2015-16ರಲ್ಲಿ ನಡೆದಿದ್ದ ಟಿ20 ‘ರಾಮ್ ಸ್ಲಾಮ್ ಚಾಲೆಂಜ್’ ಕ್ರಿಕೆಟ್ ಪಂದ್ಯಾವಳಿ ವೇಳೆ ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾದ ಮೂವರು ಮಾಜಿ ಕ್ರಿಕೆಟಿಗರಾದ ಥಾಮಿ ತ್ಸೊಲೆಕಿಲೆ, ಲೋನ್‌ವಾಬೊ ತ್ಸೊಟ್ಸೊಬೆ ಮತ್ತು ಎಥಿ ಎಂಬಾಲಾಟಿ ಅವರನ್ನು ಬಂಧಿಸಲಾಗಿದೆ.
ಹಗರಣದ ಬಗ್ಗೆ ತನಿಖೆ ನಡೆಸಲಾಗಿದ್ದು, ಇತ್ತೀಚಗೆ ತನಿಖಾ ವರದಿ ಬಂದಿದೆ. ಈ ಬೆನ್ನಲ್ಲೇ, ಮೂವರು ಮಾಜಿ ಕ್ರಿಕೆಟಿಗರ ವಿರುದ್ಧವೂ ದಕ್ಷಿಣ ಆಫ್ರಿಕಾದ ‘ಭ್ರಷ್ಟ ಚಟುವಟಿಕೆಗಳ ತಡೆ ಮತ್ತು ಹೋರಾಟ ಕಾಯ್ದೆ-2004’ರ ಸೆಕ್ಷನ್ 15ರ ಅಡಿಯಲ್ಲಿ ಐದು ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಬಂಧಿಸಲಾಗಿದೆ.
2016ರಲ್ಲಿ ಮಾಜಿ ಆಟಗಾರ ಗುಲಾಮ್ ಬೋಡಿಗೆ ಸಂಬಂಧಿಸಿದಂತೆ ಕೆಲವು ಅನುಮಾನಾಸ್ಪದ ಚಟುವಟಿಕೆಗಳ ವರದಿಗಳು ಪ್ರಕಟವಾಗಿದ್ದವು. ಆ ಬಗ್ಗೆ ಗಮನಿಸಿದ್ದ ‘ಕ್ರಿಕೆಟ್ ದಕ್ಷಿಣ ಆಫ್ರಿಕಾ’ದ (CSA) ಭ್ರಷ್ಟಾಚಾರ-ವಿರೋಧಿ ಘಟಕವು ತನಿಖೆ ಆರಂಭಿಸಿತ್ತು. ಮೂರು ಸ್ಥಳೀಯ T20 ಪಂದ್ಯಗಳಿಗೆ ಸಂಬಂಧಿಸಂತೆ ಫಿಕ್ಸಿಂಗ್ ಮಾಡಲು ಅವರು ಹಲವು ಆಟಗಾರರನ್ನು ಸಂಪರ್ಕಿಸಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು.
ಹಗರಣದಲ್ಲಿ ಬೋಡಿ ಅವರೊಂದಿಗೆ ಆರೋಪಿತ ಮೂವರು ಆಟಗಾರರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಅದಕ್ಕಾಗಿ, ಉಡುಗೊರೆಯನ್ನೂ ಪಡೆದಿದ್ದಾರೆ. ತ್ಸೊಲೆಕಿಲ್ ಮತ್ತು ತ್ಸೊಟ್ಸೊಬೆ ವಿರುದ್ಧ ಐದು ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲಾಗಿದೆ. ಅವರಿಬ್ಬರೂ ಶನಿವಾರ ಪ್ರಿಟೋರಿಯಾದ ವಿಶೇಷ ವಾಣಿಜ್ಯ ಅಪರಾಧಗಳ ನ್ಯಾಯಾಲಯದ ಎದುರು ಹಾಜರಾಗಿದ್ದಾರೆ. ಇನ್ನು, ಎಥಿ ಎಂಬಾಲಾಟಿ ಅವರು ಈ ಹಿಂದೆಯೇ ನ್ಯಾಯಾಲಯದ ಎದುರು ಹಾಜರಾಗಿದ್ದರು. ಸದ್ಯ, ಮೂವರನ್ನೂ ಬಂಧಿಸಲಾಗಿದೆ.