ಜುಲೈ 25) ತನ್ನ 29 ವರ್ಷದ ಪಾಕ್ ಸ್ನೇಹಿತ ನಸ್ರುಲ್ಲಾ ಅವರನ್ನು ವಿವಾಹವಾಗಿದ್ದಾರೆ.
ಅಂಜು ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ ತಮ್ಮ ಹೆಸರನ್ನು ಫಾತಿಮಾ ಎಂದು ಬದಲಿಸಿಕೊಂಡಿದ್ದಾರೆ. ಭಾರತೀಯ ಮಹಿಳೆ ಅಂಜು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ದೂರದ ಹಳ್ಳಿಗೆ ಕಾನೂನುಬದ್ಧವಾಗಿ ಪ್ರಯಾಣಿಸಿದ್ದರು. ನಸ್ರುಲ್ಲಾ ಮತ್ತು ಅಂಜು 2019 ರಲ್ಲಿ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದರು. ಇಬ್ಬರು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಅಪ್ಪರ್ ದಿರ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯದಲ್ಲಿ ವಿವಾಹವಾಗಿದ್ದಾರೆ.
ಮಲಕಂದ್ ವಿಭಾಗದ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ನಾಸಿರ್ ಮೆಹಮೂದ್ ಸತ್ತಿ ಅವರು ಅಂಜು ಮತ್ತು ನಸ್ರುಲ್ಲಾ ಅವರ ವಿವಾಹವನ್ನು ದೃಢಪಡಿಸಿದ್ದು, ಅಂಜು ಅವರು ಇಸ್ಲಾಂಗೆ ಮತಾಂತರಗೊಂಡ ನಂತರ ಫಾತಿಮಾ ಹೆಸರನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ವಿವಾಹದಲ್ಲಿ ನಸ್ರುಲ್ಲಾ ಅವರ ಕುಟುಂಬ ಸದಸ್ಯರು, ಪೊಲೀಸ್ ಸಿಬ್ಬಂದಿ ಮತ್ತು ವಕೀಲರು ಹಾಜರಾಗಿದ್ದರು. ಭದ್ರತಾ ಕಾರಣಗಳಿಗಾಗಿ, ಮಹಿಳೆಯನ್ನು ಪೊಲೀಸ್ ಭದ್ರತೆಯಲ್ಲಿ ಗಂಡನ ಮನೆಗೆ ಕರೆದೊಯ್ಯಲಾಗಿದೆ.
ಈ ಸುದ್ದಿ ಓದಿದ್ದೀರಾ? ‘ಮಿಸ್ಟರ್ ಮೋದಿ, ನಮ್ಮನ್ನು ಏನೆಂದು ಕರೆದರೂ ಮಣಿಪುರದಲ್ಲಿ ಶಾಂತಿ ಮರಳಿಸುತ್ತೇವೆ’: ಪ್ರಧಾನಿಗೆ ರಾಹುಲ್ ತಿರುಗೇಟು
“ಅಂಜು ನನ್ನ ಕುಟುಂಬದ ಇತರ ಮಹಿಳಾ ಸದಸ್ಯರೊಂದಿಗೆ ತನ್ನ ಮನೆಯ ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತಿದ್ದಾರೆ. ಅಂಜು ಅವರನ್ನು ಮದುವೆಯಾಗುವ ಯಾವುದೇ ಯೋಜನೆ ಇಲ್ಲ. ಅವರ ವೀಸಾ ಅವಧಿ ಮುಗಿದಾಗ ಆಗಸ್ಟ್ 20 ರಂದು ಭಾರತಕ್ಕೆ ಮರಳುತ್ತಾರೆ” ಎಂದು ನಸ್ರುಲ್ಲಾ ಹೇಳಿಕೊಂಡ ಒಂದು ದಿನದ ನಂತರ ಈ ಬೆಳವಣಿಗೆಯಾಗಿದೆ.
ನಸ್ರುಲ್ಲಾ ಅವರನ್ನು ಭೇಟಿಯಾಗಲು ಅಂಜು ಅವರು ಪಾಕಿಸ್ತಾನದ ವೀಸಾದ ಮೇಲೆ ಪಾಕ್‌ನ ಬುಡಕಟ್ಟು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಅಪ್ಪರ್ ದಿರ್ ಜಿಲ್ಲೆಗೆ ಪ್ರಯಾಣಿಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಅಂಜು ಮತ್ತು ಪಾಕ್ ಸ್ನೇಹಿತ ನಸ್ರುಲ್ಲಾ ಕೈ ಹಿಡಿದಿರುವುದನ್ನು ಮತ್ತು ರಮಣೀಯ ಪರ್ವತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದನ್ನು ತೋರಿಸಲಾಗಿದೆ.
ರಾಜಸ್ಥಾನದವರಾದ ಅಂಜು ಭಾರತದಲ್ಲಿದ್ದಾಗಲೇ ಮದುವೆಯಾಗಿದ್ದರು.ಅವರಿಗೆ 15 ವರ್ಷದ ಪುತ್ರಿ ಮತ್ತು ಆರು ವರ್ಷದ ಪುತ್ರ ಇದ್ದು, ಮೊದಲ ಪತಿಯ ಜೊತೆ ವಾಸಿಸುತ್ತಿದ್ದಾರೆ.